ಪುತ್ತೂರು: ಬೊಳುವಾರಿನಲ್ಲಿರುವ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ 8ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಜ.24ರಂದು ನಡೆಯಲಿದೆ. ಇದೇ ಸಂದರ್ಭ ದುರ್ಗಾ ಉಳ್ಳಾಲ್ತಿ ಮಲರಾಯ ಯಕ್ಷ ಕಲಾ ಪ್ರತಿಷ್ಠಾನದ ವಾರ್ಷಿಕೋತ್ಸವವೂ ನಡೆಯಲಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಖಜಾಂಚಿ ಪ್ರಸನ್ನ ಬಳ್ಳಾಲ್ ಮತ್ತು ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಕ್ಷೇತ್ರ ಪವಿತ್ರಪಾಣಿ ಬಾಲಸುಬ್ರಹ್ಮಣ್ಯ ಭಟ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
2016ರಲ್ಲಿ ದೇವಳದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆದಿದ್ದು, ಅದೇ ವರ್ಷ ಯಕ್ಷ ಪ್ರತಿಷ್ಠಾನ ರಚಿಸಲಾಗಿದೆ. ಸ್ಥಳೀಯ ಯಕ್ಷಗಾನಾಸಕ್ತ ವಿದ್ಯಾರ್ಥಿಗಳಿಗೆ ಇಲ್ಲಿ ತರಬೇತಿ ನೀಡಲಾಗುತ್ತಿದೆ. ಪ್ರತೀ ತಿಂಗಳು ವಿದ್ಯಾರ್ಥಿಗಳಿಂದ ತಾಳಮದ್ದಳೆ ನಡೆಯುತ್ತಿದೆ. ಹಿಮ್ಮೇಳ ಮತ್ತು ಮುಮ್ಮೇಳದ ಪ್ರತಿಷ್ಠಾನದ ಮೂಲಕವೇ ವ್ಯವಸ್ಥೆಯಾಗುತ್ತಿದೆ. ಪ್ರಸ್ತುತ 50 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಶಿಷ್ಯವೃಂದವರಿಂದ ಜ.24ರಂದು ರಾತ್ರಿ 7.30ರಿಂದ ಏಕಾದಶಿ ದೇವಿ ಮಹಾತ್ಮೆ ಎಂಬ ಪ್ರಸಂಗ ಆಡಿ ತೋರಿಸಲಿದ್ದಾರೆ. ಅದರ ಬಳಿಕ ಹಿರಿಯ ಹವ್ಯಾಸಿ ಕಲಾವಿದರಿಂದ ಜಾಂಬವತಿ ಕಲ್ಯಾಣ ಪ್ರಸಂಗ ಪ್ರದರ್ಶನಗೊಳ್ಳಲಿದೆ ಎಂದರು.
ಪ್ರತಿಷ್ಠಾ ವರ್ಧಂತಿ ಅಂಗವಾಗಿ 24ರಂದು ಬೆಳಗ್ಗೆ ಗಣಪತಿ ಹೋಮ, ಚಂಡಿಕಾಯಾಗ, ಪಂಚವಿಂಶತಿ ಕಲಶ ಪೂಜೆ, ಕಲಶಾಭಿಷೇಕ, ನಾಗದೇವರಿಗೆ ಪಂಚಾಮೃತ ಅಭಿಷೇಕ, ತಂಬಿಲ ಸೇವೆ, ಮಲರಾಯ ಮತ್ತು ಪರಿವಾರ ದೈವಗಳಿಗೆ ತಂಬಿಲ ಸೇವೆ, ಯಾಗದ ಪೂರ್ಣಾಹುತಿ, ಸುವಾಸಿನಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಶ್ರೀ ದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಲಲಿತಾ ಸಹಸ್ರ ನಾಮಾರ್ಚನೆ ನಡೆಯಲಿದೆ.
ರಾತ್ರಿ ನಾಟ್ಯಾರ್ಚನಂ ಹೆಸರಿನ ನೃತ್ಯ ಕಾರ್ಯಕ್ರಮ, ದೇವರಿಗೆ ಸರ್ವಾಲಂಕಾರ ಸಹಿತ ಕಲ್ಪೋಕ್ತ ದುರ್ಗಾಪೂಜೆ ಹಾಗೂ ರಂಗ ಪೂಜೆ ನಡೆಯಲಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಯಕ್ಷ ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರೂ, ಯಕ್ಷಗಾನ ಗುರುಗಳೂ ಆದ ಗೋವಿಂದ ನಾಯಕ್ ಪಾಲೆಚ್ಚಾರ್, ಕಾರ್ಯದರ್ಶಿ ಶಂಕರ ಭಟ್, ಗೌರವ ಸಲಹೆಗಾರರೂ, ಹಿರಿಯ ಯಕ್ಷಗಾನ ಕಲಾವಿದರೂ ಆದ ಪದ್ಯಾಣ ಶಂಕರನಾರಾಯಣ ಭಟ್ ಉಪಸ್ಥಿತರಿದ್ದರು.