





ಪುತ್ತೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಪುತ್ತೂರು ಮೂಲದ ತಹಸಿಲ್ದಾರ್ ಅಜಿತ್ ರೈ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಿನ್ನೆ ಬೆಳ್ಳಂಬೆಳಗ್ಗೆ ಅಜಿತ್ ರೈ ಅವರಿಗೆ ಸೇರಿದ ಮನೆ ಹಾಗೂ ಕಚೇರಿ ಸೇರಿದಂತೆ 10 ಕಡೆಗಳಲ್ಲಿ ದಾಳಿ ನಡೆಸಿ ತಡರಾತ್ರಿಯವರೆಗೂ ಪರಿಶೀಲನೆ ಮುಂದುವರೆಸಿದ್ದ ಲೋಕಾಯುಕ್ತ ಪೊಲೀಸರು ನಿನ್ನೆ ಅವರನ್ನು ವಶಕ್ಕೆ ಪಡೆದಿದ್ದಾರೆ.



ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ನಗರ ವಿಭಾಗದ ಎಸ್ಪಿ ಅಶೋಕ್ ನೇತೃತ್ವದ ತಂಡ ಬುಧವಾರ ಅಜಿತ್ ರೈಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿತ್ತು.ಸಹಕಾರ ನಗರ, ರಾಮಮೂರ್ತಿ ನಗರದಲ್ಲಿರುವ ನಿವಾಸಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಅಜಿತ್ ಮನೆಯಲ್ಲಿ ಲಕ್ಷಾಂತರ ರೂಪಾಯಿ ಹಣ ಹಾಗೂ ಮಹತ್ವದ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿತ್ತು.





ಈ ಹಿಂದೆ ಕೆ ಆರ್ ಪುರದ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅಜಿತ್, ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್ನಿಂದ ತಡೆಯಾಜ್ಞೆ ತರಲು ನೆರವು ನೀಡಿದ್ದರು ಎಂಬ ಆರೋಪದಡಿ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು.ಕೆಲ ದಿನಗಳ ಹಿಂದೆ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದ್ದರಿಂದ ಮತ್ತೆ ಕೆ ಆರ್ ಪುರ ತಹಶೀಲ್ದಾರ್ ಆಗಿ ಅಜಿತ್ ಬಂದಿದ್ದರು. ಕಳೆದ ಒಂದು ವಾರದ ಹಿಂದಷ್ಟೇ ಸ್ಥಳ ತೋರಿಸದೆ ಅಜಿತ್ ರೈ ಅವರನ್ನ ವರ್ಗಾವಣೆ ಮಾಡಲಾಗಿತ್ತು.
ನಿನ್ನೆ ಬೆಳಗ್ಗೆ ರಾಜ್ಯದ ಹಲವೆಡೆ ಭ್ರಷ್ಟಾಚಾರ ಹಾಗೂ, ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಅಡಿಯಲ್ಲಿ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.








