ರಾಜ್ಯದಲ್ಲಿ ಬಂದ್‌ಗೆ ಅವಕಾಶವಿಲ್ಲ:ಬಲವಂತ ಮಾಡಿದರೆ ಕಾನೂನು ಕ್ರಮ:ಬಲವಂತದ ಬಂದ್‌ಗೆ ಅವಕಾಶವಿಲ್ಲ-ಡಿಜಿಪಿ

0

ಬಲವಂತದ ಬಂದ್ ಮಾಡಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಎಚ್ಚರಿಕೆ ನೀಡಿದ್ದಾರೆ.ಸಾರ್ವಜನಿಕರಿಗೆ ತೊಂದರೆಯಾದರೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಎಸ್ಪಿಗಳು ಮತ್ತು ಡಿಸಿಪಿಗಳಿಗೆ ನಿರ್ದೇಶನ ನೀಡಲಾಗಿದೆ.ಪ್ರತಿಭಟನಾಕಾರರು ಅಂಗಡಿ ಮುಂಗಟ್ಟು ಬಂದ್ ಮಾಡಲು ಮುಂದಾದರೆ, ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ ಹೇಳಿದ್ದಾರೆ.

ಬೆಂಗಳೂರು:ತಮಿಳ್ನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಸೆ.29ರಂದು ಕರ್ನಾಟಕ ಬಂದ್‌ಗೆ ವಿವಿದ ಸಂಘಟನೆಗಳು ಕರೆ ನೀಡಿವೆ.ಆದರೆ, ಯಾವ ಕಾರಣಕ್ಕೂ ಬಂದ್‌ಗೆ ಅವಕಾಶವಿಲ್ಲ.ಪ್ರತಿಭಟನೆಗೆ ಮಾತ್ರ ಅವಕಾಶವಿದೆ.ಯಾರಾದರೂ ಬಂದ್ ಆಚರಿಸುವಂತೆ ಬಲವಂತ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ|ಜಿ.ಪರಮೇಶ್ವರ್ ಹೇಳಿದ್ದಾರೆ.

ಬಂದ್‌ಗೆ ಕರೆ ನೀಡಿರುವ ಸಂಘಟನೆಗಳಿಗೆ ಎಚ್ಚರಿಕೆ ನೀಡುತ್ತಿದ್ದೇನೆ.ನ್ಯಾಯಾಲಯದ ನಿರ್ದೇಶನದಂತೆ ಬಂದ್ ಆಚರಿಸುವಂತಿಲ್ಲ.ಅಂತಹ ಯಾವುದೇ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಮೊನ್ನೆ ಬೆಂಗಳೂರು ಬಂದ್ ವೇಳೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.ಇದನ್ನು ಧಿಕ್ಕರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.ಪ್ರತಿಭಟನೆ ಮಾತ್ರ ನಡೆಸಬಹುದು.ಬಂದ್‌ಗೆ ಅವಕಾಶ ನೀಡುವುದಿಲ್ಲ.ಪೊಲೀಸರಿಗೆ ಈ ಕುರಿತು ವಿಶೇಷ ಸೂಚನೆ ನೀಡುವ ಅಗತ್ಯವಿಲ್ಲ, ಏನು ಮಾಡಬೇಕೆಂದು ಅವರಿಗೆ ತಿಳಿದಿದೆ ಎಂದು ಅವರು ಹೇಳಿದರು.

ಸೆ.26ರಂದು ಬೆಂಗಳೂರು ಬಂದ್‌ನಿಂದಾಗಿ ಅಂದಾಜು 1,500 ರಿಂದ 2,000 ಕೋಟಿ ರೂಪಾಯಿ ನಷ್ಟವಾಗಿದೆ.ಈ ಮಧ್ಯೆ, ಇನ್ನೊಂದು ಬಾರಿ ಬಂದ್ ಆಚರಿಸಿದರೆ ಅದು ಆರ್ಥಿಕತೆಯ ದೃಷ್ಟಿಯಿಂದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತದೆ.ಇದನ್ನು ಸಂಘ ಸಂಸ್ಥೆಗಳು ಅರಿಯಬೇಕು.ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು, ಪ್ರತಿಭಟನೆ ನಡೆಸಲಿ. ಆದರೆ, ಬಂದ್ ಮಾಡಲು ಯತ್ನಿಸಿದರೆ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಾ|ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here