ಸೆ.10: ಜ್ಯೋತಿಷಿ ಮಾಡಾವು ವೆಂಕಟರಮಣ ಭಟ್ಟರಿಗೆ ಸಂಪ್ರತಿಷ್ಠಾನದ ಶಾಸ್ತ್ರವಿದ್ವತ್ ಪ್ರಶಸ್ತಿ ಪ್ರದಾನ

0

ಪುತ್ತೂರು: ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನದ ಮೂವತ್ತನೇಯ ವಾರ್ಷಿಕೋತ್ಸವದ ಅಂಗವಾಗಿ ಕೊಡಮಾಡುವ ಸಂಪ್ರತಿಷ್ಠಾನದ ಶಾಸ್ತ್ರವಿದ್ವತ್ ಪ್ರಶಸ್ತಿಗೆ ಜ್ಯೋತಿಷಿ ವಿದ್ವಾನ್ ಮಾಡಾವು ವೆಂಕಟರಮಣ ಭಟ್‌ರವರನ್ನು ಆಯ್ಕೆ ಮಾಡಲಾಗಿದೆ. ಸಂಪ್ರತಿಷ್ಠಾನದ ವಾರ್ಷಿಕೋತ್ಸವ ಮತ್ತು ಗ್ರಂಥ ಅನಾವರಣ, ಸಂಸ್ಕೃತ ಪ್ರತಿಭಾಪುರಸ್ಕಾರ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೆ. 10ರಂದು ಪೋಳ್ಯ ಶ್ರೀಲಕ್ಷ್ಮೀವೆಂಕಟರಮಣ ಮಠದಲ್ಲಿ ನಡೆಯಲಿದೆ.

ಜ್ಯೋತಿಷ್ಯ ಪರಂಪರೆಯ ಚೌರ್ಕಾಡು ಮನೆತನದ ದಿ. ಗಣಪತಿ ಭಟ್ಟ ಮತ್ತು ದಿ. ಸಾವಿತ್ರೀ ಇವರ ಪುತ್ರರಾಗಿರುವ ವೆಂಕಟರಮಣ ಭಟ್ಟರು 1950 ರಂದು ಜನಿಸಿದ್ದಾರೆ. ಜ್ಯೋತಿಷ್ಯ ವಿದ್ವಾಂಸರಾಗಿದ್ದ ಪಯ್ಯನ್ನೂರು ಶೇಖರನ್ ನಾಯರ್ ಹಾಗೂ ಜ್ಯೋತಿಷ್ಯ ಹಾಗೂ ವಾಸ್ತುಶಿಲ್ಪಶಾಸ್ತ್ರವನ್ನು ಬಲ್ಲವರಾಗಿದ್ದ ಮುನಿಯಂಗಳ ಕೃಷ್ಣ ಭಟ್ಟರಲ್ಲಿ ಜ್ಯೋತಿಷ್ಯ ಅಧ್ಯಯನ ಮಾಡಿದ್ದಾರೆ. ಅನೇಕ ದೇವಾಲಯಗಳ ಸ್ವರ್ಣಪ್ರಶ್ನೆ, ಅಷ್ಟಮಂಗಲ ಪ್ರಶ್ನೆಯನ್ನಿಟ್ಟು ಆ ಸ್ಥಳದ ಜೀರ್ಣೋದ್ದಾರಕ್ಕೆ ಕಾರಣಿಭೂತರಾಗಿದ್ದಾರೆ. ಶ್ರೀ ರಾಮಚಂದ್ರಾಪುರ ಮಠದ ಶ್ರೀ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ನಿಕಟ ಸಂಪರ್ಕದಲ್ಲಿದ್ದು ಕಳೆದ 45ಕ್ಕೂ ಅಧಿಕ ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ ಮಾಡಾವು ಜೋಯಿಸರೆಂದೇ ಪ್ರಸಿದ್ಧರಾಗಿದ್ದಾರೆ. ವೈದಿಕ-ಜ್ಯೋತಿಷ್ಯ ಪರಂಪರೆ ಮುಂದುವರಿಯಬೇಕೆಂಬ ದೃಷ್ಟಿಯಿಂದ 23ಕ್ಕೂ ಅಧಿಕ ಮಂದಿ ಇವರ ಶಿಷ್ಯತ್ವವನ್ನು ಪಡೆದು ಜ್ಯೋತಿಷವನ್ನು ಇವರಿಂದ ಅಧ್ಯಯನ ಮಾಡಿದ್ದಾರೆ. ಕಳೆದ ವರ್ಷದಿಂದ ವಸಂತಕಾಲದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವೇದವಿದ್ಯಾಭ್ಯಾಸವನ್ನು ತಮ್ಮ ಮನೆಯಲ್ಲಿಯೇ ಕೊಡುತ್ತಿದ್ದಾರೆ.

ಕಾಸರಗೋಡು ಸಮೀಪದ ಎಡನಾಡು ಗೋವಿಂದ ಭಟ್ಟರ ಪುತ್ರಿ ಅಂಬಿಕಾರೊಡನೆ 1981 ರಲ್ಲಿ ವಿವಾಹ. ಮೂವರು ಮಕ್ಕಳು, ಮಗ ವೇ.ಬ್ರ. ಗಣೇಶ ಭಟ್ಟರು ವೇದಾಧ್ಯಯ ಹಾಗೂ ಜ್ಯೋತಿಷ್ಯವನ್ನು ಅಭ್ಯಸಿಸಿ ವೈಧಿಕ ಮತ್ತು ಜ್ಯೋತಿಷ್ಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸವಿತಾ ಹಾಗೂ ಪವಿತ್ರಾ ಇಬ್ಬರು ಮಗಳಂದಿರಿಗೆ ವಿವಾಹವಾಗಿ ಸಂಸಾರ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here