ಪುತ್ತೂರು:ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಜಿಲ್ಲಾ ಸದಸ್ಯರೋರ್ವರ ಮನೆಗೆ ತಂಡವೊಂದು ಅಕ್ರಮ ಪ್ರವೇಶಗೈದು, ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಬರೆದಿರುವ ಬ್ಯಾನರ್ ಪ್ರದರ್ಶಿಸಿ, ಮನೆಯಲ್ಲಿದ್ದವರಿಗೆ ಬೆದರಿಕೆಯೊಡ್ಡಿರುವ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸರು 9 ಮಂದಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ‘ಶ್ರೀ ಗುರುಕೃಪಾ’ದ ಕೃಷ್ಣಪ್ಪ ಪೂಜಾರಿಯವರ ಪುತ್ರ ಜಯಾನಂದ ಕೆ.(41ವ.)ಅವರು ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದಂತೆ ‘ತಾನು ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ಜಿಲ್ಲಾ ಸದಸ್ಯನಾಗಿದ್ದು ಮಾ.17ರಂದು ಸಂಜೆ 4.30ರ ವೇಳೆಗೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಂದರ್ಭದಲ್ಲಿ ನನ್ನ ಮನೆಯೊಳಗೆ ಏಕಾಏಕಿಯಾಗಿ ಪ್ರಜ್ವಲ್ ರೈ,ಸನತ್ ರೈ ಸಹಿತ ಸುಮಾರು 15 ಮಂದಿ, ಕಾಂಗ್ರೆಸ್ ಸರಕಾರದ ಯೋಜನೆಗಳನ್ನು ಬರೆದಿರುವ ಬ್ಯಾನರ್ ಪ್ರದರ್ಶಿಸುತ್ತಾ, ಚೆಂಡೆಗಳನ್ನು ಜೋರಾಗಿ ಬಡಿಯುತ್ತಾ ಅಕ್ರಮ ಪ್ರವೇಶ ಮಾಡಿ ನನಗೆ ಹಾಗೂ ನನ್ನ ವೃದ್ಧ ತಾಯಿ, ಪತ್ನಿ ಹಾಗೂ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ, ಮನೆಯ ಗೋಡೆಗಳಿಗೆ ಕಾಲಿನಿಂದ ಒದ್ದು ಅಸಭ್ಯ ವರ್ತನೆ ತೋರಿದ್ದಾರೆ.
ನೀನು ಬಿಜೆಪಿ ಬಗ್ಗೆ ಫೇಸ್‌ಬುಕ್‌ನಲ್ಲಿ ಭಾರೀ ಬರೆಯುತ್ತೀಯಾ ಎಂದು ಗದರಿಸಿ ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಜೀವಬೆದರಿಕೆಯೊಡ್ಡಿದ್ದಾರೆ. ಇದರಿಂದಾಗಿ ನಾನು ಮಾನಸಿಕವಾಗಿ ನೊಂದುದಲ್ಲದೆ,ಜೀವಭಯದಿಂದ ಬದುಕುವಂತಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಪ್ರಜ್ವಲ್ ರೈ, ಸನತ್ ರೈ, ಕೀರ್ತನ್, ನಿಶಾಂತ್ ಸಹಿತ 9 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.