ಪುತ್ತೂರು: ಪಡುಮಲೆಯ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಹಿಂಬದಿಯಲ್ಲಿರುವ ’ಪೂಜಾರಿಮೂಲೆ’ ಎಂಬುದು ಬಹುಕಾಲದ ಹಿಂದಿನಿಂದಲೇ ನಾಟಿ ವೈದ್ಯಕೀಯ ಚಿಕಿತ್ಸೆಗೆ ಪ್ರಸಿದ್ಧವಾಗಿತ್ತು. ಆ ಪಾರಂಪರಿಕವಾಗಿ ದಿ.ದೂಮ ಪೂಜಾರಿಯವರ ಪುತ್ರ ವಿಶ್ವನಾಥ ಪೂಜಾರಿಯವರು ಪ್ರಕೃತಿ ನಾಟಿ ವೈದ್ಯಕೀಯ ಚಿಕಿತ್ಸೆಯಲ್ಲಿ ಪರಿಣಿತರಾಗಿದ್ದು ಸದ್ರಿ ಪ್ರದೇಶವನ್ನು ಸಸ್ಯ ಸಂಜೀವಿನಿ ಕ್ಷೇತ್ರವಾಗಿಸಿದ್ದಾರೆ. ಇಲ್ಲಿ ಪಾಷಾಣಮೂರ್ತಿ, ಕೊರಗಜ್ಜ, ಗುಳಿಗ ದೈವಗಳ ಆರಾಧನೆಯೂ ಜರಗುತ್ತಿದೆ. ಪಡುಮಲೆ ಕೂವೆ ಶಾಸ್ತಾರ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆದ ಪ್ರಶ್ನಾಚಿಂತನೆಗಳ ಪ್ರಕಾರ ಸದ್ರಿ ಪರಿಸರದಲ್ಲಿ ವೈಧ್ಯನಾಥೇಶ್ವರ ಕ್ಷೇತ್ರವು ಅಸ್ತಿತ್ವದಲ್ಲಿ ಇತ್ತೆಂದು ತಿಳಿದುಬಂದಿದ್ದು ಬಲ್ಲಾಳರ ಕಾಲದಲ್ಲಿ ಉಚ್ಚಾಯ ಸ್ಥಿತಿಯಲ್ಲಿದ್ದ ಆ ಕ್ಷೇತ್ರವು ಕಾರಣಾಂತರಗಳಿಂದ ನಶಿಸಿ ಹೋಗಿರುವುದಾಗಿಯೂ, ಅದನ್ನು ಜೀರ್ಣೋದ್ಧಾರಗೊಳಿಸಿ ಪುನರುತ್ಥಾನ ಪ್ರಕ್ರಿಯೆ ಕೈಗೊಳ್ಳಬೇಕಾಗಿಯೂ ತಿಳಿದುಬಂದಿರುತ್ತದೆ. ಈ ಕ್ಷೇತ್ರದ ಪುನರ್‌ನಿರ್ಮಾಣಕ್ಕೆ ಭಕ್ತಾದಿಗಳ ಸಹಕಾರದ ಅಗತ್ಯವಿದೆ. ಮಾ.16 ರಂದು ದೈವಾನುಗ್ರಹ ಮನೆಯಲ್ಲಿ ಬೆಳಿಗ್ಗೆ ಗಣಪತಿ ಹೋಮ ಹಾಗೂ ಸಂಜೆ ಗುಳಿಗ, ಕಲ್ಲುರ್ಟಿ, ಕೊರಗಜ್ಜ ದೈವಗಳ ನೇಮೋತ್ಸವ ನಡೆಯಿತು. ಸಂಜೆ 4 ಕ್ಕೆ ಗುಳಿಗ ದೈವದ ನೇಮ ಬಳಿಕ ದೈವಗಳ ಭಂಡಾರ ತೆಗೆಯುವುದು, ಸಂಜೆ ಕಲ್ಲುರ್ಟಿ ದೈವದ ನೇಮ ಬಳಿಕ ಅನ್ನಸಂತರ್ಪಣೆ ನಡೆದು ರಾತ್ರಿ 11 ಕ್ಕೆ ಕೊರಗಜ್ಜ ದೈವದ ನೇಮ ಬಳಿಕ ಪ್ರಸಾದ ವಿತರಣೆ ನಡೆಯಿತು. ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.