ರಾಮಕುಂಜ: ದೈವದ ಪರಿಚಾರಕ ಮೋಂಟ ಗೌಡರಿಗೆ ಒಕ್ಕಲಿಗ ಗೌಡ ಸಂಘದಿಂದ ಸನ್ಮಾನ

0

ರಾಮಕುಂಜ: ದೈವದ ಪರಿಚಾರಕರಾಗಿ ಸುಮಾರು 50 ಕ್ಕಿಂತಲೂ ಹೆಚ್ಚು ವರ್ಷ ಸೇವೆ ಸಲ್ಲಿಸಿ ವಿಶ್ರಾಂತ ಜೀವನದಲ್ಲಿರುವ ರಾಮಕುಂಜ ಗ್ರಾಮದ ಆನ ನಿವಾಸಿ ಮೋಂಟ ಗೌಡ ಅವರನ್ನು ರಾಮಕುಂಜ ಒಕ್ಕಲಿಗ ಗೌಡ ಸಂಘದ ವತಿಯಿಂದ ಡಿ.28ರಂದು ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಈಗ 80ರ ಹರೆಯದ ಮೋಂಟ ಗೌಡ ಅವರು ತನ್ನ 24ನೇ ವಯಸ್ಸಿನಲ್ಲಿಯೇ ದೈವದ ಪರಿಚಾರಕರಾಗಿ ಸೇವೆ ಆರಂಭಿಸಿದ್ದರು. ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ನಡೆಯುವ ವರ್ಷಾವಧಿ ಜಾತ್ರಾ ಮಹೋತ್ಸವದ ಬಳಿಕ ನಡೆಯುವ ನೇಮೋತ್ಸವದಲ್ಲಿ ಮೋಂಟ ಗೌಡ ಅವರು ದೈವದ ಪರಿಚಾರಕರಾಗಿ ಪ್ರತಿವರ್ಷವೂ ಸೇವೆ ಸಲ್ಲಿಸುತ್ತಿದ್ದರು. ಮೋಂಟ ಗೌಡ ಅವರು ಹಲವು ವರ್ಷದ ಹಿಂದೆ ರಾಮಕುಂಜ ದೇವಸ್ಥಾನಕ್ಕೆ ಸಂಬಂಧಿಸಿದ ದೈವಗಳ ತಾಣದ ಜೀರ್ಣೋದ್ದಾರದಲ್ಲೂ ಸಕ್ರೀಯವಾಗಿ ತೊಡಗಿಕೊಂಡಿದ್ದರು. ಇದೀಗ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿರುವ ಅವರು ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ರಾಮಕುಂಜ ಒಕ್ಕಲಿಗ ಗೌಡ ಸಂಘದ ವತಿಯಿಂದ ಅವರ ಮನೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೂ ಆಗಿರುವ ರಾಮಕುಂಜ ಗ್ರಾಮ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷರಾದ ಪದ್ಮಪ್ಪ ಗೌಡ ರಾಮಕುಂಜ ಅವರು ಮೋಂಟ ಗೌಡ ಹಾಗೂ ಶಿವಮ್ಮ ದಂಪತಿಗೆ ಶಾಲುಹಾಕಿ, ಮೋಂಟ ಗೌಡರಿಗೆ ಹಾರಾರ್ಪಣೆ ಮಾಡಿ, ಫಲ ವಸ್ತು ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಊರ ಗೌಡರಾದ ಸದಾಶಿವ ಅರ್ವೆ, ರಾಮಕುಂಜ ಒಕ್ಕಲಿಗ ಗೌಡ ಸಂಘದ ಸದಸ್ಯ ಹರೀಶ್ ಬಾರಿಂಜ, ಮೋಂಟ ಗೌಡರ ಪುತ್ರ ಗಿರಿಯಪ್ಪ ಗೌಡ ಹಾಗೂ ಮನೆಯವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here