ಪುಡಾ ಅಧ್ಯಕ್ಷರ ಆಯ್ಕೆಗಾಗಿ ರಾಜಕೀಯ ಮೇಲಾಟ

0

ಪುತ್ತೂರು:ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ನ್ಯಾಯವಾದಿ,ನೋಟರಿ ಭಾಸ್ಕರ ಕೋಡಿಂಬಾಳ ಅವರ ರಾಜೀನಾಮೆಯಿಂದ ತೆರವಾಗಿರುವ ಹುದ್ದೆಗೆ ನೂತನ ಅಧ್ಯಕ್ಷರ ಆಯ್ಕೆಗಾಗಿ ಕಾಂಗ್ರೆಸ್‌ನ ಕೆಲವು ಪ್ರಮುಖರ ಹೆಸರು ಕೇಳಿ ಬರುತ್ತಿದ್ದು ರಾಜಕೀಯ ಮೇಲಾಟ ನಡೆಯುತ್ತಿದೆ.


ಸೆ.2ರಂದು ಪುತ್ತೂರಿಗೆ ಆಗಮಿಸಿದ್ದ ವಿಧಾನ ಪರಿಷತ್ ಶಾಸಕ,ಸಿಎಂ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವವರೂ ಆಗಿರುವ ಐವನ್ ಡಿ’ಸೋಜಾ ಅವರನ್ನು ಭೇಟಿಯಾದ ಕಾಂಗ್ರೆಸ್‌ನ ಕೆಲವು ಪ್ರಮುಖರು, ಪುಡಾ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಅಭ್ಯರ್ಥಿಯ ಆಯ್ಕೆಗಾಗಿ ಮುಖ್ಯಮಂತ್ರಿಗಳ ಶಿಫಾರಸ್ಸಿಗೆ ಮನವಿ ಮಾಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ.ಐವನ್ ಡಿ’ಸೋಜ ಅವರನ್ನು ಭೇಟಿಯಾಗಿರುವ ಕಾಂಗ್ರೆಸ್ ನಾಯಕ ಹೇಮನಾಥ್ ಶೆಟ್ಟಿಯವರು, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯರಾಗಿರುವ ಲ್ಯಾನ್ಸಿ ಮಸ್ಕರೇನ್ಹಸ್ ಅವರನ್ನೇ ಪುಡಾ ಅಧ್ಯಕ್ಷರಾಗಿ ನೇಮಕಗೊಳಿಸಲು ಮುಖ್ಯ ಮಂತ್ರಿಗಳಿಗೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದ್ದಾರೆಂದೂ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.

ಭಾಸ್ಕರ ಕೋಡಿಂಬಾಳ ಅವರು ಪುಡಾ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ ಬಳಿಕ ಪುಡಾ ಅಧ್ಯಕ್ಷತೆಗೆ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದಾಲಿ, ಪುಡಾ ಸದಸ್ಯರೂ ಆಗಿರುವ ನಗರಸಭೆಯ ಮಾಜಿ ಉಪಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಪುಡಾ ಮಾಜಿ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಮಾಜಿ ಪುರಸಭಾಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಸಹಿತ ಕಾಂಗ್ರೆಸ್‌ನ ಕೆಲವು ಪ್ರಮುಖರ ಹೆಸರು ಕೇಳಿ ಬರುತ್ತಿದೆ.ಇವರಲ್ಲಿ ಯಾರು ಆಯ್ಕೆಯಾಗಲಿದ್ದಾರೆನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here