ಉಪ್ಪಿನಂಗಡಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಜು.17ರ ಮಧ್ಯಾಹ್ನದ ಬಳಿಕ ನೇತ್ರಾವತಿ ನದಿಯಲ್ಲಿ ನೀರಿನ ಪ್ರವಾಹ ಜಾಸ್ತಿಯಾಗಿದ್ದು, ರಾತ್ರಿಯ ವೇಳೆ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿ ನೀರ ಹರಿವು 28.05ಮೀ. ನಷ್ಟು ತಲುಪಿತ್ತು ಎಂದು ವರದಿಯಾಗಿದೆ. ಇಲ್ಲಿನ ಅಪಾಯದ ಮಟ್ಟ 31.05 ಆಗಿದೆ.
ಉಪ್ಪಿನಂಗಡಿಯಲ್ಲಿ ಜು.16ರಂದು 74.02 ಸೆಂ.ಮೀ. ಮಳೆಯಾಗಿದ್ದರೆ, ಜು.17ರಂದು ಬೆಳಗ್ಗೆ 37.6 ಸೆಂ.ಮೀ. ಮಳೆ ದಾಖಲಾಗಿದೆ. ಆದರೆ ಪಶ್ಚಿಮ ಘಟ್ಟ ಪ್ರದೇಶಗಳಾದ ಕೊಟ್ಟಿಗೆ ಹಾರ, ಚಾರ್ಮಾಡಿ, ಸಕಲೇಶಪುರ, ಗುಂಡ್ಯ ಪ್ರದೇಶದಲ್ಲಿ ಇಂದು ಉತ್ತಮ ಮಳೆಯಾಗಿದ್ದು, ಇದರಿಂದ ಮಧ್ಯಾಹ್ನ ಬಳಿಕ ನೇತ್ರಾವತಿ ನದಿ ನೀರಿದ ಮಟ್ಟ ಏರಿಕೆ ಕಾಣುತ್ತಲೇ ಇದೆ. ಕಳೆದೆರಡು ದಿನಗಳಲ್ಲಿ ಕುಮಾರಧಾರಾ ನದಿಯಲ್ಲಿ ಮಾತ್ರ ನೀರಿನ ಪ್ರಮಾಣವು ಹೆಚ್ಚಳವಾಗಿದ್ದು, ಸಹಜವಾಗಿ ನದಿ ಪಾತ್ರದಲ್ಲಿನ ತಗ್ಗು ಪ್ರದೇಶಗಳ ಕೃಷಿ ಭೂಮಿಯು ಜಲಾವೃತಗೊಂಡಿದೆ.
ಕುಮಾರಧಾರಾ ಮತ್ತು ನೇತ್ರಾವತಿ ನದಿಗಳ ಸಂಗಮ ಸ್ಥಾನದ ಬಳಿಯಲ್ಲಿ ಶಂಭೂರು ಡ್ಯಾಂನವರು ಅಳವಡಿಸದಿರುವ ಅಳತೆ ಮಾಪನದಲ್ಲಿ ದಾಖಲಾಗಿರುವ ಪ್ರಕಾರ ಬುಧವಾರ ರಾತ್ರಿಯ ಹೊತ್ತಿನಲ್ಲಿ ನದಿ ಸಮುದ್ರ ಮಟ್ಠದಿಂದ 28.05 ಮೀಟರ್ ಎತ್ತರದಲ್ಲಿ ಹರಿಯುತ್ತಿರುವುದು ಕಂಡು ಬಂದಿದೆ. ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಸ್ನಾನ ಘಟ್ಟದ ಬಳಿ ನದಿಗಿಳಿಯಲು ಇರುವ 36 ಮೆಟ್ಟಿಲುಗಳ ಪೈಕಿ ರಾತ್ರಿಯ ಹೊತ್ತಿಗೆ 7 ಮೆಟ್ಟಿಲು ಮಾತ್ರ ಕಾಣುತ್ತಿದ್ದು, 29 ಮೆಟ್ಟಿಲುಗಳು ಮುಳುಗಡೆಯಾಗಿವೆ. ದೇವಾಲಯದ ಬಳಿ ಗೃಹ ರಕ್ಷಕದ ದಳದ ಪ್ರವಾಹ ರಕ್ಷಣಾ ತಂಡ ಬೀಡು ಬಿಟ್ಟಿದ್ದು, ಸನ್ನದ್ಧ ಸ್ಥಿತಿಯಲ್ಲಿದೆ.