ಫಿಲೋಮಿನಾದಲ್ಲಿ ತಾಲೂಕು ಪದವಿ ಪೂರ್ವ ವಿಭಾಗದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ

0

ಬಾಲಕರ ವಿಭಾಗದಲ್ಲಿ ಉಪ್ಪಿನಂಗಡಿ ಸರಕಾರಿ ಕಾಲೇಜು ಚಾಂಪಿಯನ್, ಕೊಂಬೆಟ್ಟು ಜ್ಯೂ.ಕಾಲೇಜು ರನ್ನರ್ಸ್
ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಚಾಂಪಿಯನ್, ಫಿಲೋಮಿನಾ ರನ್ನರ್ಸ್

ಪುತ್ತೂರು: ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಅ.27 ರಂದು ಕಾಲೇಜಿನ ಐತಿಹಾಸಿಕ ಕ್ರೀಡಾಂಗಣದಲ್ಲಿ ಜರಗಿದ ಪುತ್ತೂರು ತಾಲೂಕು ಪದವಿ ಪೂರ್ವ ವಿಭಾಗದ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿನ ಬಾಲಕರ ವಿಭಾಗದಲ್ಲಿ ಉಪ್ಪಿನಂಗಡಿ ಸರಕಾರಿ ಪಿಯು ಕಾಲೇಜು ಚಾಂಪಿಯನ್ ಎನಿಸಿಕೊಂಡಿದ್ದು, ಕೊಂಬೆಟ್ಟು ಜ್ಯೂನಿಯರ್ ಕಾಲೇಜು ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ವಿವೇಕಾನಂದ ಕಾಲೇಜು ಚಾಂಪಿಯನ್ ಆಗಿದ್ದು, ಫಿಲೋಮಿನಾ ಕಾಲೇಜು ರನ್ನರ್ಸ್ ಪ್ರಶಸ್ತಿ ಪಡೆಯಿತು.



ಬಾಲಕರ ವಿಭಾಗದಲ್ಲಿ ಬೆಸ್ಟ್ ಕ್ಯಾಚರ್ ಹಾಗೂ ರೈಡರ್ ಆಗಿ ಅನುಕ್ರಮವಾಗಿ ಉಪ್ಪಿನಂಗಡಿ ಸರಕಾರಿ ಪಿಯು ಕಾಲೇಜಿನ ಶೃತಿನ್ ಹಾಗೂ ಝುನೈದ್, ಬೆಸ್ಟ್ ಅಲ್ ರೌಂಡರ್ ಆಗಿ ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಸುಜಿತ್ ರವರು ಆಯ್ಕೆಯಾದರು. ಬಾಲಕಿಯರ ವಿಭಾಗದಲ್ಲಿ ಬೆಸ್ಟ್ ಕ್ಯಾಚರ್ ಆಗಿ ವಿವೇಕಾನಂದ ಕಾಲೇಜಿನ ಅನ್ನಪೂರ್ಣ, ಬೆಸ್ಟ್ ರೈಡರ್ ಆಗಿ ಫಿಲೋಮಿನಾ ಕಾಲೇಜಿನ ಅನ್ವಿತಾ, ಬೆಸ್ಟ್ ಅಲ್ ರೌಂಡರ್ ಆಗಿ ತ್ರಿಷಾರವರು ಆಯ್ಕೆಯಾದರು.

ಬಾಲಕರ ವಿಭಾಗದಲ್ಲಿ ಒಂಭತ್ತು ಕಾಲೇಜು ತಂಡಗಳಾದ ಫಿಲೋಮಿನಾ ಪ.ಪೂ ಕಾಲೇಜು, ವಿವೇಕಾನಂದ ಪ.ಪೂ ಕಾಲೇಜು, ಉಪ್ಪಿನಂಗಡಿ ಸರಕಾರಿ ಪ.ಪೂ ಕಾಲೇಜು, ಕೆಯ್ಯೂರು ಸರಕಾರಿ ಪ.ಪೂ ಕಾಲೇಜು, ಬೆಟ್ಟಂಪಾಡಿ ಸರಕಾರಿ ಪ.ಪೂ ಕಾಲೇಜು, ಬೆಳಿಯೂರುಕಟ್ಟೆ ಸರಕಾರಿ ಪ.ಪೂ ಕಾಲೇಜು, ನರೇಂದ್ರ ಪ.ಪೂ ಕಾಲೇಜು, ಅಂಬಿಕಾ ಪ.ಪೂ ಕಾಲೇಜು, ಜ್ಯೂನಿಯರ್ ಕಾಲೇಜು ಕೊಂಬೆಟ್ಟು ಹಾಗೂ ಬಾಲಕಿಯರ ವಿಭಾಗದಲ್ಲಿ ಐದು ಕಾಲೇಜು ತಂಡಗಳಾದ ಫಿಲೋಮಿನಾ ಪ.ಪೂ ಕಾಲೇಜು, ವಿವೇಕಾನಂದ ಪ.ಪೂ ಕಾಲೇಜು, ಜ್ಯೂನಿಯರ್ ಕಾಲೇಜು ಕೊಂಬೆಟ್ಟು, ಅಂಬಿಕಾ ಪ.ಪೂ ಕಾಲೇಜು, ಉಪ್ಪಿನಂಗಡಿ ಸರಕಾರಿ ಪ.ಪೂ ಕಾಲೇಜು ಭಾಗವಹಿಸಿತ್ತು.



ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬ್ರೈಟ್ ವೇ ಇಂಡಿಯಾ ಮಂಗಳೂರು ಇದರ ಆಡಳಿತ ನಿರ್ದೇಶಕ ಡಾ.ಹರ್ಷಕುಮಾರ್ ರೈ ಮಾಡಾವು ವಿಜೇತರಿಗೆ ಅಭಿನಂದಿಸಿ ಮಾತನಾಡಿ, ಈ ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿರುವ ನನಗೆ ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಹೆಮ್ಮೆ ಎನಿಸುತ್ತದೆ. ಶೈಕ್ಷಣಿಕವಾಗಿ, ಕ್ರೀಡಾಕ್ಷೇತ್ರದಲ್ಲಿ ಬೆಳೆಯಲು ಅವಕಾಶವಿದೆ. ವಿದ್ಯಾರ್ಥಿಗಳು ಈ ಒಂದು ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.

ಉದ್ಘಾಟನೆ:
ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಮಾಯಿದೆ ದೇವುಸ್ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಜನಪ್ರಿಯ ಕ್ರೀಡೆ. ಶಾಲಾ ದಿನಗಳಿಂದಲೇ ಮಕ್ಕಳು ಈ ಕ್ರೀಡೆಯನ್ನು ಆಡುತ್ತಾ ಬಂದಿರುತ್ತಾರೆ. ಕ್ರೀಡಾಪಟುಗಳು ಕ್ರೀಡಾಸ್ಫೂರ್ತಿಯಿಂದ ಆಡಿದಾಗ ಯಶಸ್ಸು ಒಲಿಯುತ್ತದೆ. ನಮ್ಮಲ್ಲಿರುವ ಪ್ರತಿಭೆಯನ್ನು ಓರೆಗೆ ಹಚ್ಚಿದಾಗ ಸಮಾಜವೂ ನಮ್ಮನ್ನು ಗುರುತಿಸುವಂತಾಗುತ್ತದೆ ಎಂದು ಹೇಳಿ ಶುಭ ಹಾರೈಸಿದರು.



ಫಿಲೋಮಿನಾ ಪ.ಪೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಾಜೇಶ್ ಮೂಲ್ಯ, ಪುತ್ತೂರು ತಾಲೂಕು ಕ್ರೀಡಾ ಸಂಯೋಜಕ ಪುನೀತ್, ಕೊಂಬೆಟ್ಟು ಜ್ಯೂನಿಯರ್ ಕಾಲೇಜಿನ ಉಪನ್ಯಾಸಕ ಧರ್ಣಪ್ಪ ಗೌಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿ ಬಳಗ ಪ್ರಾರ್ಥಿಸಿದರು. ಬೆಳಗ್ಗಿನ ಉದ್ಘಾಟನಾ ಹಾಗೂ ಸಂಜೆಯ ಕಾರ್ಯಕ್ರಮದಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಸ್ವಾಗತಿಸಿದರು. ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋರವರು ವಿಜೇತರ ಪಟ್ಟಿ ವಾಚಿಸಿದರು. ಬೆಳಗ್ಗಿನ ಕಾರ್ಯಕ್ರಮವನ್ನು ಆಂಗ್ಲ ಭಾಷಾ ಉಪನ್ಯಾಸಕಿ ಸುಮ ಡಿ, ಸಮಾರೋಪ ಕಾರ್ಯಕ್ರಮವನ್ನು ಆಂಗ್ಲ ಭಾಷಾ ಉಪನ್ಯಾಸಕಿ ಸತ್ಯಲತಾ ರೈ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ರೆಫ್ರಿ ಬೊರ್ಡ್ ನ ಅಧ್ಯಕ್ಷ ಆಸಿಫ್ ತಂಬುತ್ತಡ್ಕರವರ ನೇತೃತ್ವದಲ್ಲಿ ಪುರುಷೋತ್ತಮ್ ಕೋಲ್ಪೆ, ವಿಜಿತ್ ಬೆಟ್ಟಂಪಾಡಿ, ಸಿದ್ದೀಕ್ ಬಂಟ್ವಾಳ, ಝಿಯಾದ್ ಬೆಟ್ಟಂಪಾಡಿ, ಹಬೀಬ್ ಮಾಣಿ ರವರು ಅಂಪೈರುಗಳಾಗಿ ಸಹಕರಿಸಿದರು. ಫಿಲೋಮಿನಾ ಕಾಲೇಜಿನ ಉಪನ್ಯಾಸಕರಾದ ಡಾ.ಆಶಾ ಸಾವಿತ್ರಿ, ಜ್ಯೋತಿ ಕುಮಾರಿರವರು ಸಹಕರಿಸಿದರು.

ಸೆಮಿಫೈನಲ್, ಫೈನಲ್ ಹಾದಿ…
ಬಾಲಕರ ವಿಭಾಗದಲ್ಲಿನ ಉಪ್ಪಿನಂಗಡಿ ಸರಕಾರಿ ಕಾಲೇಜು ಹಾಗೂ ಕೊಂಬೆಟ್ಟು ಜ್ಯೂನಿಯರ್ ಕಾಲೇಜು ನಡುವಣ ಫೈನಲ್ ಕಾದಾಟದಲ್ಲಿ ಉಪ್ಪಿನಂಗಡಿ ಸರಕಾರಿ ಪಿಯು ಕಾಲೇಜು ತಂಡವು ಕೊಂಬೆಟ್ಟು ಜ್ಯೂನಿಯರ್ ಕಾಲೇಜು ತಂಡವನ್ನು ಮಣಿಸಿ ಉಪ್ಪಿನಂಗಡಿ ಸರಕಾರಿ ಪಿಯು ಕಾಲೇಜು ಬಾಲಕರ ವಿಭಾಗದಲ್ಲಿ ಚಾಂಪಿಯನ್ ಎನಿಸಿಕೊಂಡಿದ್ದು, ಕೊಂಬೆಟ್ಟು ಜ್ಯೂನಿಯರ್ ಕಾಲೇಜು ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು. ಈ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಉಪ್ಪಿನಂಗಡಿ ಸರಕಾರಿ ಕಾಲೇಜು ತಂಡವು ಫಿಲೋಮಿನಾ ಕಾಲೇಜು ತಂಡವನ್ನು ಹಾಗೂ ಕೊಂಬೆಟ್ಟು ಸರಕಾರಿ ಕಾಲೇಜು ತಂಡವು ಬೆಟ್ಟಂಪಾಡಿ ಕಾಲೇಜು ತಂಡವನ್ನು ಸೋಲಿಸಿ ಫೈನಲಿಗೆ ನೆಗೆದಿತ್ತು. ಬಾಲಕಿಯರ ವಿಭಾಗದಲ್ಲಿ ಫಿಲೋಮಿನಾ ಕಾಲೇಜು ಹಾಗೂ ವಿವೇಕಾನಂದ ಕಾಲೇಜು ನಡುವಣ ನಡೆದ ಫೈನಲ್ ಹೋರಾಟದಲ್ಲಿ ವಿವೇಕಾನಂದ ಕಾಲೇಜು ತಂಡವು ಫಿಲೋಮಿನಾ ಕಾಲೇಜು ತಂಡವನ್ನು ಮಣಿಸಿ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಎನಿಸಿಕೊಂಡಿತು. ಫಿಲೋಮಿನಾ ಕಾಲೇಜು ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಈ ಮೊದಲು ನಡೆದ ಸೆಮಿಫೈನಲಿನಲ್ಲಿ ಫಿಲೋಮಿನಾ ಕಾಲೇಜು ತಂಡವು ಕೊಂಬೆಟ್ಟು ಜ್ಯೂನಿಯರ್ ಕಾಲೇಜು ತಂಡವನ್ನು ಹಾಗೂ ವಿವೇಕಾನಂದ ಕಾಲೇಜು ತಂಡವು ಉಪ್ಪಿನಂಗಡಿ ಸರಕಾರಿ ಕಾಲೇಜು ತಂಡವನ್ನು ಸೋಲಿಸಿ ಫೈನಲಿಗೆ ಅರ್ಹತೆ ಪಡೆದಿತ್ತು.

ಕ್ರೀಡಾಪಟುಗಳಿಗೆ ಹಸ್ತಲಾಘವ..
ಉದ್ಘಾಟನಾ ಕಾರ್ಯಕ್ರಮದ ಬಳಿಕ ವೇದಿಕೆಯಲ್ಲಿನ ಗಣ್ಯರು ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದ ಬಾಲಕರ ವಿಭಾಗದ ಒಂಭತ್ತು ತಂಡಗಳ ಮತ್ತು ಬಾಲಕಿಯರ ವಿಭಾಗದ ಐದು ತಂಡಗಳ ಕ್ರೀಡಾಪಟುಗಳಿಗೆ ಹಸ್ತಲಾಘವ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

LEAVE A REPLY

Please enter your comment!
Please enter your name here