ಪುತ್ತೂರು: ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ನಿರ್ದೇಶಕ, ಕೃಷಿಕರಾದ ಸವಣೂರು ಗ್ರಾಮದ ಅಗರಿ ನಿವಾಸಿ ರತ್ನಾಕರ ಸುವರ್ಣರ ಮೇಲೆ ಕಾಡು ಹಂದಿಯೊಂದು ದಾಳಿ ಮಾಡಿದ ಘಟನೆ ಎ.9 ರಂದು ಮಧ್ಯಾಹ್ನ ನಡೆದಿದೆ.
ರತ್ನಾಕರ ಸುವರ್ಣರು ತನ್ನ ಕೃಷಿ ತೋಟಕ್ಕೆ ನೀರು ಬಿಡಲು ಹೋದ ಸಂದರ್ಭದಲ್ಲಿ ಕಾಡು ಹಂದಿ ದಾಳಿ ಮಾಡಿದ್ದು, ರತ್ನಾಕರ ಸುವರ್ಣರ ಬೊಬ್ಬೆ ಕೇಳಿ ಮನೆಯವರು ತೋಟಕ್ಕೆ ಆಗಮಿಸುವ ಸಂದರ್ಭದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತೀವ್ರ ಗಾಯಗೊಂಡಿರುವ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗಿದೆ. ಮಧ್ಯಾಹ್ನ ಪಂಪ್‌ನಲ್ಲಿ ನೀರು ಬರುತ್ತಿಲ್ಲ ಎಂದು ನೋಡುವುದಕ್ಕೆ ಹೋದ ಸಂದರ್ಭದಲ್ಲಿ ಮುಂಭಾಗದಿಂದ ಬಂದ ಕಾಡು ಹಂದಿ ದಾಳಿ ಮಾಡಿದೆ. ನನ್ನ ಕೈ,ಕಾಲು ಮತ್ತು ಸೊಂಟಕ್ಕೆ ಏಟಾಗಿದೆ ಎಂದು ರತ್ನಾಕರ ಸುವರ್ಣರು ತಿಳಿಸಿದ್ದಾರೆ.