




ಜೀವನ ಪಾಠ ಕಲಿಸುವ ಏಕೈಕ ಕಲೆ ಯಕ್ಷಗಾನ. ನಮ್ಮ ಮಣ್ಣಿನಲ್ಲೇ ಯಕ್ಷಗಾನದ ಗಂಧ ಪಸರಿಸಿದೆ ಮತ್ತು ಸಾಂಸ್ಕೃತಿಕವಾಗಿ ತುಂಬಾ ಗಟ್ಟಿಯಾಗಿದೆ ಎಂಬುದಾಗಿ ಹಿರಿಯ ಯಕ್ಷಗಾನ ಗುರು ಗೋವಿಂದ ನಾಯಕ್ ಪಾಲೆಚ್ಚಾರು ಹೇಳಿದರು. ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2023-24ನೇ ಸಾಲಿನ ಯಕ್ಷಗಾನ ಕಲಾ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.




ಮುಖ್ಯ ಅತಿಥಿಗಳಾಗಿ ಕಾಲೇಜಿನ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಸತ್ಯನಾರಾಯಣ ಅಡಿಗ ಆಗಮಿಸಿ ಯಕ್ಷಗಾನ ಸಂಘದ ಎಲ್ಲ ಚಟುವಟಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು. ಯಕ್ಷಗಾನ ನಾಟ್ಯ ಗುರುಗಳಾದ ಬಾಲಕೃಷ್ಣ ಉಡ್ಡಂಗಳ ಉಪಸ್ಥಿತರಿದ್ದು, ವಿದ್ಯಾರ್ಥಿಗಳು ಯಕ್ಷಗಾನವನ್ನು ಪ್ರೀತಿಸಿ ಮನಃ ಪೂರ್ವಕವಾಗಿ ಕಲಿತರೆ ಯಕ್ಷಗಾನವು ನಮ್ಮನ್ನು ಬೆಳೆಸುತ್ತದೆ ಎಂಬುದಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಶುಂಪಾಲರಾದ ಡಾ.ವರದರಾಜ ಚಂದ್ರಗಿರಿ ವಹಿಸಿ ಯಕ್ಷಗಾನವು ಮಾತುಗಾರಿಕೆ ಪರಿಣಾಮಕಾರಿ ಸಂವಹನ ಕಲೆ, ಧೈರ್ಯ, ಸಭಾಕಂಪನ ನಿವಾರಣೆ, ಗ್ರಹಿಸುವ ಶಕ್ತಿ ಮಾತ್ರವಲ್ಲದೆ ಮನುಷ್ಯನ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ 2022-23ನೇ ಸಾಲಿನಲ್ಲಿ ಯಕ್ಷಗಾನ ನಾಟ್ಯ ತರಬೇತಿ ಹೊಂದಿದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಗಳನ್ನು ಗೋವಿಂದ ನಾಯಕ್ ಪಾಲೆಚ್ಚಾರು ರವರು ವಿತರಿಸಿದರು. ಐಕ್ಯೂಎಸಿ ಸಂಚಾಲಕ ಡಾ.ಕಾಂತೇಶ್ ಎಸ್ ವೇದಿಯಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ಕಲಾ ಸಂಘದ ಸಂಚಾಲಕ ರಾಮ ಕೆ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಕು. ಸಮನ್ವಿ, ಕು. ಶ್ರಾವ್ಯ, ಕು. ಸ್ವಾತಿ, ಪ್ರಾರ್ಥಿಸಿದರು. ಕು. ಅನನ್ಯ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಸಮನ್ವಿ ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಭಾಗವತರಾದ ಗೋವಿಂದ ನಾಯಕ್ ಪಾಲೆಚ್ಚಾರು ಯಕ್ಷಗಾನದ ಹಾಡಿನೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹೀಮ್ಮೇಳದಲ್ಲಿ ಸತ್ಯನಾರಾಯಣ ಅಡಿಗ ಚೆಂಡೆ ವಾದನ ಹಾಗೂ ಪವನ್ ತೃತೀಯ ಬಿ. ಬಿ. ಎ ಮದ್ದಳೆ ವಾದನದಲ್ಲಿ ಸಹಕರಿಸಿದರು. ಕಾಲೇಜಿನ ಆಡಿಟೋರಿಯಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.














