ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಮಾಹಿತಿ ಕಾರ್ಯಾಗಾರ

0

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ನೇತಾಜಿ ಸಭಾಂಗಣದಲ್ಲಿ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆ ಮಾಹಿತಿ ಕಾರ್ಯಾಗಾರವು ಕಲಾಸಂಘದ ಆಶ್ರಯದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಪಿ.ಎಸ್.ಐ ಸವಿತಾ ಎಂ.ವಿ, ಮಾತನಾಡಿ “18 ವರ್ಷದೊಳಗಿನ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಇತ್ತೀಚೆಗೆ ಮೊಬೈಲ್‌,ಇಂಟರ್ನೆಟ್‌, ಕೃತಕ ಬುದ್ಧಿಮತ್ತೆಯಿಂದಾಗಿ ಹಲವಾರು ಅನಾಹುತಗಳು ನಡೆಯುತ್ತಿದ್ದು, ಇದರ ಬಗ್ಗೆ ಮಕ್ಕಳು ಬಹಳ ಎಚ್ಚರಿಕೆ ವಹಿಸಬೇಕು.” ಎಂದು ಹೇಳುತ್ತಾ , ಪೋಕ್ಸೋ ಕಾಯ್ದೆ, ಅದರ ಉದ್ದೇಶ, ಲಿಂಗ ತಾರತಮ್ಯ ಇಲ್ಲದೆ ದೌರ್ಜನ್ಯಕ್ಕೊಳಗಾದ ಮಕ್ಕಳಿಗೆ ಈ ಕಾಯ್ದೆಯಲ್ಲಿ ಯಾವ ರೀತಿಯ ನ್ಯಾಯ ದೊರಕಬಹುದು, ಅಂತೆಯೇ  ಬಾಲ್ಯ ವಿವಾಹ, ಬಾಲಕಾರ್ಮಿಕತೆ, ಇಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಅರಿವು ಮೂಡಿಸಿದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಥಶಾಸ್ತ್ರ  ವಿಭಾಗ ಮುಖ್ಯಸ್ಥರಾದ ಯಶವಂತಿ.ಡಿ ವಹಿಸಿಕೊಂಡು “ನಿತ್ಯಜೀವನದಲ್ಲಿ ನಮಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಒಮ್ಮೊಮ್ಮೆ ಇದಕ್ಕೆ ತಕ್ಕ ಪರಿಹಾರವನ್ನು ಹುಡುಕುವುದು ಸಾಧ್ಯವಾಗದಿರಬಹುದು.ಇಂತಹ ಮಾಹಿತಿ ಕಾರ್ಯಾಗಾರಗಳು ಈ ನಿಟ್ಟಿನಲ್ಲಿ ನಮಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತವೆ.” ಎಂದು ಹೇಳಿದರು.

ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾ ಘಟಕದ ಸದಸ್ಯರಾದ ಮಾಧವಿ ಪಟೇಲ್‌ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಮಹಿಳಾ ಕಾನ್ ಸ್ಟೇಬಲ್ ಮಂಜುಳಾ, ಕಾಲೇಜಿನ  ಉಪನ್ಯಾಸಕಿಯರು, ವಿದ್ಯಾರ್ಥಿಗಳು ಪಾಲ್ಗೊಂಡರು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪ್ರಾರ್ಥಿಸಿದರು. ಉಪನ್ಯಾಸಕಿ ಮೋನಿಷಾ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ,  ವಂದಿಸಿದರು.    

LEAVE A REPLY

Please enter your comment!
Please enter your name here