ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ʼವಿದ್ಯಾಧ್ವನಿʼ – ಶಿಕ್ಷಕರ ಕಲಿಕಾ ಕಾರ್ಯಾಗಾರ

0

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪೂರ್ವಾರಂಭ ಯೋಜನೆಯಾದ ಶಿಕ್ಷಕರ ಕಲಿಕಾ ಕಾರ್ಯಾಗಾರವನ್ನು ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯಗುರು ಸತೀಶ್ ಭಟ್ ಬಿಳಿನೆಲೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಶಾಲಾ ಶೈಕ್ಷಣಿಕ ವರ್ಷದ ಯೋಜನೆಯ ಗುರಿ, ಉದ್ದೇಶ, ಕಾರ್ಯ ಸಾಧನೆಗಳ ಬಗ್ಗೆ ತಿಳಿಸುತ್ತಾ ಶಿಕ್ಷಕರಾದ ನಾವು ಮಕ್ಕಳಲ್ಲಿರುವ ವೈಯಕ್ತಿಕ ವಿಭಿನ್ನತೆಗನುಗುಣವಾಗಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಶೈಕ್ಷಣಿಕ ಯೋಜನೆಯನ್ನು ರೂಪಿಸಬೇಕಾದ ಅಗತ್ಯತೆಯನ್ನು ತಿಳಿಸಿದರು.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ| ಶಿಲ್ಪಾ ಹೆಗ್ಡೆ ಇವರು ವಿಶೇಷ ಅಗತ್ಯವುಳ್ಳ ಮಕ್ಕಳ ದೈಹಿಕ ಮಾನಸಿಕ, ಬೌದ್ಧಿಕ, ಸಾಮಾಜಿಕ ಬೆಳವಣಿಗೆಯಲ್ಲಿ ಕಂಡುಬರುತ್ತಿರುವ ವ್ಯತ್ಯಾಸಗಳನ್ನು ಗುರುತಿಸಿ ಆರಂಭದಲ್ಲೇ ಚಿಕಿತ್ಸೆ ನೀಡುವ ವಿಧಿ- ವಿಧಾನಗಳನ್ನು ಶಿಕ್ಷಕರಾದವರು ತಿಳಿದಿರಬೇಕಾದ ಅಗತ್ಯತೆಯನ್ನು ತಿಳಿಸಿದರು.
ಕಾರ್ಯಾಗಾರದ ಎರಡನೇ ದಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|ಕಲ್ಲಡ್ಕ ಪ್ರಭಾಕರ ಭಟ್ ವಿವೇಕಾನಂದ ವಿದ್ಯಾಸಂಸ್ಥೆಗಳ ಧ್ಯೇಯ – ಉದ್ದೇಶಗಳನ್ನು ತಿಳಿಸುತ್ತಾ ಶಾಲೆಯು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗುತ್ತಾ ಮುನ್ನಡೆಯಲು ಪಠ್ಯದೊಂದಿಗೆ ಮಕ್ಕಳಲ್ಲಿ ಧೈರ್ಯ, ಭಾರತೀಯತೆಯ ಪ್ರಜ್ಞೆ ಬೆಳೆಸುವಲ್ಲಿ ಶಿಕ್ಷಕರು ಕಾರ್ಯನಿರತರಾಗಬೇಕು ಎಂದು ತಿಳಿಸಿದರು.


ಬಳಿಕ ತರಗತಿ ಹಾಗೂ ಶಾಲಾ ವಾರ್ಷಿಕ ಯೋಜನಾ ತಯಾರಿ, ತಾಂತ್ರಿಕ ಮಾಹಿತಿ, ಪ್ರಸಕ್ತ ವರ್ಷದ ಸಮಯ ಸಾರಿಣಿಯಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಚರ್ಚಾ ಅವಧಿಗಳು ನಡೆಯಿತು. ಕಾರ್ಯಾಗಾರದ ವೀಡಿಯೋ ಕ್ಲಿಪಿಂಗ್ ಹಾಗೂ ಪೋಸ್ಟರ್ ತಯಾರಿ ಸ್ಪರ್ಧಾ ವಿಜೇತ ಶಿಕ್ಷಕರಿಗೆ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ನಳಿನಿ ವಾಗ್ಲೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷ ರಮೇಶ್ಚಂದ್ರ, ಸಂಚಾಲಕ ವಸಂತ ಸುವರ್ಣ, ಕೋಶಾಧಿಕಾರಿ ಅಶೋಕ್ ಕುಂಬ್ಳೆ ಉಪಸ್ಥಿತರಿದ್ದರು.

ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಕಾರ್ಯಯೋಜನೆಯ ರೂಪುರೇಷೆಗಳನ್ನು ತಿಳಿಸುತ್ತಾ ಶಾಲಾ ಶಿಕ್ಷಕರ ಅಧ್ಯಯನ ಅಧ್ಯಾಪನವು ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here