ಪುತ್ತೂರು: ಫ್ಲಿಪ್ ಕಾರ್ಟ್ನಲ್ಲಿ ಡ್ರೆಸ್ ಆರ್ಡರ್ ಮಾಡಿದ ಮಹಿಳೆಯೋರ್ವರು ಮೋಸ ಹೋಗಿರುವ ಘಟನೆ ಮುಂಡೂರು ಸಮೀಪದ ಪಂಜಳದಿಂದ ವರದಿಯಾಗಿದೆ.
ಪಂಜಳದ ಹಾಜಿರಾ ಎಂಬವರು ಜು.15ರಂದು ಫ್ಲಿಪ್ ಕಾರ್ಟ್ನಲ್ಲಿ ಡ್ರೆಸ್ ಆರ್ಡರ್ ಮಾಡಿದ್ದರು.
ಮರುದಿನ ಅಂದರೆ ಜು.16ರಂದು ಹಾಜಿರಾ ಅವರ ಮೊಬೈಲ್ಗೆ ಕರೆಯೊಂದು ಬಂದಿದ್ದು ನೀವು ಆರ್ಡರ್ ಮಾಡಿದ ಡ್ರೆಸ್ ನಿಮ್ಮ ಮನೆಗೆ ತಲುಪಿಸಲಿದ್ದು ನೀವು ಈಗ ಹಣ ಪಾವತಿ ಮಾಡಬೇಕು ಎಂದು ಹೇಳಿದ್ದರು. ಅದರಂತೆ ಹಾಜಿರಾ ಅವರು 679 ರೂ. ಅವರು ಹೇಳಿದ ಖಾತೆಗೆ ಹಾಕಿದ್ದರು. ಬಳಿಕ ಅದೇ ವ್ಯಕ್ತಿ ಮತ್ತೆ ಕರೆ ಮಾಡಿ ನೀವು ಹಾಕಿರುವ 679 ರೂ ಹಣ ಬಂದಿದೆ, ಆದರೆ ನೀವು 684 ಮೊತ್ತ ಹಾಕಬೇಕಿತ್ತು, ಹಾಗಾಗಿ 684 ಮೊತ್ತವನ್ನು ಈಗಲೇ ಹಾಕಿ ಎಂದಿದ್ದು ಹಾಜಿರಾ ಅವರು ಆ ಮೊತ್ತವನ್ನೂ ಹಾಕಿದ್ದರು. ಇದೇ ರೀತಿ ಕೆಲವು ಬಾರಿ ಹಣ ಹಾಕಿಸಿದ ವ್ಯಕ್ತಿ ಮತ್ತೊಮ್ಮೆ ಹಣ ಕಳುಹಿಸಲು ಹೇಳಿದ್ದರು. ನೀವು ಈವರೆಗೆ ಕಳುಹಿಸಿದ ಎಲ್ಲ ಮೊತ್ತ ನಿಮಗೆ ವಾಪಸ್ ಬರುತ್ತದೆ ಮತ್ತು ನೀವು ಆರ್ಡರ್ ಮಾಡಿದ ಡ್ರೆಸ್ ನಿಮಗೆ ಫ್ರೀಯಾಗಿ ಸಿಗಲಿದೆ ಎಂದು ಹೇಳಿದ್ದರು. ಹಾಜಿರಾ ಅವರು ಇನ್ನು ಕಳುಹಿಸಲು ನನ್ನಲ್ಲಿ ಹಣ ಇಲ್ಲ ಎಂದಾಗಲೂ ಮತ್ತೆ ಮತ್ತೆ ಹಣ ಕಳುಹಿಸಲು ಹೇಳಿದಾಗ ಸಂಶಯಗೊಂಡ ಹಾಜಿರಾ ಅವರು ತನ್ನ ಮನೆಯವರಿಗೆ ವಿಷಯ ತಿಳಿಸಿದ್ದು ಬಳಿಕ ಇವರು ಮೋಸ ಹೋಗಿರುವ ವಿಚಾರ ಗಮನಕ್ಕೆ ಬಂತು. ಮತ್ತೆ ಅದೇ ವ್ಯಕ್ತಿಯ ಕರೆ ಮಾಡಿದಾಗ ಕರೆ ಸ್ವೀಕರಿಸಿ ಕರೆ ಮಾಡಿದ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆ ವ್ಯಕ್ತಿ ಕರೆಯನ್ನು ಕಡಿತಗೊಳಿಸಿರುವುದಾಗಿ ಹಾಜಿರಾ ಪಂಜಳ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ ಸಂಜೀವ ಕುಮಾರ್ ಎಂದು ಪರಿಚಯಿಸಿಕೊಂಡಿದ್ದು ಅವರ ಫೋಟೋ ಇರುವ ಫ್ಲಿಪ್ ಕಾರ್ಟ್ನ ಐಡಿ ಕಾರ್ಡ್ ಹಾಗೂ ಆಧಾರ್ ಕಾರ್ಡನ್ನು ಕಳುಹಿಸಿ ನಂಬಿಕೆ ಹುಟ್ಟಿಸಿದ್ದರು. ಹಾಜಿರ ಅವರು ಒಟ್ಟು 2746 ರೂ ಕಳೆದುಕೊಂಡಿದ್ದಾರೆ. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಆನ್ಲೈನ್ ಮೂಲಕ ಮೋಸ ಮಾಡುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಜನತೆ ಜಾಗೃತರಾಗುವುದೊಂದೇ ಇದಕ್ಕಿರುವ ಪರಿಹಾರವಾಗಿದೆ.