ಉಪ್ಪಿನಂಗಡಿ: ಅಲ್ಪಸಂಖ್ಯಾತರಿಗೆ ವಿಶೇಷ ಅನುದಾನ, ಭದ್ರತೆ ಹಾಗೂ ಅವರ ಹಿತಾಸಕ್ತಿ ಕಾಪಾಡುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ನುಡಿದಂತೆ ನಡೆಯುತ್ತಿದ್ದು, ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಅಲ್ಪಸಂಖ್ಯಾತರ ನಿಗಮದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 5 ಕೋ.ರೂ. ಅನುದಾನವನ್ನು ಒದಗಿಸಿಕೊಟ್ಟಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ನಝೀರ್ ಮಠ ತಿಳಿಸಿದರು.
ಉಪ್ಪಿನಂಗಡಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ತಮ್ಮದು ಬಡವರ, ಜನಸಾಮಾನ್ಯರ ಪರವಿರುವ ಸರಕಾರ ಎಂದು ಸಾಬೀತು ಮಾಡಿದೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರು ಕೂಡಾ ಅಭಿವೃದ್ದಿಯ ಬಗ್ಗೆ ಇಚ್ಛಾಶಕ್ತಿಯುಳ್ಳ ಶಾಸಕರಾಗಿದ್ದು, ತನ್ನ ಶಾಸಕತ್ವದ ಅವಧಿಯ 9 ತಿಂಗಳಲ್ಲೇ 1,473.29 ಕೋ.ರೂ. ಅನುದಾನವನ್ನು ತನ್ನ ಕ್ಷೇತ್ರಕ್ಕೆ ತಂದಿದ್ದಾರೆ. ತಾನೋರ್ವ ಶಾಸಕನಾಗಿದ್ದರೂ, ಸಚಿವರು ಮಾಡುವಷ್ಟು ಕೆಲಸವನ್ನು ಅವರು ತನ್ನ ಕ್ಷೇತ್ರದಲ್ಲಿ ಮಾಡಿದ್ದಾರೆ. ಇವರ ಯೋಚನೆ ಹಾಗೂ ಯೋಜನೆಗಳು ಉತ್ತಮವಾಗಿವೆ. ಇಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 190 ಕೋಟಿ ರೂ. ಅನುದಾನ ಬಂದಿದೆ. ಕೆಎಂಎಫ್ಗೆ 10 ಎಕ್ರೆ ಜಾಗ ನೀಡುವ ಮೂಲಕ ತನ್ನ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಗೆ ಮುಂದಾಗಿದ್ದಾರೆ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜಿಗೆ ಈಗಾಗಲೇ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದು, ಉಪ್ಪಿನಂಗಡಿಯ ಮಾಲೀಕುದ್ದೀನಾರ್ ಮಸೀದಿಯ ಬಳಿ ನೇತ್ರಾವತಿ ನದಿ ಬದಿ ತಡೆಗೋಡೆಗೆ 3 ಕೋ.ರೂ.ನ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕಬಕದಲ್ಲಿ 22 ಎಕರೆ ಭೂಮಿ ಕ್ರಿಕೆಟ್ ಮೈದಾನಕ್ಕೆ ಮಂಜೂರಾತಿ ಮಾಡಿದ್ದಾರೆ ಎಂದರು.
ಈ ಹಿಂದಿನ ರಾಜ್ಯ ಸರಕಾರದ ಅವಧಿಯಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ಭದ್ರತೆ ಇರಲಿಲ್ಲ. ಎಲ್ಲಾ ಕಡೆಯಿಂದಲೂ ಅವರು ನಿರಂತರ ತೊಂದರೆಗೀಡಾಗುತ್ತಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರಿಗೆ ನೆಮ್ಮದಿಯ ಬದುಕು ಲಭಿಸಿದ್ದು, ಪೊಲೀಸ್ ನೈತಿಕಗಿರಿಯೂ ನಿಂತು ಹೋಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿದೆ ಎಂದು ನಝೀರ್ ಮಠ ತಿಳಿಸಿದರು.
ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ, ಈ ಭಾರಿ ಅಡಿಕೆಯ ಧಾರಣೆ ಗಣನೀಯ ಮಟ್ಟದಲ್ಲಿ ಕುಸಿದಿದ್ದು, ರಸಗೊಬ್ಬರ ಸೇರಿದಂತೆ ಇತರ ಕೃಷಿಗೆ ಅಗತ್ಯವಾದ ಉತ್ಪನ್ನಗಳ ಬೆಲೆ ಮೊದಲಿಗಿಂತ ಏರಿಕೆಯಾಗಿ ಅಡಿಕೆ ಬೆಳೆಗಾರರಿಗೆ ನಿರ್ವಹಣೆ ವೆಚ್ಚ ಜಾಸ್ತಿಯಾಗಿ ಅಡಿಕೆ ಕೃಷಿಕರಿಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಉತ್ತರ ಕೊಡಬೇಕಾದ ಕೇಂದ್ರ ಸರಕಾರ ಹಾಗೂ ಈ ಭಾಗದ ಸಂಸದರು ಮೌನವಾಗಿದ್ದು, ಇದು ಇವರ ವೈಫಲ್ಯವನ್ನು ತೋರಿಸುತ್ತದೆ. ಇಲ್ಲಿನ ಶಾಸಕರು ಅಡಿಕೆ ಕೃಷಿಕರ, ಅಡಿಕೆ ಕೃಷಿಯ ಸಮಸ್ಯೆಗಳ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ್ದು, ತಾನು ಅಡಿಕೆ ಕೃಷಿಕರ, ರೈತರ, ಜನಸಾಮಾನ್ಯರ ಪರವಿದ್ದೇನೆ ಎಂಬುದನ್ನು ಸಾಬೀತು ಮಾಡಿದ್ದಾರೆ.
ಕಾಂಗ್ರೆಸ್ನ ಉಪ್ಪಿನಂಗಡಿ ವಲಯಾಧ್ಯಕ್ಷ ಆದಂ ಕೊಪ್ಪಳ ಮಾತನಾಡಿ, ಈ ಹಿಂದೆ 9(11) ಗ್ರಾ.ಪಂ. ಮಟ್ಟದಲ್ಲೇ ಆಗುತ್ತಿತ್ತು. 24 ಸೆಂಟ್ಸ್ಗಿಂತ ಜಾಸ್ತಿ ಇದ್ದರೆ ಮಾತ್ರ ತಾ.ಪಂ.ನಿಂದ ಅನುಮೋದನೆ ಪಡೆಯಬೇಕಾಗಿತ್ತು. ಆದರೆ ಈಗ 24 ಸೆಂಟ್ಸ್ಗಿಂತ ಜಾಸ್ತಿ ಇದ್ದರೆ ಅದರ ವಿನ್ಯಾಸಕ್ಕೆ ಮೂಡಾದಿಂದ ಅನುಮೋದನೆ ಪಡೆಯಬೇಕೆಂದಿದ್ದೆ. ಈ ನಿಯಮ ಸರಿಯಲ್ಲ. ಇದರಿಂದ ಜನಸಾಮಾನ್ಯರು ತೊಂದರೆಗೊಳಗಾಗುವಂತಾಗಿದೆ. ಆದ್ದರಿಂದ 9(11) ಮಾಡುವಾಗ ಈ ಹಿಂದಿನ ನಿಯಮವನ್ನೇ ಅನುಸರಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ತೌಸೀಫ್ ಯು.ಟಿ., ಕಾಂಗ್ರೆಸ್ ಮುಖಂಡರಾದ ಶಬೀರ್ ಕೆಂಪಿ, ಶರೀಕ್ ಅರಪ್ಪಾ ಉಪಸ್ಥಿತರಿದ್ದರು.