ಪುತ್ತೂರು: ಆ.22ರಂದು ಮಧ್ಯಾಹ್ನ ಬಡಗನ್ನೂರು ಗ್ರಾಮದ ನೇರೋಳ್ತಡ್ಕ ಎಂಬಲ್ಲಿ ಮಹಿಳೆಯರಿಬ್ಬರಿಗೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚಿನ್ನಾಭರಣ ದರೋಡೆ, ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಬಡಗನ್ನೂರು ಗ್ರಾಮದ ನೇರೋಳ್ತಡ್ಕ ನಿವಾಸಿ ಸುರೇಖಾ ಮತ್ತು ಅವರ ಕೆಲಸದಾಕೆ ಗಿರಿಜಾ ಅವರು ಹಲ್ಲೆಗೊಳಗಾಗಿ ಅಸ್ವಸ್ಥಗೊಂಡವರು. ಅವರಿಗೆ ಸುರೇಖಾ ಅವರ ಮನೆಗೆ ಕೆಲವೊಮ್ಮೆ ಕೆಲಸಕ್ಕೆಂದು ಬರುತ್ತಿದ್ದ ಸುರೇಶ್ ನಾಯ್ಕ ಎಂಬವರು ಮನೆಯಲ್ಲಿನ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ಸುರೇಖಾ ಮತ್ತು ಕೆಲಸದಾಕೆ ಗಿರಿಜಾ ಅವರಿಗೆ ಹಲ್ಲೆ ನಡೆಸಿದ್ದಾರೆ. ಘಟನೆ ಕುರಿತು ಸುರೇಖಾ ಅವರ ಅಕ್ಕನ ಮಗ ರವಿಚಂದ್ರ ಎಂಬವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ದರೋಡೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರವಿಚಂದ್ರ ಅವರು ಚಿಕ್ಕಮ್ಮ ಸುರೇಖಾ ಅವರನ್ನು ನೋಡಿಕೊಂಡು ಅವರೊಟ್ಟಿಗೆ ವಾಸವಾಗಿದ್ದರು. ಆ.22ರಂದು ರವಿಚಂದ್ರ ಅವರು ಬೆಳಿಗ್ಗೆ ಕೆಲಸಕ್ಕೆ ಹೋಗಿ ಮಧ್ಯಾಹ್ನ ಮನೆಗೆ ಹಿಂದಿರುಗಿದಾಗ ಚಿಕ್ಕಮ್ಮ ಮನೆಯಲ್ಲಿ ಕಾಣದಿದ್ದಾಗ ಪಕ್ಕದ ಮನೆಯ ಗಂಗಾಧರ ಎಂಬವರು ತಿಳಿಸಿದಂತೆ ತೋಟದಲ್ಲಿ ಚಿಕ್ಕಮ್ಮ ಮತ್ತು ಕೆಲಸದಾಕೆ ಗಿರಿಜಾ ಅವರು ಅಸ್ವಸ್ಥಗೊಂಡು ಬಿದ್ದುಕೊಂಡಿರುವುದು ಬೆಳಕಿಗೆ ಬಂದಿತ್ತು. ಗಿರಿಜಾ ಅವರ ಕುತ್ತಿಗೆಗೆ ಬೈರಾಸ್ನಿಂದ ಕುತ್ತಿಗೆಯನ್ನು ಬಿಗಿಯಾಗಿ ಕಟ್ಟಲಾಗಿತ್ತು ಮತ್ತು ಅವರಿಬ್ಬರ ಕಣ್ಣುಗಳಿಗೆ, ಮುಖಕ್ಕೆ ಗುದ್ದಿದ ಗಾಯವಾಗಿತ್ತು. ಗಿರಿಜಾ ಅವರ ಎಡ ಕಿವಿ ಹರಿದು ಹೋಗಿತ್ತು. ಈ ಕುರಿತು ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ ಬಳಿಕ ವಿಚಾರಿಸಿದಾಗ ಮನೆಯ ಕೆಲಸಕ್ಕೆ ಆಗಾಗ ಬರುತ್ತಿದ್ದ ಸುರೇಶ್ ನಾಯ್ಕ ಎಂಬವರು ಮನೆಯಲ್ಲಿದ್ದ ಚಿನ್ನಾಭರಣಗಳ ವಿಚಾರಿಸಿ ಕೊಲೆ ಮಾಡಲು ಪ್ರಯತ್ನಿಸಿರುವ ಕುರಿತು ಸುರೇಖಾ ಅವರು ತಿಳಿಸಿದ್ದಾರೆ. ಅದರಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.