ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ-ಶಶಿಕುಮಾರ್ ರೈ ಬಾಲ್ಯೊಟ್ಟು
ಪುತ್ತೂರು: ವಿದ್ಯಾರ್ಜನೆಯೊಂದಿಗೆ ವಿದ್ಯಾರ್ಥಿಗಳಲ್ಲಿನ ಸಾಂಸ್ಕೃತಿಕ ಪ್ರತಿಭೆಯನ್ನು ತೋರ್ಪಡಿಸಲು ಆಸಕ್ತಿ ಜೊತೆಗೆ ಪ್ರಶಸ್ತಿ ಪಡೆಯುವ ಆದಮ್ಯ ಉತ್ಸಾಹವಿರುತ್ತದೆ. ಆದ್ದರಿಂದ ಅಕ್ಷಯ ಕಾಲೇಜು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆಯನ್ನು ನಿರ್ಮಿಸಿಕೊಟ್ಟಿದೆ ಎಂದು ಮಂಗಳೂರು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಹೇಳಿದರು.
ಸಂಪ್ಯದಲ್ಲಿ ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಮಾ.21 ರಂದು ಜರಗಿದ ಎರಡನೇ ವರ್ಷದ ಪದವಿ ಮಟ್ಟದ ಅಂತರ್-ಕಾಲೇಜು ಫೆಸ್ಟ್ ‘ಕೃತ್ವ-2024’ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸರಕಾರದ ಯೋಜನೆಗಳು, ಉದ್ಯೋಗವಕಾಶಗಳನ್ನು ಪಡೆಯುವಂತಹ ಪ್ರಯತ್ನ ವಿದ್ಯಾರ್ಥಿಗಳಲ್ಲಿರಬೇಕು-ನಾಗೇಶ್ ಕುಮಾರ್:
ಆರ್ಯಾಪು ಪಿಡಿಒ ನಾಗೇಶ್ ಕುಮಾರ್ ಮಾತನಾಡಿ, ನಗರ ಪ್ರದೇಶಗಳಲ್ಲಿ ಸಿಗುವ ಶೈಕ್ಷಣಿಕ ಸೌಲಭ್ಯ ಗ್ರಾಮೀಣ ಪ್ರದೇಶದಲ್ಲಿ ಸಿಗುವಂತೆ ಮಾಡಿದೆ ಈ ಅಕ್ಷಯ ಕಾಲೇಜು. ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿಗಳಿಗೆ ಸಾಧನೆ ಮಾಡುವ ತುಡಿತ, ಹಂಬಲವಿರಬೇಕು. ಸರಕಾರದ ವಿವಿಧ ಯೋಜನೆಗಳು, ಉದ್ಯೋಗವಕಾಶಗಳನ್ನು ಪಡೆಯುವಂತಹ ಪ್ರಯತ್ನ ವಿದ್ಯಾರ್ಥಿಗಳಲ್ಲಿರಬೇಕು ಎಂದರು.
ವಿದ್ಯಾರ್ಥಿಗಳು ಜೀವನದಲ್ಲಿ ನಕರಾತ್ಮಕತೆಯನ್ನು ದೂರೀಕರಿಸಿ ಜೀವನದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಕಲಿಯುವಂತಾಗಬೇಕು-ಅಬ್ದುಲ್ ರಹಿಮಾನ್:
ಆದರ್ಶ ಎಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ ಸಂಸ್ಥೆಯ ಮಾಲಕ ಅಬ್ದುಲ್ ರಹಿಮಾನ್ ಮಾತನಾಡಿ, ನಮ್ಮ ಅಂದಿನ ವಿದ್ಯಾರ್ಥಿ ಜೀವನದಲ್ಲಿ ನಮ್ಮ ಗುರುವರ್ಯರು ನಮ್ಮ ತಪ್ಪುಗಳಿಗೆ ಪೆಟ್ಟು ಕೊಡುತ್ತಿದ್ದರೂ, ಅಂತಹ ಗುರುವರ್ಯರನ್ನು ನಾವು ಇಂದು ಹೃದಯದಲ್ಲಿಟ್ಟು ಗೌರವಿಸುತ್ತಿದ್ದೇವೆ. ಗುರು-ಹಿರಿಯರ ನಡುವಿನ ಅಂದಿನ ಬಾಂಧವ್ಯ ವರ್ಣಿಸಲಸಾಧ್ಯ. ವಿದ್ಯಾರ್ಥಿಗಳು ಜೀವನದಲ್ಲಿ ನಕರಾತ್ಮಕತೆಯನ್ನು ದೂರ ಮಾಡಿ ಜೀವನದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಕಲಿಯುವಂತಾಗಬೇಕು ಎಂದರು.
ಉತ್ತಮ ಭವಿಷ್ಯದೊಂದಿಗೆ ನಾವೆಲ್ಲರೂ ಒಂದು ಎಂಬ ಭಾವನೆಯಿರಲಿ-ಜಯಂತ್ ನಡುಬೈಲು:
ಅಧ್ಯಕ್ಷತೆ ವಹಿಸಿದ ಕಾಲೇಜು ಚೇರ್ ಮ್ಯಾನ್ ಜಯಂತ್ ನಡುಬೈಲು ಮಾತನಾಡಿ, ಅಕ್ಷಯ ಕಾಲೇಜಿನಲ್ಲಿ ಕಳೆದ ವರ್ಷವೂ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಉತ್ತಮ ಭವಿಷ್ಯವನ್ನು ರೂಪುಗೊಳಿಸಬೇಕು. ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಮುಂದಡಿ ಇಡಬೇಕು ಎಂದರು.
ಕಾಲೇಜು ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ, ವಿದ್ಯಾರ್ಥಿ ಕನ್ವೀನರ್ ಹಾಗೂ ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿನೋದ್ ಕೆ.ಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಥಮ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿನಿ ಪ್ರಕೃತಿ ಪ್ರಾರ್ಥಿಸಿದರು. ಕೃತ್ವ ಫೆಸ್ಟ್ ಕನ್ವಿನರ್ ಪ್ರಭಾವತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಫೆಸ್ಟ್ ವಿದ್ಯಾರ್ಥಿ ಸಂಯೋಜಕಿ ಶೈಲಶ್ರೀರವರು ಉದ್ಘಾಟಕರ ಪರಿಚಯ ಮಾಡಿದರು. ರಿಯಾ ಪೊನ್ನಮ್ಮ ವಂದಿಸಿದರು. ಅಂತಿಮ ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿನಿ ದಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.
ಟ್ರೋಫಿ ಲಾಂಚ್..
ಪದವಿ ಮಟ್ಟದ ಅಂತರ್-ಕಾಲೇಜು ಫೆಸ್ಟ್ ‘ಕೃತ್ವ’ ಇದರ ಟ್ರೋಫಿಯನ್ನು ವಿದ್ಯಾರ್ಥಿನಿಯರ ನೃತ್ಯದೊಂದಿಗೆ ಲಾಂಚ್ ಮಾಡಲಾಯಿತು. ಕಳೆದ ಬಾರಿ ದ.ಕ ಹಾಗೂ ಕೊಡಗು ಜಿಲ್ಲೆಯ 36 ಕಾಲೇಜು ತಂಡಗಳು ಈ ಫೆಸ್ಟ್ ನಲ್ಲಿ ಭಾಗವಹಿಸಿತ್ತು. ಪ್ರಸ್ತುತ ವರ್ಷ ದ.ಕ ಹಾಗೂ ಕೊಡಗು ಜಿಲ್ಲೆಯ ಪದವಿ ಮಟ್ಟದ ಸುಮಾರು 40 ಕಾಲೇಜು ತಂಡಗಳು ಹೆಸರನ್ನು ನೋಂದಾಯಿಸಿರುತ್ತಾರೆ.