ಉಪ್ಪಿನಂಗಡಿ: ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲೆ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೆವಿದ್ಯಾರ್ಥಿ ಸಂಘ ಇವರ ಸಹಭಾಗಿತ್ವದಲ್ಲಿ ನ್ಯೂ ವಿಷನ್ ಜನರೇಷನ್ ಪ್ರೋಗ್ರಾಮ್ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ ಆ.9ರಂದು ಹೊಸಗದ್ದೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು.
ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್.ಉದ್ಘಾಟಿಸಿ ಕಣ್ಣಿನ ಪ್ರಯೋಜನ ಹಾಗೂ ಕಣ್ಣಿನ ರಕ್ಷಣೆ ಜವಾಬ್ದಾರಿಯ ಬಗ್ಗೆ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷೆ ವಸಂತಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಉಪಾಧ್ಯಕ್ಷ ದೇವಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಣ್ಣಿನ ತಜ್ಞ ವೈದ್ಯರಾದ ಡಾ.ರಾಮಚಂದ್ರ, ಡಾ.ಅಭಿಷೇಕ್ ಮತ್ತು ತಂಡದವರು ಮಾಹಿತಿ ನೀಡಿ ಕಣ್ಣಿನ ತಪಾಸಣೆ ನಡೆಸಿದರು. ಶಾಲಾ ಮುಖ್ಯಗುರು ವಿದ್ಯಾ ಕೆ.ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕಿ ಪುನಂತೇಶ್ವರಿ ನಿರೂಪಿಸಿದರು. ಅತಿಥಿ ಶಿಕ್ಷಕಿಯರಾದ ಚಿತ್ರಾವತಿ, ಪವಿತ್ರ ಸಹಕರಿಸಿದರು. ಶಾಲಾ ಮಕ್ಕಳು, ಶಿಕ್ಷಕರು, ಪೋಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಂಡರು.