ಪುತ್ತೂರು : ನನಗಾದ ಅನ್ಯಾಯಕ್ಕೆ ಪೊಲೀಸರಿಗೆ ದೂರು ನೀಡಿ ವರ್ಷ ಒಂದು ಸಂದರೂ ಇನ್ನೂ ನನಗೆ ನ್ಯಾಯ ಸಿಕ್ಕಿಲ್ಲ ಎಂದು ಕೊಡಿಪ್ಪಾಡಿ ಗ್ರಾಮದ ಪಳ್ಳತ್ತಾರು ನಿವಾಸಿ ಅಶ್ರಫ್ ಅವರು ಆರೋಪಿಸಿದ್ದಾರೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ ಕಾರು ಖರೀದಿ ವ್ಯವಹಾರ, ಹಲ್ಲೆ ಘಟನೆ ಮತ್ತು ಪಾಸ್ಪೋರ್ಟ್ ವಿಚಾರದಲ್ಲಿ ನ್ಯಾಯಕೊಡಿಸದೆ ಪೊಲೀಸರು ತನ್ನನ್ನು ಸತಾಯಿಸುತ್ತಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಕುಂಬ್ರದ ವ್ಯಕ್ತಿಯೊಬ್ಬರಿಂದ ಕಾರು ಖರೀದಿ ಮಾಡಿರುವ ವ್ಯವಹಾರಕ್ಕೆ ಸಂಬಂಧಿಸಿದ ಹಣಕಾಸಿನ ವಿಚಾರ ಹಾಗೂ ಇದೇ ವಿಚಾರಕ್ಕೆ ಸಂಬಂಧಿಸಿ ತನ್ನ ಮೇಲೆ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದರೂ ನನಗೆ ನ್ಯಾಯ ಸಿಕ್ಕಿಲ್ಲ. ಕಳೆದ ಒಂದು ವರ್ಷದಿಂದ ಪೊಲೀಸರು ದಾಖಲೆ ಸರಿಯಿಲ್ಲ, ಸಾಕ್ಷಿ ಸರಿಯಲ್ಲ ಎಂದು ಸತಾಯಿಸುತ್ತಾ ಬಂದಿದ್ದಾರೆ. ಕೇಸು ದಾಖಲಿಸಿಕೊಂಡಿದ್ದರೂ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುವ ಕೆಲಸವನ್ನು ಈ ತನಕ ಮಾಡಿಲ್ಲ. ಈ ಕುರಿತು ದೂರು ನೀಡಲು ಪೊಲೀಸ್ ಮೇಲಾಧಿಕಾರಿಗಳ ಬಳಿಗೆ ಹೋದಾಗ ಅವರು ಹೆದರಿಸಿ ಕಳಿಸಿದ್ದಾರೆ. ತನ್ನ ಮೇಲೆ ಹಲ್ಲೆ ನಡೆಸಿದವರ ಪರವಾಗಿ ಪೊಲೀಸರು ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ.
ಪಾಸ್ ಪೋರ್ಟ್ ವಿಚಾರದಲ್ಲೂ ನ್ಯಾಯ ಸಿಕ್ಕಿಲ್ಲ:
ಪಾಸ್ಪೋರ್ಟ್ ವಿಚಾರದಲ್ಲೂ ನಮಗೆ ಪೊಲೀಸ್ ಇಲಾಖೆಯಿಂದ ನ್ಯಾಯ ಸಿಕ್ಕಿಲ್ಲ. ಕೊಡಿಪ್ಪಾಡಿ ಗ್ರಾಮದ ಪಳ್ಳತ್ತಾರು ಎಂಬಲ್ಲಿ ಶಾಶ್ವತ ವಾಸ್ತವ್ಯ ವಿಳಾಸ ಹೊಂದಿದ್ದರೂ ದಾಖಲೆಗಳ ನೆಪದಲ್ಲಿ ಪುತ್ತೂರು ನಗರ ಪೊಲೀಸರು ತನ್ನನ್ನು ಸತಾಯಿಸುತ್ತಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರೂ ಪೊಲೀಸರು ಮಾಹಿತಿ ನೀಡುತ್ತಿಲ್ಲ. ಮಾಹಿತಿ ಕಾಯ್ದೆಯ ಉಲ್ಲಂಘನೆ ಮಾಡಲಾಗುತ್ತಿದೆ. ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆಗಳೇ ಹೀಗಾದರೆ ನಮ್ಮ ಸಂವಿಧಾನಬದ್ಧ ಹಕ್ಕಿಗೆ ಬೆಲೆ ಎಲ್ಲಿದೆ ಎಂದು ಅವರು ಪೊಲೀಸ್ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.