ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ
ಧರ್ಮಜಾಗೃತಿ ಸಭೆ
ಭವ್ಯ ಶೋಭಾಯಾತ್ರೆ
ನೆಲ್ಯಾಡಿ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇದರ ವತಿಯಿಂದ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.19ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಶಬರೀಶ ಕಲಾಮಂದಿರದಲ್ಲಿ ನಡೆಯಿತು.
ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸುರೇಶ್ ಮುಚ್ಚಿಂತ್ತಾಯ ಹಾಗೂ ನೆಲ್ಯಾಡಿ-ಹಾರ್ಪಳ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯರವರ ಪೌರೋಹಿತ್ಯದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಶ್ರೀ ಗಣಪತಿ ದೇವರ ಪ್ರತಿಷ್ಠೆ ನಡೆಯಿತು. ನಂತರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ನೆಲ್ಯಾಡಿ-ಕೌಕ್ರಾಡಿ ಹಾಗೂ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ಸೀಯಾಳಾಭಿಷೇಕ, ಗಣಹೋಮ ನಡೆಯಿತು. ನಂತರ ಛದ್ಮವೇಷ ಸ್ಪರ್ಧೆ ನಡೆಯಿತು. ಮಧ್ಯಾಹ್ನ ಶ್ರೀ ಗಣಪತಿ ದೇವರಿಗೆ ಮಹಾರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ಸುರೇಖಾ ಮತ್ತು ಶಿಷ್ಯವೃಂದದವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಧರ್ಮಜಾಗೃತಿ ಸಭೆ:
ಮಧ್ಯಾಹ್ನ ನಡೆದ ಧರ್ಮಜಾಗೃತಿ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು, ಆಚರಣೆಗಳು ಹಿಂದೂ ಸಂಸ್ಕೃತಿಯ ಚೌಕಟ್ಟಿನಲ್ಲಿ ನಡೆಯಬೇಕು. ಡಿ.ಜೆ.ಸಂಸ್ಕೃತಿ ನಿಲ್ಲಬೇಕು. ಅದ್ದೂರಿ ಕಾರ್ಯಕ್ರಮದ ಬದಲು ಬಡವರ ನೋವಿಗೆ ಸ್ಪಂದನೆ ನೀಡುವ ಕೆಲಸಗಳೂ ಆಗಬೇಕು ಎಂದು ನುಡಿದರು. ನಿವೃತ್ತ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ್ ಎಸ್.ಬರೆಗುಡ್ಡೆ ದೀಪ ಪ್ರಜ್ವಲಿಸಿ ಮಾತನಾಡಿದರು. ಅತಿಥಿಗಳಾಗಿದ್ದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗ ಬಂಟ್ವಾಳ ಇಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರನಾಥ ಸಾಲ್ಯಾನ್ ಪಿ., ಶ್ರೀ ಕ್ಷೇ.ಧ.ಗ್ರಾ.ಯೋಜನೆ ನೆಲ್ಯಾಡಿ ವಲಯ ಮೇಲ್ವಿಚಾರಕ ವಿಜೇಶ್ ಜೈನ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿ, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶೋತ್ಸವ ನಡೆಸುವ ನಿಟ್ಟಿನಲ್ಲಿ ಪ್ರಶ್ನಾಚಿಂತನೆ ಮೂಲಕ ಮುಂದುವರಿಯಲು ನಿರ್ಧರಿಸಲಾಗಿದ್ದು ಇದಕ್ಕೆ ಊರ, ಪರವೂರಿನ ಭಕ್ತರು ಸಹಕಾರ ನೀಡಬೇಕೆಂದು ಹೇಳಿದರು.
ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನೋದ್‌ಕುಮಾರ್ ಬಾಕಿಜಾಲು ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಉಪಾಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಗೋಳಿತ್ತೊಟ್ಟು, ಸೋನಿತ್ ಹೊಸಮಜಲು, ಕಾರ್ಯದರ್ಶಿ ಮೋಹನ ಗೌಡ ಕಟ್ಟೆಮಜಲು, ಜೊತೆ ಕಾರ್ಯದರ್ಶಿ ರಮೇಶ್ ಶೆಟ್ಟಿ ಬೀದಿಮನೆ, ಕೋಶಾಧಿಕಾರಿ ಮಂಜುನಾಥ ಗೌಡ, ದೇವಸ್ಥಾನದ ಕೋಶಾಧಿಕಾರಿ ಚಂದ್ರಶೇಖರ ಬಾಣಜಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ದಾನಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ದೇವಸ್ಥಾನದ ಕಾರ್ಯದರ್ಶಿ ಸುಧೀರ್‌ಕುಮಾರ್ ಕೆ.ಎಸ್.ಸ್ವಾಗತಿಸಿದರು. ಮೋಹನ ಗೌಡ ವಂದಿಸಿದರು. ಗುಡ್ಡಪ್ಪ ಬಲ್ಯ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಆಚಾರ್ಯ ಪ್ರಾರ್ಥಿಸಿದರು.
ಶೋಭಾಯಾತ್ರೆ:
ಸಂಜೆ ಶ್ರೀ ಗಣಪತಿ ದೇವರ ಭವ್ಯ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ವಿವಿಧ ಸ್ತಬ್ಧ ಚಿತ್ರಗಳು ಗಮನ ಸೆಳೆಯಿತು. ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಶೋಭಾಯಾತ್ರೆಯೂ ನೆಲ್ಯಾಡಿ ಪೇಟೆಯ ಮೂಲಕ ಹೊಸಮಜಲು ತನಕ ತೆರಳಿ ಅಲ್ಲಿಂದ ಹಿಂತಿರುಗಿ ನೆಲ್ಯಾಡಿ ಪೇಟೆಯ ಮೂಲಕವೇ ಸಾಗಿ ಬಂದು ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆ ಬಳಿಯ ಕರ್ಬಸಂಕದಲ್ಲಿ ವಿಸರ್ಜನೆಗೊಂಡಿತು. ಗ್ರಾಮ ವಿಕಾಸ ಸಮಿತಿ ಸೂರ್ಯನಗರ ನೆಲ್ಯಾಡಿ, ಛಾಯಾಮಿತ್ರ ಬಳಗ ನೆಲ್ಯಾಡಿ, ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ, ಅಶ್ವತ್ಥ ಗೆಳೆಯರ ಬಳಗ ಹೊಸಮಜಲು, ಶ್ರೀರಾಮ ಶಾಲೆ ನೆಲ್ಯಾಡಿ, ಶ್ರೀ ವಿಷ್ಣು ಕ್ರಿಕೆಟರ‍್ಸ್ ಆಮುಂಜ ಇವರ ಪ್ರಾಯೋಜಕತ್ವದಲ್ಲಿ ವಿವಿಧ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಗಮನಸೆಳೆಯಿತು. ಶ್ರೀರಾಮ ಶಾಲೆ ನೆಲ್ಯಾಡಿ ಹಾಗೂ ಶಾಸ್ತಾರ-ಹಾರ್ಪಳ ಭಜನಾ ತಂಡದವರಿಂದ ಕುಣಿತ ಭಜನೆ ನಡೆಯಿತು. ನಾಸಿಕ್ ಬ್ಯಾಂಡ್, ಟ್ಯಾಬ್ಲೋ, ನೃತ್ಯ ಭಜನೆ ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು.