ಉಪ್ಪಿನಂಗಡಿ: ಇಲ್ಲಿನ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಲಾರಿ ಚಾಲಕ ಲಾರಿಯಲ್ಲೇ ಮೃತಪಟ್ಟಿದ್ದು, ಎರಡು ದಿನಗಳ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆಯ ಚೆನ್ನಪಟ್ಟಣದ ಖಲೀಲ್ ಖಾನ್ (58) ಮೃತ ವ್ಯಕ್ತಿ. ಮೈಸೂರಿನಿಂದ ಬಿ.ಸಿ.ರೋಡಿಗೆ ಹಾಸಿಗೆಯ ಲೋಡನ್ನು ಲಾರಿಯಲ್ಲಿ ತಂದಿದ್ದ ಈತ ಅದನ್ನು ಖಾಲಿ ಮಾಡಿ ಎರಡು ದಿನಗಳ ಹಿಂದೆ ರಾತ್ರಿ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದರು. ಲಾರಿಯ ಕ್ಯಾಬಿನ್ನ ಬಾಗಿಲು ಹಾಕಿದ್ದರಿಂದ ಚಾಲಕ ಲಾರಿಯೊಳಗೆ ಮೃತಪಟ್ಟಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಡಿ.29ರಂದು ಲಾರಿಯಿಂದ ವಾಸನೆ ಬರಲಾರಂಭಿಸಿದ್ದು, ಸಂಶಯಗೊಂಡ ಸ್ಥಳೀಯರು ಪರಿಶೀಲಿಸಿದಾಗ ಲಾರಿಯ ಚಾಲಕ ಮಲಗಿದ್ದಲ್ಲೇ ಮೃತಪಟ್ಟಿದ್ದ. ಈತ ಹೃದಯಾಘಾತವುಂಟಾಗಿ ಮೃತಪಟ್ಟಿದ್ದು ಎನ್ನಲಾಗಿದೆ. ಬಳಿಕ ಲಾರಿಯಿಂದ ಲಾರಿ ಚಾಲಕನ ಮೃತದೇಹವನ್ನು ತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.