ರಾಮಕುಂಜ: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆತೂರಿನಲ್ಲಿ ನಿರ್ಮಾಣಗೊಳ್ಳಲಿರುವ ಮದುವೆ ಹಾಲ್, ವಸತಿಸಮುಚ್ಚಯ ಪ್ರೈಮ್ ಪ್ರಾಪರ್ಟಿಸ್ ಇದರ ಕಚೇರಿ ಆತೂರು ಜೆ.ಎಂ.ಬಿಲ್ಡಿಂಗ್‌ನಲ್ಲಿ ಸೆ.8ರಂದು ಬೆಳಿಗ್ಗೆ ನಡೆಯಿತು.
ಆತೂರು ಮಸೀದಿ ಖತೀಬರಾದ ಸಯ್ಯದ್ ಜುನೈದ್ ಜಿಫ್ರಿ ತಂಙಳ್‌ರವರು ದು:ವಾಶೀರ್ವಚನ ನೀಡಿದರು. ಪುತ್ತೂರಿನ ನ್ಯಾಯವಾದಿ ನರಸಿಂಹ ಪ್ರಸಾದ್ ಅವರು ಕಚೇರಿ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಆತೂರಿನಂತಹ ಸಣ್ಣ ನಗರದಲ್ಲಿ ನಝೀರ್ ಹಾಗೂ ಅವರ ಸಹೋದರರೂ ದೊಡ್ಡ ಪ್ರಾಜೆಕ್ಟ್ ಆರಂಭಿಸಲು ಮುಂದಾಗಿದ್ದಾರೆ. ಈ ಮೂಲಕ ಹುಟ್ಟೂರಿನಲ್ಲಿ ಉತ್ತಮ ಯೋಜನೆಯೊಂದನ್ನು ಆರಂಭಿಸಿದ್ದಾರೆ. ಇದರಲ್ಲಿನ ಸವಲತ್ತುಗಳು ಗ್ರಾಮೀಣ ಭಾಗದ ಜನರಿಗೆ ಕೈಗೆಟಕುವ ರೀತಿಯಲ್ಲಿ ಇರಲಿ. ಈ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು.
ಆತೂರು ಎಂ.ಜೆ.ಎಂ.ಕಾರ್ಯದರ್ಶಿ ಫಲೂಲುದ್ದೀನ್ ಹೇಂತಾರ್ ಮಾತನಾಡಿ, ಆತೂರಿನ ಅಭಿವೃದ್ಧಿಯ ಕನಸ್ಸಿನೊಂದಿಗೆ ಆರಂಭಗೊಳ್ಳಲಿರುವ ಪ್ರೈಮ್ ಪ್ರಾಪರ್ಟಿಸ್ ಸಂಸ್ಥೆ ಊರಿನ ಜನರ ಪ್ರೀತಿ, ವಿಶ್ವಾಸದೊಂದಿಗೆ ಬೆಳೆಯಲಿ. ಈ ಸಂಸ್ಥೆಯಿಂದ ಉತ್ತಮ ಸೇವೆ ಸಿಗಲಿ ಎಂದರು. ಕಡಬ ತಾಲೂಕು ವಾಲಿಬಾಲ್ ಎಸೋಸಿಯೇಷನ್ ಅಧ್ಯಕ್ಷ ಲಕ್ಷ್ಮೀನಾರಾಯಣ ರಾವ್ ಆತೂರು ಮಾತನಾಡಿ, ಈ ಹಿಂದೆ ಆತೂರಿನಲ್ಲಿ ಒಂದೆರಡು ಸಣ್ಣಪುಟ್ಟ ಅಂಗಡಿ ಹೊರತುಪಡಿಸಿ ಯಾವುದೇ ಸವಲತ್ತು ಇರಲಿಲ್ಲ. ಈಗ ಆತೂರು ಪಟ್ಟಣ ಬೆಳೆದಿದ್ದು ಕಾಲ ಬದಲಾದಂತೆ ಬದಲಾವಣೆಯೂ ಆಗಿದೆ. ನಝೀರ್ ಹಾಗೂ ಸಹೋದರರು ವಿದೇಶದಲ್ಲಿ ಉದ್ಯೋಗದಲ್ಲಿದ್ದರೂ ಹುಟ್ಟೂರಿಗೆ ಕೊಡುಗೆ ನೀಡುವ ಕೆಲಸಕ್ಕೆ ಮುಂದಾಗಿರುವುದು ಹೆಮ್ಮೆಯ ವಿಚಾರ ಎಂದರು. ರಾಮಕುಂಜ ಗ್ರಾ.ಪಂ.ಉಪಾಧ್ಯಕ್ಷ ಕೇಶವ ಗಾಂಧಿಪೇಟೆ ಮಾತನಾಡಿ, ಆತೂರು ಪರಿಸರದಲ್ಲಿ ಆರಂಭಗೊಂಡಿರುವ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹೇಳಿ ಶುಭಹಾರೈಸಿದರು.
ಆತೂರು ಬಿ.ಜೆ.ಎಂ.ನ ಮಾಜಿ ಅಧ್ಯಕ್ಷ ಮಹಮ್ಮದ್ ಕೆ.ಟಿ.ಸಿ., ಕೋಡಿಂಬಾಡಿ ಜುಮಾ ಮಸೀದಿ ಅಧ್ಯಕ್ಷ ಯು.ಕೆ.ಉಮ್ಮರ್, ಆತೂರು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಹಮ್ಮದ್ ಕುಂಞಿ, ಆತೂರು ಬದ್ರಿಯಾ ಸ್ಕೂಲ್‌ನ ಅಧ್ಯಕ್ಷ ಆದಂ ಹಾಜಿ ಪಿ., ಉಪಾಧ್ಯಕ್ಷ ಎನ್.ಪೊಡಿಕುಂಞಿ ನೀರಾಜೆ, ಆತೂರು ರೇಂಜ್ ಮದ್ರಸ ಮೇನೇಜ್‌ಮೆಂಟ್ ಕಾರ್ಯದರ್ಶಿ ಮಹಮ್ಮದ್ ರಫೀಕ್ ಗಂಡಿಬಾಗಿಲು, ರಾಮಕುಂಜ ಶ್ರೀದೇವಿ ಬೋರ್‌ವೆಲ್ಸ್‌ನ ದೇವಿಪ್ರಸಾದ್, ಜಂ ಇಯ್ಯತುಲ್ ಫಲಾಹ್‌ನ ಅಬ್ದುಲ್ ಅಝೀಝ್ ಕಿಡ್ಸ್, ಅಬೂಬಕ್ಕರ್ ಹೇಂತರ್, ಇಸ್ಮಾಯಿಲ್ ಹೇಂತಾರು ಮತ್ತಿತರರ ಉಪಸ್ಥಿತರಿದ್ದರು.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್ ಕೆ.,ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು. ಪತ್ರಕರ್ತ ನಝೀರ್ ಕೊಯಿಲ ಸ್ವಾಗತಿಸಿ, ಆತೂರು ದಿಲ್‌ಫರ್ ಮೆಡಿಕಲ್‌ನ ದಿಲ್‌ಫರ್ ಫಾರೂಕ್ ವಂದಿಸಿದರು. ರಫೀಕ್ ಗೋಳಿತ್ತಡಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪಾಲುದಾರರಾದ ನಸೀಬ್, ಇಬ್ರಾಹಿಂ ಹೇಂತಾರ್, ನಝೀರ್, ಅಬೂಬಕ್ಕರ್, ಇಸ್ಮಾಯಿಲ್ ಹೇಂತಾರು, ಅನ್ವರ್ ಸಾದತ್‌ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಅಬ್ದುಲ್ ಲತೀಫ್ ಅಮೈ, ರತನ್ ಭಂಡಾರಿ ಕೆದಿಲ ಮತ್ತಿತರರು ಸಹಕರಿಸಿದರು.
“ಆತೂರಿನಲ್ಲಿರುವ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖಾ ಕಟ್ಟಡಕ್ಕೆ ಹೊಂದಿಕೊಂಡಿರುವ ಸುಮಾರು 3 ಎಕ್ರೆ ಜಾಗದಲ್ಲಿ ಪ್ರೈಮ್ ಪಾಪರ್ಟಿಸ್‌ನ ಮದುವೆ ಹಾಲ್, ವಸತಿ ಸಮುಚ್ಚಯ ನಿರ್ಮಾಣಗೊಳ್ಳಲಿದೆ. ಇಲ್ಲಿ ಸಿಎನ್‌ಜಿ ಗ್ಯಾಸ್ ಸೇವೆಯೂ ಗ್ರಾಹಕರಿಗೆ ಸಿಗಲಿದೆ. ಅತೀ ಶೀಘ್ರದಲ್ಲಿ ಈ ಯೋಜನೆ ಆರಂಭಗೊಳ್ಳಲಿದೆ ಎಂದು ಪಾಲುದಾರರು ತಿಳಿಸಿದ್ದಾರೆ.”