ಮೈಮುನಾ-ಮರ್ಝಿನಾರಿಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ-ಪುತ್ತೂರು ಮೂಲದ ಪತ್ರಕರ್ತ ರವಿ ಪೊಸವಣಿಕೆಗೆ ಸನ್ಮಾನ

0

ಪುತ್ತೂರು: ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಸಮಾಜಕ್ಕೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.
ಮಂಗಳೂರಿನ ಮರವೂರು ದಿ ಗ್ರ್ಯಾಂಡ್ ಬೇಯಲ್ಲಿ ಮಾ.10ರಂದು ನಡೆದ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರು ಹೈನುಗಾರಿಕೆಯ ಮೂಲಕ ಅತ್ಯಪೂರ್ವ ಸಾಧನೆ ಮಾಡಿರುವ ಮೈಮೂನಾ ಮತ್ತು ಮರ್ಝಿನಾ ಅವರು ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿದ್ದಾರೆ. ಅವರನ್ನು ಗುರುತಿಸಿ ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು.


ಕಾರ್ಯಕ್ರಮ ಉದ್ಘಾಟಿಸಿದ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ ಸಮಾಜದಲ್ಲಿ ಮಾಧ್ಯಮ ರಂಗ ಮಹತ್ವದ ಸ್ಥಾನ ಪಡೆದಿದೆ. ಗುರು , ಹಿರಿಯರನ್ನು ಗೌರವಿಸಿದರೆ ಮಾತ್ರ ಸಾಧನೆಯ ಹಾದಿಯಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ಅನ್ನು ಮಂಗಳೂರು, ಪುತ್ತೂರು ಪೆರ್ಲಂಪಾಡಿಯ ರವಿ ಪೊಸವಣಿಕೆ, ರಾಘವೇಂದ್ರ ಭಟ್, ಪ್ರಕಾಶ್ ಮಂಜೇಶ್ವರ, ಕೃಷ್ಣ ಕೋಲ್ಚಾರ್, ರಾಜೇಶ್ ಕಿಣಿ, ಅಶೋಕ್ ಶೆಟ್ಟಿ ಬಿ.ಎನ್., ರವೀಂದ್ರ ಶೆಟ್ಟಿ ಕುತ್ತೆತ್ತೂರು, ಶರತ್ ಸಾಲ್ಯಾನ್ ಅವರುಗಳಿಗೆ ಪ್ರೆಸ್ ಕ್ಲಬ್ ಗೌರವ ಪ್ರದಾನ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿತು.


ಪ್ರೆಸ್ ಕ್ಲಬ್ ಪ್ರಶಸ್ತಿ ತೀರ್ಪುಗಾರರಾದ ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ಪುಷ್ಪರಾಜ್ ಮತ್ತು ವಿಶ್ರಾಂತ ಪತ್ರಕರ್ತ ಕುಮಾರನಾಥ್ ಅವರನ್ನು ಗೌರವಿಸಲಾಯಿತು.
ಪ್ರೆಸ್ ಕ್ಲಬ್ ಸಿಬ್ಬಂದಿ ಚಂಚಲಾಕ್ಷಿ ಅವರನ್ನು ಸನ್ಮಾನಿಸಲಾಯಿತು.


ಇದೇ ಸಂದರ್ಭ ಮತದಾನದ ಪ್ರತಿಜ್ಞಾ ವಿಧಿಯನ್ನು ಹರೀಶ್ ಮೋಟುಕಾನ ನೆರವೇರಿಸಿದರು. ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ, ಮಾಜಿ ಮೇಯರ್‌ ಗಳಾದ ಶಶಿಧರ್ ಹೆಗ್ಡೆ, ಭಾಸ್ಕರ ಕೆ, ಮನಪಾ ಸದಸ್ಯ ನವೀನ್ ಡಿ ಸೋಜ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಕಾರ್ಯನಿರತ ಪತ್ರ ಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ,ಪ್ರೆಸ್ ಕ್ಲಬ್ ಪೂರ್ವಾಧ್ಯಕ್ಷ ಅನ್ನು ಮಂಗಳೂರು, ಹಿರಿಯ ಪತ್ರಕರ್ತರಾದ ಬಿ.ರವೀಂದ್ರ ಶೆಟ್ಟಿ, ವಾಲ್ಟರ್ ನಂದಳಿಕೆ, ಉಪಸ್ಥಿತರಿದ್ದರು. ಸತೀಶ್ ಇರಾ ಪ್ರಾರ್ಥಿಸಿದರು. ಮಹಮ್ಮದ್ ಆರಿಫ್ ಪಡುಬಿದ್ರಿ, ಆರ್.ಸಿ.ಭಟ್ ಮತ್ತು ಆತ್ಮಭೂಷಣ್ ಭಟ್ ಸನ್ಮಾನಿತರನ್ನು ಪರಿಚಯಿಸಿದರು.
ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here