ಕಿಲ್ಲೆ ಮೈದಾನದ 66ನೇ ವರ್ಷದ ಮಹಾಗಣೇಶೋತ್ಸವದ ಉದ್ಘಾಟನಾ ಕಾರ್ಯಕ್ರಮ

0

ಶಾಂತಿ ಸೌಹಾರ್ದತೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ-ಶಕುಂತಳಾ ಶೆಟ್ಟಿ


ಪುತ್ತೂರು:ಪುತ್ತೂರು ಕಿಲ್ಲೆ ಮೈದಾನದಲ್ಲಿ ಸರ್ವಜಾತಿ ಧರ್ಮ ಪಕ್ಷದವರು ಒಟ್ಟಾಗಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಮಹಾಗಣೇಶೋತ್ಸವ ಬಹುಶಃ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿದೆ.ಇಂತಹ ಸೌಹಾರ್ದತೆಯ ಸಂಕೇತವಾಗಿ ಆಚರಿಸಿಕೊಂಡು ಬರುತ್ತಿರುವ ಈ ಮಹಾಗಣಪತಿ ಉತ್ಸವ ವರ್ಷದಿಂದ ವರ್ಷಕ್ಕೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಅವರು ಹೇಳಿದರು.


ಶ್ರೀ ದೇವತಾ ಸಮಿತಿ ಪುತ್ತೂರು ಇದರ ಆಶಯದಲ್ಲಿ ಪುತ್ತೂರು ಕಿಲ್ಲೆ ಮೈದಾನದಲ್ಲಿ 66ನೇ ವರ್ಷದ ಶ್ರೀ ಮಹಾ ಗಣೇಶೋತ್ಸವದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಮಲ್ಯರವರ ನಿಧನದ ಬಳಿಕ ಕಿಲ್ಲೆ ಮೈದಾನದ ಗಣೇಶೋತ್ಸವದ ನೇತೃತ್ವವನ್ನು ವಹಿಸಿಕೊಂಡಿದ್ದ ನೆಲ್ಲಿಕಟ್ಟೆ ಸುಧಾಕರ್ ಶೆಟ್ಟಿ ಅವರು ಕಳೆದ 44 ವರ್ಷಗಳಿಂದ ನೇತೃತ್ವ ವಹಿಸಿ ಸರ್ವರನ್ನು ಒಗ್ಗೂಡಿಸಿಕೊಂಡು ಬಹಳ ವಿಜ್ರಂಭಣೆಯಿಂದ ಅದ್ದೂರಿಯಾಗಿ ಮಹಾ ಗಣಪತಿ ಉತ್ಸವವನ್ನು ಆಚರಿಸಿಕೊಂಡು ಬರುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.ಕೆಲ ದಿನಗಳ ಹಿಂದೆ ಅವರು ವಿಧಿ ವಶರಾಗಿದ್ದು, ಮುಂದೆ ಈ ಗಣೇಶೋತ್ಸವದ ನೇತೃತ್ವವನ್ನು ವಹಿಸಿಕೊಳ್ಳುವವರು ಈ ಕಾರಣಿಕ ಗಣೇಶೋತ್ಸವವನ್ನು ಮತ್ತಷ್ಟು ಯಶಸ್ಸಿನೆಡೆಗೆ ಕೊಂಡೊಯ್ಯುವ ಮೂಲಕ ಸುಧಾಕರ ಶೆಟ್ಟಿಯವರ ಅಗಲುವಿಕೆಯ ವೇದನೆ ನಿವಾರಣೆಯಾಗುವಂತಾಗಬೇಕೆಂದರು.


ಮಾಜಿ ಪುರಸಭಾ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಅವರು ಮಾತನಾಡಿ, ಪುತ್ತೂರುನಲ್ಲಿ 66 ವರ್ಷಗಳ ಹಿಂದೆ ಮಲ್ಯರವರು ನೆಲ್ಲಿಕಟ್ಟೆ ಎಲಿಮೆಂಟರಿ ಶಾಲೆಯಲ್ಲಿ ಗಣೇಶೋತ್ಸವವನ್ನು ಪ್ರಾರಂಭಿಸಿ, ಬಹಳಷ್ಟು ಕಷ್ಟಕಾಲದಲ್ಲಿಯೂ ಸಂಪ್ರದಾಯದ ಪ್ರಕಾರ ಗಣೇಶೋತ್ಸವ ನಡೆಸಿಕೊಂಡು ಬಂದಿದ್ದರು.ಅವರ ಬಳಿಕ ಓರ್ವ ನಿಷ್ಠಾವಂತ, ಪ್ರಾಮಾಣಿಕ ವ್ಯಕ್ತಿ ನೆಲ್ಲಿಕಟ್ಟೆ ಸುಧಾಕರ್ ಶೆಟ್ಟಿಯವರ ಕೈಗೆ ಈ ಗಣೇಶೋತ್ಸವದ ನೇತೃತ್ವವನ್ನು ವಹಿಸಲಾಯಿತು.ಆರಂಭದ ಸಮಯದಲ್ಲಿ ಗಣೇಶೋತ್ಸವ ನಡೆಸಲು ಹಣದ ಅಡಚಣೆ ಇದ್ದರೂ ಸುಧಾಕರ್ ಶೆಟ್ಟಿಯವರು ಎಲ್ಲರನ್ನೂ ಸೇರಿಸಿಕೊಂಡು ಬಹಳ ಕಷ್ಟದಲ್ಲಿ ಗಣೇಶೋತ್ಸವವನ್ನು ಯಶಸ್ವಿಯಾಗಿ ಆಚರಿಸಿಕೊಂಡು ಬಂದಿದ್ದು ಕಳೆದ ಕೆಲವು ವರ್ಷಗಳಿಂದ ಬಹಳ ವಿಜ್ರಂಭಣೆಯಿಂದ ಅದ್ದೂರಿಯಾಗಿ ನಡೆಯುತ್ತಿದೆ ಎಂದರು.


ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟುರವರು ಮಾತನಾಡಿ ಕಿಲ್ಲೆಮೈದಾನದ ಮಹಾ ಗಣೇಶೋತ್ಸವದ ರೂವಾರಿ ಸುಧಾಕರ್ ಶೆಟ್ಟಿ ಅವರು ಇದೀಗ ನಮ್ಮನ್ನಗಲಿದ್ದಾರೆ.ಅವರು ನಮ್ಮೊಡನೆ ಇಲ್ಲದಿದ್ದರೂ ಅವರ ಪ್ರಾಮಾಣಿಕತೆ ನಿಷ್ಠೆ ಸ್ಪೂರ್ತಿದಾಯಕ.ಎಲ್ಲರೊಂದಿಗೆ ಅನ್ಯೋನ್ಯತೆ, ಜಾತಿ ಮತ ಭೇದವಿಲ್ಲದೆ ಎಲ್ಲರೊಂದಿಗಿದ್ದ ಅವರ ಪ್ರೀತಿ ವಿಶ್ವಾಸ ಮುಂದಿನ ದಿನಗಳಲ್ಲಿ ಗಣೇಶೋತ್ಸವದ ಯಶಸ್ಸಿಗೆ ನಾಂದಿಯಾಗಲಿದೆ ಎಂದು ಹೇಳಿದರು.


ಕಾರ್ಯಕ್ರಮ ನಿರ್ವಹಿಸಿ ಮಾತನಾಡಿದ ಡಾ|ರಾಜೇಶ್ ಬೆಜ್ಜಂಗಳರವರು ಮಾತನಾಡಿ ಸುಧಾಕರ್ ಶೆಟ್ಟಿ ಅವರ ಸಮರ್ಥ ನಾಯಕತ್ವದ ಮೂಲಕ ಎಲ್ಲಾ ವರ್ಗದ ಜನರ ಪ್ರೀತಿ ವಿಶ್ವಾಸ ಗಳಿಸಿ ಕಿಲ್ಲೆ ಮೈದಾನದ ಮಹಾಗಣಪತಿ ಉತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಬರಲು ಸಹಕಾರಿಯಾಗಿದೆ ಎಂದು ಹೇಳಿದರಲ್ಲದೆ ಸುಧಾಕರ ಶೆಟ್ಟಿಯವರನ್ನು ಕಳೆದುಕೊಂಡ ದುಃಖದ ನಡುವೆಯೂ ನಾವು ಈ ಕಾರ್ಯಕ್ರಮ ಆಯೋಜಿಸಿದ್ದೇವೆ.ಅವರ ಆಶಯದಂತೆ ಈ ಮಹಾಗಣೇಶೋತ್ಸವ ಯಶಸ್ವಿಯಾಗಿ ಮುನ್ನಡೆಯಲಿದೆ ಎಂದು ಹೇಳಿದರು.
ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ದೇವತಾ ಸಮಿತಿಯ ಹಿರಿಯ ಸದಸ್ಯ ಬಿ.ಕಿಟ್ಟಣ್ಣ ಗೌಡ ಬಪ್ಪಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಸುರೇಶ್ ಶೆಟ್ಟಿ ಸ್ವಾಗತಿಸಿದರು.ಶ್ರೀ ದೇವತಾ ಸಮಿತಿಯ ಪದಾಧಿಕಾರಿಗಳಾದ ದಿನೇಶ್ ಪಿ.ವಿ., ಸುದೇಶ್ ಕುಮಾರ್, ದೇವಿಪ್ರಸಾದ್, ಕೃಷ್ಣ ನಾಯಕ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ ಮೊದಲಾದವರು ಅತಿಥಿಗಳಿಗೆ ಹೂಗುಚ್ಚ ನೀಡಿ ಸಹಕರಿಸಿದರು.


ಮೌನ ಪ್ರಾರ್ಥನೆ: ಶ್ರೀ ದೇವತಾ ಸಮಿತಿಯ ಅಧ್ಯಕ್ಷರಾಗಿದ್ದು ಶ್ರೀ ಮಹಾಗಣೇಶೋತ್ಸವವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿದ್ದು ಕೆಲ ದಿನಗಳ ಹಿಂದೆ ಅಗಲಿದ ಎನ್.ಸುಧಾಕರ್ ಶೆಟ್ಟಿ, ಸಮಿತಿ ಸದಸ್ಯರಾಗಿದ್ದ ಪ್ರಭಾಕರ ಶೆಟ್ಟಿ ನೆಲ್ಲಿಕಟ್ಟೆ, ಮುಂಗ್ಲಿಮನೆ ಚಂದ್ರಶೇಖರ ಗೌಡರವರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here