ಉಪ್ಪಿನಂಗಡಿಯಲ್ಲಿ ಮೇಲ್ಸೆತುವೆ ನಿರ್ಮಾಣಕ್ಕೆ ಆಗ್ರಹ-ಸಂಸದರಿಗೆ ಗ್ರಾ.ಪಂ.ನಿಂದ ಮನವಿ

0

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚತುಷ್ಫಥ ಕಾಮಗಾರಿ ನಡೆಯುವ ಉಪ್ಪಿನಂಗಡಿ-ಪುತ್ತೂರು ರಸ್ತೆ ಸಂಪರ್ಕದ ಕುಮಾರಧಾರಾ ಸೇತುವೆ ಬಳಿಯಿಂದ ಹೊಟೇಲ್ ಆದಿತ್ಯ ತನಕ ಮೇಲ್ಸೇತುವೆ ಮತ್ತು ಹಿರೇಬಂಡಾಡಿ ರಸ್ತೆ ಸಂಪರ್ಕದ ತಿರುವುನಲ್ಲಿ ಅಂಡರ್ ಪಾಸ್ ನಿರ್ಮಿಸುವಂತೆ ಆಗ್ರಹಿಸಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ನಿಂದ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಮನವಿ ಸಲ್ಲಿಸಿದೆ.


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿರುತ್ತದೆ. ಸುತ್ತಮುತ್ತಲಿನ ಬಂಟ್ವಾಳ, ಕಡಬ ಮತ್ತು ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳ ಜನರಿಗೆ ಉಪ್ಪಿನಂಗಡಿ ಪೇಟೆಯೇ ವ್ಯಾಪಾರ, ವ್ಯವಹಾರದ ಕೇಂದ್ರವಾಗಿರುತ್ತದೆ. ಆದ ಕಾರಣ ಇಲ್ಲಿಗೆ ಬರುವ ವಾಹನಗಳ ಸಂಖ್ಯೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಮೇಲು ಸೇತುವೆ ಮಾಡದೆ ಕೇವಲ ಅಂಡರ್ ಪಾಸ್ ಮಾತ್ರ ಮಾಡಿದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟನೆ ಮತ್ತು ಸಂಪರ್ಕ ರಸ್ತೆಯಿಂದ ಬರುವ ವಾಹನಗಳ ಭರಾಟೆಯಿಂದಾಗಿ ಅಪಘಾತಗಳು ಹೆಚ್ಳವಾಗುವ ಸಾಧ್ಯತೆ ಇದೆ. ಆದ ಕಾರಣ ಕುಮಾರಧಾರಾ ಸೇತುವೆ ಬಳಿಯಿಂದ ಹೊಟೇಲ್ ಆದಿತ್ಯ ತನಕ ಮೇಲ್ಸೆತುವೆ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.


ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಸರಕಾರಿ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಸೈಂಟ್ ಮೇರಿಸ್ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಇದ್ದು, ಈ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ಸುಮಾರು ೪ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಬೆಳಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳು ತೀರಾ ಅಪಾಯವನ್ನು ಎದುರಿಸಿಕೊಂಡು ರಸ್ತೆ ದಾಟುವ ಪರಿಸ್ಥಿತಿ ಉಂಟಾಗುವಂತಿದೆ. ಆದ ಕಾರಣ ಹಿರೇಬಂಡಾಡಿ ರಸ್ತೆ ಸಂಪರ್ಕ ಆಗುವಲ್ಲಿ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಆಗ್ರಹಿಸಲಾಗಿದೆ.


ಉಪ್ಪಿನಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹಲವು ರಸ್ತೆಗಳು ಸಂಪರ್ಕ ಪಡೆಯುವುದರಿಂದ ಈ ಪ್ರದೇಶದಲ್ಲಿ ಅಂಡರ್ ಪಾಸ್ ನಿರ್ಮಿಸಿದರೆ ಸಾರ್ವಜನಿಕರಿಗೆ ತೊಂದರೆ ಆಗಿದ್ದು, ಹಾಗಾಗಿ ಇಲ್ಲಿ ಅಂಡರ್ ಪಾಸ್ ನಿರ್ಮಿಸಬಾರದು. ಬದಲಾಗಿ ಮೇಲ್ಸೆತುವೆ ಮಾಡಿದರೆ ಇಲ್ಲಿನ ಸಮಸ್ಯೆಗೂ ಪರಿಹಾರ ದೊರೆತಂದಾಗುತ್ತದೆ. ಕುಮಾರಧಾರಾ ಸೇತುವೆ ಬಳಿಯಿಂದ ಹೊಟೇಲ್ ಆದಿತ್ಯ ತನಕ ಮೇಲು ಸೇತುವೆ ನಿರ್ಮಾಣ ಮಾಡುವುದು ಅತೀ ಅಗತ್ಯ ಮತ್ತು ಸೂಕ್ತ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಉಪ್ಪಿನಂಗಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲು ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ, ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸದಸ್ಯರಾದ ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಯು.ಟಿ. ತೌಸೀಫ್, ಧನಂಜಯ ಕುಮಾರ್, ಲೋಕೇಶ್ ಬೆತ್ತೋಡಿ, ಅಬ್ದುಲ್ ರಶೀದ್, ಯು.ಕೆ. ಇಬ್ರಾಹಿಂ, ಮೈಸಿದಿ ಇಬ್ರಾಹಿಂ, ವಿನಾಯಕ ಪೈ, ಸಣ್ಣಣ್ಣ, ಉಷಾ ಮುಳಿಯ, ವನಿತಾ, ರುಕ್ಮಿಣಿ, ಶೋಭಾ, ಜಯಂತಿ, ಉಷಾ ನಾಯಕ್, ನೆಬಿಸ, ಸೌದ, ಪಿಡಿಓ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಕಾರ‍್ಯದರ್ಶಿ ಗೀತಾ ಶೇಖರ್ ಇದ್ದರು.

ಉಪ್ಪಿನಂಗಡಿ ಗ್ರಾಮ ಪಂಚಾಯತ್ ವತಿಯಿಂದ ನೀಡಲಾದ ಮನವಿ ಬಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, “ಹೆದ್ದಾರಿ ಚತುಷ್ಫಥ ರಸ್ತೆಯಾಗಿ ಅಭಿವೃದ್ಧಿ ಕಾಮಗಾರಿ ನಡೆಯುವಾಗ ಸಹಜವಾಗಿ ಕೆಲವೊಂದು ಸಮಸ್ಯೆಗಳು ಎದುರಾಗುತ್ತದೆ. ಈಗಾಗಲೇ ನೆಲ್ಯಾಡಿ, ಕಲ್ಲಡ್ಕ, ಮೆಲ್ಕಾರಿನಲ್ಲಿ ಎದುರಾಗಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸಿ, ಸರ್ವೇ ನಡೆಸಲಾಗುತ್ತಿದೆ. ಇದೀಗ ಉಪ್ಪಿನಂಗಡಿಯವರೂ ಸಮಸ್ಯೆ ಬಗ್ಗೆ ತಿಳಿಸಿದ್ದು, ಜ. ೩ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಕರೆದಿದ್ದು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ” ತಿಳಿಸಿದರು. ಸಂಸದರೊಂದಿಗೆ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಬಿಜೆಪಿ. ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಚನಿಲ ತಿಮ್ಮಪ್ಪ ಶೆಟ್ಟಿ ಇದ್ದರು.

LEAVE A REPLY

Please enter your comment!
Please enter your name here