ಪುತ್ತೂರು:ಪುತ್ತೂರು ಜೈನ್ ಮಿಲನ್ ಮಾಜಿ ಅಧ್ಯಕ್ಷ, ಕೋಡಿಂಬಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೆ.ರಾಜೇಂದ್ರ ಆರಿಗ(61ವ.)ರವರು ಮೇ 16ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕೋಡಿಂಬಾಡಿ ಗ್ರಾಮದ ನಿಡ್ಯ ಮನೆಯವರಾದ ರಾಜೇಂದ್ರ ಆರಿಗ ಅವರು ಕೃಷಿಕರಾಗಿದ್ದರು.ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮೊಕ್ತೇಸರರಾಗಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ರಾಜೇಂದ್ರ ಆರಿಗರವರು ನಾಟಕ ಕಲಾವಿದರಾಗಿ, ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದರು.ಕಾAಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಾಗಿ ಕೋಡಿಂಬಾಡಿ ಗ್ರಾಮ ಪಂಚಾಯತ್ಗೆ ಚುನಾಯಿತರಾಗಿದ್ದ ಇವರು ಉದ್ಯೋಗ ಮಿತ್ರನಾಗಿಯೂ ಕಾರ್ಯ ನಿರ್ವಹಿಸಿದ್ದರು.ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾಭ್ಯಾಸದ ವೇಳೆ ಎಬಿವಿಪಿಯಲ್ಲಿ ಗುರುತಿಸಿಕೊಂಡಿದ್ದ ಇವರು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಆರಂಭದಲ್ಲಿ ಬಿಜೆಪಿಯಲ್ಲಿದ್ದ ಇವರು ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದರು.1985ರ ಅವಧಿಯಲ್ಲಿ ಕೋಡಿಂಬಾಡಿ ಮಿತ್ರಮಂಡಳಿ ಆರಂಭಿಸಿದ್ದ ರಾಜೇಂದ್ರ ಆರಿಗ ಅವರು ಕುಖ್ಯಾತ ದರೋಡೆಕೋರ ರಿಪ್ಪರ್ ಚಂದ್ರನ್ ಹಾವಳಿ ಇದ್ದ ಸಮಯದಲ್ಲಿ ಸ್ವಂತ ಕುದುರೆಯಲ್ಲಿ ರಾತ್ರಿ ವೇಳೆ ಓಡಾಟ ನಡೆಸಿ ಜನರಿಗೆ ಧೈರ್ಯ ತುಂಬಿದ್ದರು.19 ವರ್ಷಗಳ ಹಿಂದೆ ನಡೆದ ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ ಅವರ ಮುಗುರು ತೆಲಿಕೆ' ನಾಟಕದಲ್ಲಿ ಅಭಿನಯಿಸಿದ್ದ ರಾಜೇಂದ್ರ ಆರಿಗ ಅವರು ಬಳಿಕ
ಮುಗುರು ತೆಲಿಕೆ ಆರಿಗ’ ಎಂದೇ ಜನಪ್ರಿಯರಾಗಿದ್ದರು.14 ವರ್ಷಗಳ ಹಿಂದೆ ಜರಗಿದ್ದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇಳೆ ರಾಜೇಂದ್ರ ಆರಿಗ ಅವರು ರಚಿಸಿದ್ದ ‘ಕೋಲ’ ನಾಟಕ ಗಮನ ಸೆಳೆದಿತ್ತು.ಈ ನಾಟಕದಲ್ಲಿ ಪುತ್ತೂರಿನ ಈಗಿನ ಶಾಸಕ ಅಶೋಕ್ ಕುಮಾರ್ ರೈ ಅವರೂ ಅಭಿನಯಿಸಿದ್ದರು.ಕೋಡಿಂಬಾಡಿಯ ಸಮಗ್ರ ಮಾಹಿತಿಯನ್ನೊಳಗೊಂಡಿರುವ ಕೈಪಿಡಿಯೊಂದನ್ನೂ ಇವರು ರಚಿಸಿದ್ದರು.
ಕೋಡಿಂಬಾಡಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯಲ್ಲಿಯೂ ಕೆಲವು ಸಮಯ ತೊಡಗಿಸಿಕೊಂಡಿದ್ದ ಆರಿಗರು ಹತ್ತು ವರ್ಷಗಳ ಹಿಂದೆ ದಾರಂದಕುಕ್ಕು ಬಳಿ ರಸ್ತೆ ಅಪಘಾತದಲ್ಲಿ ಗಾಯಗೊಂಡ ಬಳಿಕ ಹೆಚ್ಚಾಗಿ ಮನೆಯಲ್ಲಿಯೇ ಇರುತ್ತಿದ್ದರು.ಮೂರು ದಿನಗಳ ಹಿಂದೆ ತೀವ್ರ ಅಸ್ವಸ್ಥಗೊಂಡ ರಾಜೇಂದ್ರ ಆರಿಗರವರು ಮೇ 16ರಂದು ಇಹಲೋಕ ತ್ಯಜಿಸಿದ್ದಾರೆ.ಮೃತರು ಪತ್ನಿ ಆಶಾ, ಪುತ್ರ ಆಶಿಕ್ ಆರಿಗ,ಖಾಸಗಿ ನ್ಯೂಸ್ ಚಾನೆಲ್ನಲ್ಲಿ ಸಿಬ್ಬಂದಿಗಳಾಗಿರುವ ಮಗಳು ಆಕರ್ಷ್ ಆರಿಗ ಮತ್ತು ಪೌಧನ್ ಜೈನ್ ಅವರನ್ನು ಅಗಲಿದ್ದಾರೆ.
ಮೇ 17:ಅಂತ್ಯಕ್ರಿಯೆ:
ಮೃತರ ಅಂತ್ಯಕ್ರಿಯೆ ಮೇ 17ರಂದು ನಿಡ್ಯೆ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.