ಪುತ್ತೂರು: ಧರ್ಮಭಗಿನಿ ಸೇವೆಯಲ್ಲಿ ಸುವರ್ಣ(50ನೇ) ಮಹೋತ್ಸವವನ್ನು ಆಚರಿಸಿದ ಧರ್ಮಭಗಿನಿ, ಸಿಸ್ಟರ್ ಆಫ್ ಚಾರಿಟಿಯ ಸಿ|ವ್ಯಾಲೆಂಟೀನ ಡಿ’ಸಿಲ್ವರವರಿಗೆ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ವತಿಯಿಂದ ಅ.8ರಂದು ಸನ್ಮಾನ ಮಾಡಲಾಯಿತು.
ಬಂಟ್ವಾಳ ತಾಲೂಕಿನ ಅಮ್ಮೆಂಬಳ ಚರ್ಚ್‌ನ ಅಂತೋನಿ ಡಿ’ಸಿಲ್ವ ಹಾಗೂ ಮ್ಯಾಗ್ದಲಿನ್ ಡಿ’ಸಿಲ್ವ ದಂಪತಿಯ ಏಳು ಮಂದಿ ಮಕ್ಕಳಲ್ಲಿ ಕಿರಿಯವಳಾಗಿ ಜನಿಸಿದ ಸಿಸ್ಟರ್ ವ್ಯಾಲೆಂಟೀನ ಡಿ’ಸಿಲ್ವರವರು ತನ್ನ ಪ್ರಾಥಮಿಕ, ಪ್ರೌಢ ಹಾಗೂ ಉನ್ನತ ಶಿಕ್ಷಣವನ್ನು ಪೂರೈಸಿ 1973, ಮಾರ್ಚ್ 3ರಂದು ಪ್ರಥಮ ಸನ್ಯಾಸ ದೀಕ್ಷೆ, 1980, ಮಾರ್ಚ್ 25ರಂದು ಶಾಶ್ವತ ಸನ್ಯಾಸ ದೀಕ್ಷೆಯನ್ನು ಪಡೆದರು. ಸಿಸ್ಟರ್ ವೆಲೆಂಟೀನ್ ಡಿ’ಸಿಲ್ವರವರು ಮಂಗಳೂರಿನ ಕಪಿತಾನಿಯೋದಲ್ಲಿ 8 ವರ್ಷ ಶಿಕ್ಷಕಿಯಾಗಿ, ಬೆಂಗಳೂರಿನಲ್ಲಿ ನಾಲ್ಕು ವರ್ಷ, ಹಾಸನದಲ್ಲಿ ಮೂರು ವರ್ಷ, ಸಕ್ಲೇಶಪುರದ ಬೋರ್ಡಿಂಗ್‌ನಲ್ಲಿ 14 ವರ್ಷ ವಾರ್ಡನ್ ಆಗಿ ಸೇವೆ, ಶಿಕ್ಷಕಿಯಾಗಿ ಕಾರ್ಕಳ ಅತ್ತೂರಿನ ಪ್ರೌಢಶಾಲೆಯಲ್ಲಿ 9 ವರ್ಷ, ಬಾರ್ಕೂರಿನಲ್ಲಿ 4 ವರ್ಷ, ಕೊಕ್ಕಡದಲ್ಲಿ 6 ವರ್ಷ ಸೇವೆ ಸಲ್ಲಿಸಿ ಪ್ರಸ್ತುತ ಉಪ್ಪಿನಂಗಡಿ ಚರ್ಚ್‌ನಲ್ಲಿ ಕಳೆದ ಒಂದೂವರೆ ವರ್ಷದಿಂದ ಶಿಕ್ಷಕಿಯಾಗಿ ಸೇವೆಯನ್ನು ಮುಂದುವರೆಸಿರುತ್ತಾರೆ.
ಉಪ್ಪಿನಂಗಡಿ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಅಬೆಲ್ ಲೋಬೋ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮ್ಯಾಕ್ಸಿಂ ಲೋಬೊ ಬಿಳಿಯೂರು, ಕಾರ್ಯದರ್ಶಿ ವಿಲ್ಫ್ರೆಡ್ ಡಿ’ಸೋಜ, ಉಪ್ಪಿನಂಗಡಿ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಗ್ರೇಸಿ, ಸುವರ್ಣ ವರ್ಷವನ್ನು ಆಚರಿಸಿದ ಸಿಸ್ಟರ್ ವ್ಯಾಲೆಂಟೀನ್‌ರವರ ಸಹೋದರಿ ಸಿಸ್ಟರ್ ಮೋಂತಿ ಡಿ’ಸಿಲ್ವ, ಸುಪೀರಿಯರ್ ಸಿಸ್ಟರ್ ತೆರೆಜಾ, ಚರ್ಚ್‌ನ ಕಥೋಲಿಕ್ ಸಭಾ, ಸಾಂ ವಿಶೆಂತ್ ಪಾವ್ಲ್ ಸಭಾ, ಕ್ರಿಸ್ಟೋಫರ್ ಅಸೋಸಿಯೇಶನ್ ಕಾರ್ಯದರ್ಶಿ ಇನಾಸ್ ರೊಡ್ರಿಗಸ್ ಸಹಿತ ಹಲವರು ಉಪಸ್ಥಿತರಿದ್ದರು. ಸಿಸ್ಟರ್ ಐಲಿನ್ ಕಾರ್ಯಕ್ರಮ ನಿರೂಪಿಸಿದರು.