ಸವಣೂರು: ಉಪನ್ಯಾಸಕಿಯೋರ್ವರು ಕಾಲೇಜು ವಿದ್ಯಾರ್ಥಿ ವಿರುದ್ಧ ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಧರಣಿ ನಡೆಸಿದ ಘಟನೆ ಸೋಮವಾರ ಬೆಳ್ಳಾರೆ ಸಮೀಪದ ಪೆರುವಾಜೆ ಸರಕಾರಿ ಕಾಲೇಜಿನಲ್ಲಿ ನಡೆದಿದೆ.
ಪೆರುವಾಜೆ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕಿ ಸುನಿತಾ ಎಂಬವರು ಎಂ.ಕಾಂ. ವಿದ್ಯಾರ್ಥಿ ದೀಕ್ಷೀತ್ ಎಂಬಾತನ ವಿರುದ್ಧ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದನ್ನು ಖಂಡಿಸಿ ಸೋಮವಾರ ತರಗತಿ ಬಹಿಷ್ಕರಿಸಿ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ದ್ವಾರದ ಬಳಿ ಧರಣಿ ನಡೆಸಿ ಉಪನ್ಯಾಸಕಿ ವಿರುದ್ಧ ಘೋಷಣೆ ಕೂಗಿ, ಮೇಲಾಧಿಕಾರಿಗಳು ಬರುವಂತೆ ಪಟ್ಟು ಹಿಡಿದರು. ಮೇಲಾಧಿಕಾರಿಗಳು ಬಂದು ಕ್ರಮ ಕೈಗೊಳ್ಳುವವರೆಗೆ ಅನಿರ್ದಿಷ್ಟಾವಧಿ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ವಿದ್ಯಾರ್ಥಿಗಳು ಕಾಲೇಜು ಪ್ರಾಂಶುಪಾಲರಿಗೂ ಮನವಿ ಸಲ್ಲಿಸಿದ್ದಾರೆ ಎಂದು ವಿದ್ಯಾರ್ಥಿ ಪ್ರಮುಖರು ತಿಳಿಸಿದ್ದಾರೆ. ಕೆಲ ವಿದ್ಯಾರ್ಥಿಗಳು ತರಗತಿ ಪರೀಕ್ಷೆಯನ್ನೂ ಬಹಿಷ್ಕರಿಸಿ ಧರಣಿಯಲ್ಲಿ ಭಾಗವಹಿಸಿದ್ದರು
ಜೆಡಿ ಭೇಟಿ; ಪ್ರತಿಭಟನೆ ತಾತ್ಕಾಲಿಕ ಹಿಂತೆಗೆತ
ಕಾಲೇಜಿನಲ್ಲಿ ನಡೆಯುತ್ತಿರುವ ಘಟನೆಯ ಮಾಹಿತಿ ಅರಿತ ಮಂಗಳೂರು ವಿಶ್ವವಿದ್ಯಾಲಯದ ಜಂಟಿ ನಿರ್ದೇಶಕ ರಾಮೇಗೌಡ ಅವರು ಸೋಮವಾರ ಸಂಜೆ ವೇಳೆಗೆ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳ ಜೊತೆ ಸಭೆ ನಡೆಸಿ ಮಾತುಕತೆ ನಡೆಸಿದರು. ಒಂದು ವಾರದಲ್ಲಿ ಉಪನ್ಯಾಸಕಿ ವಿರುದ್ಧ ಕ್ರಮದ ಭರವಸೆ ನೀಡಿದರು. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಧರಣಿ ಹಿಂತೆಗೆದುಕೊಂಡರು. ಜಂಟಿನಿರ್ದೇಶಕರ ವಿಶೇಷ ಅಧಿಕಾರಿ ದೇವಿಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು.