ಪೆರುವಾಜೆ : ಇತಿಹಾಸ ಬರೆದ ವೈಭವದ ಬ್ರಹ್ಮರಥೋತ್ಸವ-15 ಸಾವಿರಕ್ಕೂ ಅಧಿಕ ಭಕ್ತರು ಭಾಗಿ – ಆಕರ್ಷಕ ಬೆಡಿ

0

ಸಾಂಪ್ರದಾಯಿಕ ಉಡುಗೆಯೊಂದಿಗೆ ರಥ ಎಳೆದ ಭಕ್ತರು

ಬೆಳ್ಳಾರೆ  : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ  ಜಲದುರ್ಗಾದೇವಿ ದೇವಾಲಯದ ಬ್ರಹ್ಮರಥೋತ್ಸವವು ಶುಕ್ರವಾರ ರಾತ್ರಿ ಹದಿನೈದು ಸಾವಿರಕ್ಕೂ ಮಿಕ್ಕಿ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ವೈಭವದಿಂದ ನಡೆಯಿತು.ಸಂಜೆ ಕ್ಷೇತ್ರದ ತಂತ್ರಿ ನಾಗೇಶ್ ತಂತ್ರಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆದು ವಸಂತಕಟ್ಟೆ ಪೂಜೆ ನೆರವೇರಿತು. ಈ ವೇಳೆ ವ್ಯಾಘ್ರಚಾಮುಂಡಿ ದೈವ(ಪಿಲಿಭೂತ)ದ ಭಂಡಾರ ಆಗಮಿಸಿತ್ತು. ಅಲ್ಲಿಂದ ದೈವದ ಭಂಡಾರ ಸಹಿತವಾಗಿ ದೇವರ ಬಲಿ ದೇವಾಲಯದ ರಥ ಬೀದಿಯ ಬಳಿಯಲ್ಲಿನ ಅಲಂಕೃತ ಬ್ರಹ್ಮರಥದ ಬಳಿ ಆಗಮಿಸಿತ್ತು. ಈ ವೇಳೆ ದೈವ-ದೇವರ ಮುಖಾಮುಖಿ ನಡೆಯಿತು. ದೈವದ ಅಭಯದ ನುಡಿಯೊಂದಿಗೆ ಜಲದುರ್ಗಾದೇವಿ ರಥವನ್ನೇರಿ ತಂತ್ರಿಗಳ ನೇತೃತ್ವದಲ್ಲಿ ಪೂಜೆ ನಡೆಯಿತು.

*ಬ್ರಹ್ಮರಥೋತ್ಸವ
ರಥಬೀದಿಯಲ್ಲಿ ಮುಂಭಾಗದಲ್ಲಿ ವ್ಯಾಘ್ರಚಾಮುಂಡಿ ದೈವ, ಅನಂತರ ಬ್ರಹ್ಮರಥ ತೆರಳಿತು. ಸುಮಾರು 250 ಮೀಟರ್ ದೂರ ಬ್ರಹ್ಮರಥ ಸಂಚರಿಸಿತ್ತು. ರಥ ಸಂಚರಿಸಿ ಮೂಲಸ್ಥಾನದ ತನಕ ಬರುವ ತನಕವು ವ್ಯಾಘ್ರಚಾಮುಂಡಿ ದೈವ ಬ್ರಹ್ಮರಥದ ಜತೆಗೆ  ಹೆಜ್ಜೆ ಹಾಕಿತ್ತು.  ರಥವು ರಥ ಬೀದಿಯಲ್ಲಿ ಸಂಚರಿಸಿ ಮರಳಿ ಬಂದು ದೈವ-ದೇವರು ಮುಖಾಮುಖಿಗೊಂಡು ರಥೋತ್ಸವ ಸಂಪನ್ನಗೊಂಡ ಬಳಿಕ ದೇವರ ಬಲಿ ಮಹಾಪೂಜೆ, ಶಯನೋತ್ಸವ, ಕವಾಟ ಬಂಧನ ನಡೆಯಿತು.

ರಥ ಎಳೆಯಲು ಸಾಂಪ್ರದಾಯಿಕ ಉಡುಗೆ
ಬ್ರಹ್ಮರಥ ಎಳೆಯುವ ಭಕ್ತಾಧಿಗಳಿಗೆ ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಗೆ ಧರಿಸಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಇದಕ್ಕಾಗಿ ವ್ಯವಸ್ಥಾಪನ ಸಮಿತಿ ಪಾಸ್ ವ್ಯವಸ್ಥೆ ಮಾಡಿತ್ತು. ಹೀಗಾಗಿ ಯಾವುದೇ ನೂಕು ನುಗ್ಗಲು ಇಲ್ಲದೆ ವ್ಯವಸ್ಥಿತ ರೀತಿಯಲ್ಲಿ ಬ್ರಹ್ಮರಥ ಸಂಚರಿಸಿತ್ತು. ರಥ ಶಿಲ್ಪಿ ಹರೀಶ್ ಆಚಾರ್ಯ ಬೋಳಿಯಾರು ನೇತೃತ್ವದ ರಥ ನಿರ್ಮಾಣದ ಶಿಲ್ಪಿಗಳ ತಂಡ ಬ್ರಹ್ಮರಥ ಸಂಚಾರದ ನಿರ್ವಹಣ ಜವಾಬ್ದಾರಿ ವಹಿಸಿತ್ತು. 

ದಾಖಲೆ ಬರೆದ ಜನಸ್ತೋಮ
22 ಗ್ರಾಮಗಳಿಗೆ ಸೇರಿದ ಮಾಗಣೆ ಕ್ಷೇತ್ರದಲ್ಲಿ 100 ವರ್ಷಗಳ ಬಳಿಕ ಬ್ರಹ್ಮರಥೋತ್ಸವ ನಡೆದ ಹಿನ್ನೆಲೆಯಲ್ಲಿನ ದ.ಕ., ಕೊಡಗು, ಕಾಸರಗೋಡು ಭಾಗದಿಂದ ಭಕ್ತರ ದಂಡೇ ಹರಿದು ಬಂತು. ಮಾಸ್ತಿಕಟ್ಟೆಯಿಂದ ಶ್ರೀ ಕ್ಷೇತ್ರದ ತನಕವು ವಾಹನ ದಟ್ಟಣೆ ಕಂಡು ಬಂತು. ಸರಿ ಸುಮಾರು 15 ರಿಂದ 20 ಸಾವಿರ ಜನರು ಬ್ರಹ್ಮರಥೋತ್ಸವವನ್ನು ಕಣ್ತುಂಬಿಸಿಕೊಂಡರು. 12 ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಇದು ಪೆರುವಾಜೆಯ ಇತಿಹಾಸದಲ್ಲಿ ಗರಿಷ್ಟ ಜನರು ಭಾಗವಹಿಸಿದ ಕಾರ್ಯಕ್ರಮ ಎಂಬ ದಾಖಲೆ ಬರೆಯಿತು.

ಸುಡುಮದ್ದು ಪ್ರದರ್ಶನ
ಶ್ರೀ ದೇವರು ಬ್ರಹ್ಮರಥಕ್ಕೆ ಏರಿದ ಸಂದರ್ಭದಲ್ಲಿ ಪೆರುವಾಜೆ ಬೆಡಿ ಪ್ರದರ್ಶನ ನಡೆಯಿತು. ಚಿತ್ರಾಕರ್ಷಕ ದೃಶ್ಯಗಳೊಂದಿಗೆ ಬೆಡಿ ಪ್ರದರ್ಶನ ಭಕ್ತರ ಗಮನ ಸೆಳೆಯಿತು. ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹ ರಕ್ಷಕ ದಳ ಭದ್ರತೆಯ ಜವಾಬ್ದಾರಿ ನಿರ್ವಹಿಸಿತ್ತು.

ಗೌರವಾರ್ಪಣೆ
ಬ್ರಹ್ಮರಥೋತ್ಸವದ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯನ್ನು ಗೌರವಿಸಲಾಯಿತು. ಈ ಸಂದರ್ಭ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ದ.ಕ.ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಭಾಗೀರಥಿ ಮುರುಳ್ಯ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶ್ರೀ ಕ್ಷೇತ್ರದ ಪವಿತ್ರಪಾಣಿ ಸುಬ್ರಹ್ಮಣ್ಯ ನಿಡ್ವಣ್ಣಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸಮಿತಿ ಸದಸ್ಯರಾದ ಪಿ. ವೆಂಕಟಕೃಷ್ಣ ರಾವ್, ಜಯಪ್ರಕಾಶ್ ರೈ, ದಾಮೋದರ ನಾಯ್ಕ, ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ, ಭಾಗ್ಯಲಕ್ಷ್ಮಿ, ಯಶೋದ ಎ,ಎಸ್. ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮರಥೋತ್ಸವ ಆರಂಭಕ್ಕೆ ಮೊದಲು ರಥಬೀದಿಯಲ್ಲಿ ಒಂದು ತಾಸು ಕುಣಿತ ಭಜನೆ‌ ನಡೆಯಿತು. ಸುಮಾರು 10 ಕ್ಕೂ ಅಧಿಕ ಭಜನ‌ ತಂಡಗಳು‌ ಭಾಗವಹಿಸಿತ್ತು. ಇಡೀ ರಥ ಬೀದಿಯಲ್ಲಿ ಭಜನೆಯ ಸದ್ದು ಮಾರ್ದನಿಸಿ ಭಕ್ತರ ಗಮನ‌ ಸೆಳೆಯಿತು.

LEAVE A REPLY

Please enter your comment!
Please enter your name here