ಉಪ್ಪಿನಂಗಡಿ: ಹೆದ್ದಾರಿ ವಿಸ್ತರಣಾ ಕಾಮಗಾರಿಗೆ ಅಗತ್ಯವಾದ ಕಟ್ಟಡ ತೆರವುಗೊಳಿಸದೆ ತಡೆಯೊಡ್ಡುವ ಖಾಸಗಿ ಸ್ವಾಮ್ಯದ ಕಟ್ಟಡ ಮಾಲಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರ ವೆಚ್ಚದಲ್ಲಿಯೇ ಕಟ್ಟಡವನ್ನು ತೆರವುಗೊಳಿಸಲು ಪಂಚಾಯತ್ ಆಡಳಿತ ಪೊಲೀಸ್ ರಕ್ಷಣೆಯಲ್ಲಿ ಮುಂದಾಗಬೇಕೆಂದು ಪುತ್ತೂರು ಸಹಾಯಕ ಕಮಿಷನರ್ ಜುಬಿನ್ ಮೊಹಾಪಾತ್ರ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಉಪ್ಪಿನಂಗಡಿಯ ಹೆದ್ದಾರಿ ವಿಸ್ತರಣೆಯ ಕಾಮಗಾರಿಯ ಅಗತ್ಯ ಕಾರ್ಯಗಳಿಗೆ ಮೇ.2 ರಂದು ನೀಡಿದ್ದ ಕಾಲಮಿತಿಯಲ್ಲಿ ನಡೆದಿರುವ ಪ್ರಗತಿಯನ್ನು ಪರಿಶೀಲಿಸಲು ಶುಕ್ರವಾರ ಉಪ್ಪಿನಂಗಡಿಗೆ ಆಗಮಿಸಿದ್ದ ವೇಳೆ ಹೆದ್ದಾರಿ ಪಾರ್ಶ್ವದ ವಾಣಿಜ್ಯ ಮಳಿಗೆಯೊಂದರ ಇಳಿಸಿ ಕಟ್ಟಲಾದ ರಚನೆಯನ್ನು ತೆರವುಗೊಳಿಸದೆ ನಮಗೆ ನಿರ್ದೇಶಿತ ಕಾಮಗಾರಿಯನ್ನು ನಡೆಸಲು ಅಸಾಧ್ಯವಾಗಿದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು. ಈ ವೇಳೆ ಹೆದ್ದಾರಿ ವಿಸ್ತರಣಾ ಕಾಮಗಾರಿಗೆ ಸಂಬಂಧಿಸಿ ಎಷ್ಟು ಭೂಮಿಯ ಅಗತ್ಯತೆ ಇದೆಯೋ ಅಷ್ಟು ಭೂಮಿಯನ್ನು ಸರಕಾರ ಪರಿಹಾರ ಧನವನ್ನು ವಿತರಿಸಿ ಸ್ವಾಧೀನಪಡಿಸಲಾಗಿದೆ. ಪರಿಹಾರ ಧನವನ್ನು ಸ್ವೀಕರಿಸಿದ ಬಳಿಕವೂ ಕಟ್ಟಡ ತೆರವುಗೊಳಿಸದೆ ಕಾಮಗಾರಿಗೆ ತಡೆಯೊಡ್ಡುವ ಕಟ್ಟಡದ ಮಾಲಕರನ್ನು ಕ್ರಿಮಿನಲ್ ಮೊಕದ್ದಮೆಯಡಿ ಕಾನೂನು ಕ್ರಮಕ್ಕೆ ಒಳಪಡಿಸಿ, ಹಾಗೂ ಕಟ್ಟಡವನ್ನು ತೆರವುಗೊಳಿಸಿ ಅದರ ಸಂಪೂರ್ಣವೆಚ್ಚವನ್ನು ಆ ಕಟ್ಟಡದ ಮಾಲಕರಿಂದ ವಸೂಲು ಮಾಡಬೇಕು. ಹಾಗೂ ಸದ್ರಿ ಕಟ್ಟಡದ ಶೌಚಾಲಯದ ತ್ಯಾಜ್ಯವನ್ನು ಸಾರ್ವಜನಿಕ ಚರಂಡಿಗೆ ಬಿಡುತ್ತಿರುವ ಬಗ್ಗೆಯೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದರು.
ಪೇಟೆಯ ಪ್ರಧಾನ ಚರಂಡಿಯ ನಿರ್ಮಾಣ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದ ಅವರು ಮುಂದಿನ 5 ದಿನಗಳ ಒಳಗಾಗಿ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಹೆದ್ದಾರಿ ಬದಿಯ ತಡೆಗೋಡೆಯ ನಿರ್ಮಾಣದ ಕಾರ್ಯವನ್ನು ಮುಂದಿನ ಹತ್ತು ದಿನಗಳ ಒಳಗಾಗಿ ಪೂರ್ಣಗೊಳಿಸಿ ಸರ್ವೀಸ್ ರಸ್ತೆಯ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ನಡೆಸಬೇಕು. ಹೆದ್ದಾರಿ ಬದಿಯ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖಾಧಿಕಾರಿಗಳು ತಕ್ಷಣವೇ ಅನುಮತಿಯನ್ನು ನೀಡಬೇಕೆಂದು ಸ್ಥಳದಲ್ಲೇ ಆದೇಶಿಸಿದರು. ನಟ್ಟಿಬೈಲು ಕೃಷಿ ಭೂಮಿಗೆ ಚರಂಡಿ ನೀರು ಹರಿಯದಂತೆ ಆ ಭಾಗದ ತಡೆಗೋಡೆ ನಿರ್ಮಾಣ ಮತ್ತು ಚರಂಡಿ ನಿರ್ಮಾಣವನ್ನು ಆದ್ಯತೆಯಲ್ಲಿ ತ್ವರಿತಗೊಳಿಸಬೇಕೆಂದರು. ಒಟ್ಟಾರೆ ಉಪ್ಪಿನಂಗಡಿ ಪೇಟೆಯೊಳಗೆ ಯಾವುದೇ ಅವ್ಯವಸ್ಥೆ ಕಾಣಿಸಿಕೊಳ್ಳಬಾರದೆಂದು ಸಂಬಂಧಪಟ್ಟ ವಿವಿಧ ಇಲಾಖಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಭೇಟಿಯ ವೇಳೆ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್, ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಪ್ರೆಡ್ ಲಾರೆನ್ಸ್ ರೋಡ್ರಿಗಸ್, ಪಂಚಾಯತ್ ಸದಸ್ಯರಾದ ಯು.ಟಿ. ತೌಸೀಫ್, ಧನಂಜಯ್ ನಟ್ಟಿಬೈಲ್, ಗ್ರಾಮಕರಣಿಕ ನರಿಯಪ್ಪ, ಗ್ರಾಮ ಸಹಾಯಕ ಯತೀಶ್ ಮಡಿವಾಳ, ಹೆದ್ದಾರಿ ಇಲಾಖಾ ಸಂಬಂಧಿತ ಅಧಿಕಾರಿಗಳಾದ, ಶಿವಪ್ರಸಾದ್, ವಿವೇಕಾನಂದ, ರವಿ , ರಘುನಾಥ ರೆಡ್ಡಿ , ಮಹೇಂದ್ರ ಸಿಂಗ್, ವಾಣಿಜ್ಯ ಮತ್ತು ಕೈಗಾರಿಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್, ರೈತ ಸಂಘದ ರೂಪೇಶ್ ರೈ, ಪ್ರಮುಖರಾದ ನಾಗೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.