ಉಪ್ಪಿನಂಗಡಿ: ಸರ್ವ ಕಾಲಕ್ಕೂ ಮಕ್ಕಳು ಸಂಪತ್ತಾಗಿ ರೂಪುಗೊಳ್ಳಬೇಕಾದರೆ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವಲ್ಲಿ ಪ್ರತಿಯೊಬ್ಬರೂ ಕರ್ತವ್ಯಬದ್ಧರಾಗಬೇಕೆಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.
ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದ 2023-24 ರ ಸಾಲಿನ ಪ್ರಾರಂಭೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳಿಂದ ಆಸ್ತಿ ಮಾಡಿಸುವ, ಮಕ್ಕಳಿಗಾಗಿ ಆಸ್ತಿ ಮಾಡಿಡುವ ಮಾನಸಿಕತೆಯಿಂದ ಹೊರಬನ್ನಿ. ಮಕ್ಕಳನ್ನೇ ದೇಶದ-ಸಮಾಜದ-ಕುಟುಂಬದ ಬೆಲೆಬಾಳುವ ಆಸ್ತಿಯನ್ನಾಗಿಸುವಲ್ಲಿ ಹೆತ್ತವರು ಕಾಳಜಿ ವಹಿಸಬೇಕು. ಮಕ್ಕಳನ್ನು ಹಣ ಸಂಪಾದಿಸುವ ಯಂತ್ರವನ್ನಾಗಿಸಿದರೆ ಹೆತ್ತವರು ಇಳಿವಯಸ್ಸಿನಲ್ಲಿ ಮಕ್ಕಳಿಗೆ ಭಾರವೆನಿಸಿ ವೃದ್ಧಾಶ್ರಮ – ಅನಾಥಾಶ್ರಮದತ್ತ ಸಾಗುವ ದುಸ್ಥಿತಿ ಎದುರಾಗಬಹುದಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ನಿವೃತ್ತ ಯೋಧ ಜೆ.ಕೆ. ಪೂಜಾರಿ ಮಾತನಾಡಿ, ಮಕ್ಕಳನ್ನು ಸಂಸ್ಕಾರಯುತ ಶಿಕ್ಷಣಕ್ಕೆ ಒಳಪಡಿಸುವಲ್ಲಿ ವಿವೇಕಾನಂದ ಸಮೂಹ ಸಂಸ್ಥೆಗಳ ಪಾತ್ರ ಶ್ಲಾಘನೀಯವಾಗಿದೆ. ರಾಷ್ಟ್ರ ಭಕ್ತಿ ಬೆರೆತ ಬದುಕು ನಮ್ಮೆಲ್ಲರ ಧ್ಯೇಯವಾಗಬೇಕೆಂದರು.
ಶಿಶು ಮಂದಿರದ ಅಧ್ಯಕ್ಷ ಮನೋಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಶು ಮಂದಿರದ ಉಪಾಧ್ಯಕ್ಷೆ ಸುಜಾತ ಕೃಷ್ಣ ಆಚಾರ್ಯ, ಕಾರ್ಯಕ್ರಮಗಳ ಸಂಚಾಲಕ ಕಂಗ್ವೆ ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಶು ಮಂದಿರದ ಗೌರವಾಧ್ಯಕ್ಷ ಯು. ರಾಮ , ಕೋಶಾಧಿಕಾರಿ ಕೆ. ಜಗದೀಶ್ ಶೆಟ್ಟಿ, ಸದಸ್ಯರಾದ ಯು. ರಾಜೇಶ್ ಪೈ, ಅನೂಪ್ ಸಿಂಗ್, ಜೊತೆಕಾರ್ಯದರ್ಶಿ ಹರಿರಾಮಚಂದ್ರ, ಶ್ರೀರಾಮ ಶಾಲಾ ಸಂಚಾಲಕ ಯು.ಜಿ. ರಾಧ, ನಂದಗೋಕುಲ ಶಿಶು ಮಂದಿರದ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಮತ್ತಿತರರು ಭಾಗವಹಿಸಿದ್ದರು.
ವೇದಮೂರ್ತಿ ಶ್ರೀಕಾಂತ್ ಭಟ್ ರವರ ಪೌರೋಹಿತ್ಯದಲ್ಲಿ ಗಣ ಹೋಮ ನಡೆಯಿತು. ಶಿಶು ಮಂದಿರದ ಕಾರ್ಯದರ್ಶಿ ಯು.ಎಲ್. ಉದಯ ಕುಮಾರ್ ಸ್ವಾಗತಿಸಿದರು. ಜೊತೆಕಾರ್ಯದರ್ಶಿ ಹರಿರಾಮಚಂದ್ರ ವಂದಿಸಿದರು. ಶಿಶು ಮಂದಿರದ ಮುಖ್ಯ ಮಾತಾಜಿ ಚೈತ್ರ, ಮಾತಾಜಿ ಕಾಂತಿಮಣಿ, ಸಹಾಯಕ ಮಾತಾಜಿ ಚಂದ್ರಾವತಿ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿದರು.