ಪುತ್ತೂರು:ಕೆಎಸ್ಆರ್ಟಿಯ ಪುತ್ತೂರು ಘಟಕಕ್ಕೆ ನೂತನವಾಗಿ ಆಗಮಿಸಿದ ಆರು ಬಸ್ಗಳಿಗೆ ಚಾಲನೆಯು ನ.20ರಂದು ಪುತ್ತೂರು ಬಸ್ ನಿಲ್ದಾಣದಲ್ಲಿ ನಡೆಯಿತು.
ಬಸ್ಗಳಿಗೆ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಸಾರಿಗೆ ಸಚಿವರೊಂದಿಗೆ ಚರ್ಚಿಸಿದಾಗ 25-30 ಜೊತೆ ಬಸ್ಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಈ ಪೈಕಿ ಎರಡು ಪಲ್ಲಕಿ ಬಸ್ ಹಾಗೂ 8 ಕರ್ನಾಟಕ ಸಾರಿಗೆ ಬಸ್ಗಳು ಬಂದಿದೆ. ಸ್ಥಳೀಯವಾಗಿ ಸಂಚರಿಸಲು ತಾಕ್ತಾಲಿಕವಾಗಿ ಆರು ಬಸ್ಗಳನ್ನು ನೀಡಿದ್ದಾರೆ. ಇನ್ನೂ ನಾಲ್ಕು ಬಸ್ಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಚಾಲಕ ತೊಂದರೆ ಖಾಸಗಿ ಸಹಭಾಗಿತ್ವದಲ್ಲಿ ನೀಘಿಸಲಾಗಿದೆ. ನಿರ್ವಾಹಕರ ಕೊರೆತಯಿದ್ದು ಹುದ್ದೆ ಭರ್ತಿ ಮಾಡುವಂತೆ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕರ ಮನವಿಗೆ ಶಾಸಕನ ನೆಲೆಯಲ್ಲಿ ಪ್ರಾಮಾಣಿಕವಾಗಿ ಸ್ಪಂಧನೆ ನೀಡಿದ್ದೇನೆ. ನನಗೆ ಮನವಿ ಬಂದ 15-20 ದಿನಗಳಲ್ಲಿ ಬಸ್ ನೀಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಮನವಿಗೆ ಸ್ಪಂಧನೆ ನೀಡುವ ಮೂಲಕ ಸರಕಾರದ ಸೌಲಭ್ಯಗಳನ್ನು ತಲುಪಿಸಲಾಗುತ್ತಿದ್ದು ಪ್ರಶಂಸೆಗೆ ಪಾತ್ರವಾಗಿದೆ. ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಕಾಟುಕುಕ್ಕೆಯಿಂದ ಬೆಟ್ಟಂಪಾಡಿಗೆ ವಿದ್ಯಾರ್ಥಿಗಳು ಬರುತ್ತಿದ್ದು ಅದಕ್ಕೂ ಮುಂದಿನ ದಿನಗಳಲ್ಲಿ ಕ್ರಮಕೂಗೊಳ್ಳಲಾಗುವುದು ಎಂದರು.
ಪೊಲೀಸ್, ಮೆಸ್ಕಾಂ ಹಾಗೂ ಕೆಎಸ್ಆರ್ಟಿಸಿಯಲ್ಲಿ ಉಡುಪಿ ದ.ಕ ಜಿಲ್ಲೆಯವರು ಅರ್ಜಿ ಹಾಕುವುದಿಲ್ಲ. ಉದ್ಯೋಗ ಇಲ್ಲ ಹೇಳುತ್ತಿದ್ದರೂ ಯಾರೂ ಅರ್ಜಿ ಹಾಕುವುದಿಲ್ಲ. ಉತ್ತರ ಕನ್ನಡದವರು ನೇಮಕ ಆಗಿ ನಂತರ ಅವರು ವರ್ಗಾವಣೆ ಪಡೆದುಹೋಗುತ್ತಿದ್ದು ಸಮಸ್ಯೆ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ನೇಮಕಾತಿಯಲ್ಲಿ ಸ್ಥಳೀಯರಿಗೆ ಶೇ,10 ಮೀಸಲಾತಿ ನಿಗದಿಪಡಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಈ ಭಾಗದವರಿಗೇ ಉದ್ಯೋಗ ದೊರೆಯಬೇಕು ಎಂಬ ನಿಟ್ಟಿನಲ್ಲಿ ಮೆಸ್ಕಾಂಗೆ ಕಂಬ ಹತ್ತಲು, ಪೊಲೀಸ್ ಇಲಾಖೆಗೂ ಪರೀಕ್ಷೆ ಬರೆಯಲು ಯುವಕರಿಗೆ ಟ್ರಸ್ಟ್ ಮೂಲಕ ತರಬೇತಿ ನೀಡಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಮಾತನಾಡಿ, ನೂತನವಾಗಿ ಆಗಮಿಸಿದ ಬಸ್ಗಳು ಶಾಂತಿಮೊಗರು-ಕಡಬ, ಪುಣಚ-ವಿಟ್ಲ, ಮುಡಿಪುನಡ್ಕ-ಬಡಗನ್ನೂರು, ರೆಂಜ-ಮುಡಿಪುನಡ್ಕ-ಸುಳ್ಯಪದವು, ನುಳಿಯಾಲು-ಕೊರಿಂಗಿಲ ಮೊದಲಾದ ರಸ್ತೆಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಪ್ರಮುಖರಾದ ಕೃಷ್ಣಪ್ರಸಾದ್ ಆಳ್ವ, ವೇದನಾಥ ಸುವರ್ಣ, ರೋಶನ್ ರೈ ಬನ್ನೂರು, ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ನಿಹಾಲ್ ರೈ, ವಿಭಾಗೀಯ ಸಂಚಲಣಾಧಿಕಾರಿ ಮುರಳೀಧರ ಆಚಾರ್ಯ, ಘಟಕ ವ್ಯವಸ್ಥಾಪಕ ಇಸ್ಮಾಯಿಲ್ ಹಾಗೂ ವಿಭಾಗದ ಹಾಗೂ ಘಟಕ ವಿವಿಧ ಅಧಿಕಾರಿ ಹಾಗೂ ಸಿಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.