ಪುತ್ತೂರು: ಪ್ರತೀ ವ್ಯಕ್ತಿಯು ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ನೀಡುತ್ತಾರೆ. ಶಿಕ್ಷಣದ ಮೂಲ ಅರ್ಥವನ್ನು ತಿಳಿಸಿ ವ್ಯಕ್ತಿಯ ಬದುಕನ್ನು ಬೆಳಗುವವರು ಶಿಕ್ಷಕರಾಗಿರುವುದರಿಂದ ಇಡೀ ಪ್ರಪಂಚವೇ ಇವರನ್ನು ಅಗ್ರಸ್ಥಾನದಲ್ಲಿಟ್ಟು ಪೂಜಿಸುತ್ತದೆ ಎಂದು ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ) ಇದರ ಪ್ರಾಂಶುಪಾಲರಾದ ಪ್ರೊ. ವಿಷ್ಣುಗಣಪತಿ ಭಟ್ ಇವರು ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನೋಧರ್ಮದಿಂದ ತತ್ವಜ್ಞಾನಿ, ವೃತ್ತಿಯಿಂದ ಶಿಕ್ಷಕ, ಆಯ್ಕೆಯಿಂದ ರಾಜನೀತಿಜ್ಞ, ಶಿಸ್ತಿನಿಂದ ಆಡಳಿತಗಾರರಾಗಿದ್ದ ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ.
ಬದುಕಿನ ಕೌಶಲಗಳನ್ನೂ ಕಲಿಸುತ್ತಾ ಜೀವನದಲ್ಲಿ ಮುಂದೆ ಸಾಗುವಂತೆ ಮಾಡುವ ಶಿಕ್ಷಕರು ಒಂದರ್ಥದಲ್ಲಿ ನಮ್ಮ ಬದುಕನ್ನು ರೂಪಿಸುವ ಶಿಲ್ಪಿಗಳು.ಗುರುಕುಲ ಶಿಕ್ಷಣದಿಂದ ಹಿಡಿದು ಇಂದಿನ ಶಿಕ್ಷಣದವರೆಗೂ ಶಿಕ್ಷಕರು ಇತರರ ಜೀವನವನ್ನು ರೂಪಿಸಲು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ.ಜೀವನದ ಪ್ರತಿಯೊಂದು ಅಂಶಗಳನ್ನು ತಿದ್ದಿ ತೀಡಿ ಮತ್ತು ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ತಿಳಿಸುತ್ತಾರೆ.ವಿದ್ಯಾರ್ಥಿಗಳ ಬದುಕು ಯಾವಾಗಲೂ ಹಸನಾಗಿರಲಿ ಎಂದು ಹಾರೈಸುವ ಅವರ ಪ್ರಯತ್ನಗಳನ್ನು ಗುರುತಿಸುವುದು ಮತ್ತು ಆಚರಿಸುವುದು ಮುಖ್ಯವಾಗಿದೆ. ಎಂದು ಹೇಳಿದರು.
ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ದೀಪಾ ನಾಯಕ್ ರವರು ಮಾತನಾಡುತ್ತಾ ಯಾವುದೇ ಓರ್ವ ವ್ಯಕ್ತಿ ಯಶಸ್ಸನ್ನು ಸಾಧಿಸಬೇಕೆಂದರೆ ಅವನ ಮುಂದೆ ಗುರಿ ಇರಬೇಕು, ಹಿಂದೆ ಗುರುವಿರಬೇಕು ಎನ್ನುವ ನಂಬಿಕೆಯಿದೆ. ಶಿಕ್ಷಕರಿಲ್ಲದೆ ಜೀವನಕ್ಕೆ ಅಥವಾ ಜ್ಞಾನಕ್ಕೆ ಯಾವುದೇ ರೀತಿಯ ಅರ್ಥವಿರುವುದಿಲ್ಲ. ನಮ್ಮ ಮೊದಲ ಗುರು ತಾಯಿ ನಮಗೆ ಜೀವನದ ಅರ್ಥವನ್ನು ನೀಡುತ್ತಾಳೆ. ಅದೇ ರೀತಿ ಜೀವನಕ್ಕೆ ಅಗತ್ಯವಾದ ಜ್ಞಾನವನ್ನು ಶಿಕ್ಷಕರು ನೀಡುತ್ತಾನೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ರವರು ಮಾತನಾಡುತ್ತಾ ಶಿಕ್ಷಕರು ನಮಗೆ ನೀಡಿದ ಮಾರ್ಗದರ್ಶನ, ನೈತಿಕ ಶಿಕ್ಷಣ,ಸಹಕಾರ,ವ್ಯಕ್ತಿತ್ವ ರೂಪುಗೊಳ್ಳಲು ನೀಡಿದ ಹಿತನುಡಿ ಎಲ್ಲವನ್ನೂ ಸ್ಮರಿಸಿ ಅವರಿಗೆ ಗೌರವ ಸಮರ್ಪಣೆ ನೀಡುವ ದಿನ ಈ ಶಿಕ್ಷಕರ ದಿನ.ನಮ್ಮನ್ನು ಉತ್ತಮ ನಾಗರಿಕರನ್ನಾಗಿ ಮಾಡುವಲ್ಲಿ ಶಿಕ್ಷಕರ ಕೊಡುಗೆ ಅಮೂಲ್ಯ. ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಕರ ಕೆಲಸ ಹಾಗೂ ಪ್ರಾಮುಖ್ಯತೆಗೆ ಈ ದಿನವನ್ನು ಸಮರ್ಪಿಸಲಾಗಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ದೀಪಾ ನಾಯಕ್, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಮತ್ತು ಎಲ್ಲಾ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವರ್ಗದವರು ಉಪಸ್ಥಿತರಿದ್ದರು.
ಕಾರ‍್ಯಕ್ರಮದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಆಶಿಕಾ ರಾವ್ ಸ್ವಾಗತಿಸಿ,ಪ್ರಥಮ ವಾಣಿಜ್ಯ ವಿಭಾಗದ ಹರ್ಷಿತಾ ವಂದಿಸಿದರು. ದ್ವಿತೀಯ ವಾಣಿಜ್ಯ ವಿಭಾಗದ ಗುರುದೀಪ್ ಕಾರ‍್ಯಕ್ರಮವನ್ನು ನಿರೂಪಿಸಿದರು.