ಉಪ್ಪಿನಂಗಡಿ: ಹೆದ್ದಾರಿ ಅಗಲಿಕರಣದ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪುಗಳ ಹಾನಿ – 5 ದಿನಗಳಿಂದ ನೀರಿಲ್ಲದೇ ಪರದಾಡಿದ ಸ್ಥಳೀಯರು

0

ಉಪ್ಪಿನಂಗಡಿ: ಹೆದ್ದಾರಿ ಅಗಲಿಕರಣದ ಕಾಮಗಾರಿಗೆಂದು ನಡೆಯುತ್ತಿರುವ ಕಾಮಗಾರಿಯ ವೇಳೆ ಕುಡಿಯುವ ನೀರಿನ ಪೈಪುಗಳನ್ನು ಹಾನಿಗೊಳಿಸಿದ ಕಾರಣಕ್ಕೆ ಕಳೆದ ಐದು ದಿನಗಳಿಂದ ನೀರಿಲ್ಲದೆ ಸಂಕಷ್ಠಗೀಡಾದ ಸ್ಥಳೀಯರಿಗೆ ಆದಿತ್ಯವಾರವೂ ನೀರಿಲ್ಲದೆ ದಿನ ಕಳೆಯುವ ಸ್ಥಿತಿ ಉಂಟಾಗಿದ್ದು, ಎಚ್ಚೆತ್ತ ಪಂಚಾಯತ್ ಆಡಳಿತಗಾರರು ಅಹೋರಾತ್ರಿ ನೀರು ಸರಬರಾಜಿಗೆ ಶ್ರಮಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ಕುಡಿಯುವ ನೀರು ಶುದ್ದೀಕರಣ ಘಟಕದಿಂದ ಹಲವೆಡೆಗೆ ಸರಬರಾಜಾಗುವ ನೀರಿನ ಪೈಪುಗಳು ಕಾಮಗಾರಿಯ ವೇಳೆ ತುಂಡರಿಸಲ್ಪಟ್ಟಿದ್ದು, ಇದನ್ನು ಸರಿಪಡಿಸಬೇಕೆಂದು ಪಂಚಾಯತ್ ಆಡಳಿತ ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದರೂ ಸ್ಪಂದನೆ ತೋರದ ಅಧಿಕಾರಿಗಳ ವರ್ತನೆಯಿಂದ ಜನತೆ ಆಕ್ರೋಶಕ್ಕೀಡಾಗಿದ್ದರು.


ಈ ಮಧ್ಯೆ ಶನಿವಾರದಂದು ಜನಾಕ್ರೋಶ ತೀವ್ರಗೊಂಡು ಹೆದ್ದಾರಿ ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳನ್ನು ದಿಗ್ಭಂಧನಕ್ಕೆ ಒಳಪಡಿಸಲು ಅಗ್ರಹಿಸುತ್ತಿದ್ದ ವಿದ್ಯಾಮಾನಗಳನ್ನು ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಸಂಬಂಧಿತ ಅಧಿಕಾರಿಗಳಿಗೆ ತುರ್ತು ಸ್ಪಂದನೆ ತೋರಲು ಆದೇಶಿಸಿತ್ತು. ಅದರಂತೆ ಶನಿವಾರ ಸಾಯಂಕಾಲದ ವೇಳೆಗೆ ಸ್ಥಳಕ್ಕೆ ಭೇಟಿ ನೀಡಿದ ಕೆಎನ್‌ಆರ್ ಸಂಸ್ಥೆಯ ಅಧಿಕಾರಿಗಳು ಹಾನಿಗೀಡಾದ ಪೈಪುಗಳನ್ನು ಆದಿತ್ಯವಾರದೊಳಗೆ ಸರಿಪಡಿಸುವ ಭರವಸೆ ನೀಡಿದರು. ಮಾತ್ರವಲ್ಲದೆ ಆದಿತ್ಯವಾರ ಮುಂಜಾನೆಯಿಂದಲೇ ಪೈಪು ಲೈನ್ ದುರಸ್ತಿ ಕಾರ್ಯಕ್ಕೆ ಮುಂದಾದರು. ಸಾಯಂಕಾಲ ವೇಳೆಗೆ ಪೇಟೆಯ ಒಂದು ಪಾರ್ಶ್ವಕ್ಕೆ ಸರಬರಾಜಾಗುವ ಪೈಪುಗಳ ಜೋಡನಾ ಕಾರ್ಯ ನಡೆಯಿತ್ತಾದರೂ ಅಕಾಲಿಕವಾಗಿ ಸುರಿದ ಸಿಡಿಲ ಮಳೆಯಿಂದಾಗಿ ವಿದ್ಯುತ್ ಮರೆಯಾಗಿ ನೀರು ಸಂಗ್ರಹಿಸುವ ಕಾರ್ಯಕ್ಕೆ ತಡೆಯುಂಟಾಯಿತು. ಆದಾಗ್ಯೂ ತಡರಾತ್ರಿಯಾದರೂ ಸರಿ ನೀರು ಸರಬರಾಜು ವ್ಯವಸ್ಥೆಯನ್ನು ಸರಿಪಡಿಸಿ, ಗ್ರಾಮದ ಎಲ್ಲೆಡೆಗೆ ನೀರು ಸರಬರಾಜುಗೊಳಿಸಿಯೇ ನಿರ್ಗಮಿಸಲಾಗುವುದೆಂದು ದಿನವಿಡೀ ಸ್ಥಳದಲ್ಲೇ ಮೊಕ್ಕಾಂ ಹೂಡಿರುವ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು ತಿಳಿಸಿದ್ದಾರೆ.


ಲೋಪದಲ್ಲಿ ಸರಕಾರಿ ಇಂಜಿನಿಯರ್‌ಗಳ ನಿರ್ಲಕ್ಷ್ಯ – ಪಿಡಿಒ

ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುವ ವೇಳೆ ಪಂಚಾಯತ್ ಸೊತ್ತುಗಳ, ಭೂ ಗರ್ಭದಲ್ಲಿ ಅಳವಡಿಸಲಾದ ಪೈಪುಗಳ ಬಗ್ಗೆ ಸೂಕ್ತ ಮಾಹಿತಿಗಳನ್ನು ಒಳಗೊಂಡು ಎಷ್ಟಿಮೇಟ್ ತಯಾರಿಸಿ ಹೆದ್ದಾರಿ ಪ್ರಾಧಿಕಾರಕ್ಕೆ ಸಲ್ಲಿಸಿ ಒದಗಿಸಬೇಕಾದ ಪರಿಹಾರ ಧನವನ್ನು ಒದಗಿಸುವಲ್ಲಿ ಇಲಾಖಾ ಇಂಜಿನಿಯರ್ ಗಳ ನಿರ್ಲಕ್ಷವೇ ಈ ಎಲ್ಲಾ ಅವಾಂತರಗಳಿಗೆ ಕಾರಣವಾಗಿದೆ ಎಂದು ಪಂಚಾಯತ್ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here