ವಿಮಾನಯಾನದ ಉದ್ಯೋಗವಕಾಶಕ್ಕೆ ಹೊಸ ದಾರಿ ತೋರಿದ ಸ್ಕೈಬರ್ಡ್ ಏವಿಯೇಷನ್‌ನ ಪ್ರಾಂಚೈಸಿ – ಶ್ರೀಪ್ರಗತಿ ವಿಸ್ತಾರ ಏವಿಯೇಷನ್ ಮ್ಯಾನೇಜ್‌ಮೆಂಟ್ ಕಾಲೇಜು ಉದ್ಘಾಟನೆ

0

ಪುತ್ತೂರು: ಬೆಂಗಳೂರಿನ ಸ್ಕೈಬರ್ಡ್ ಏವಿಯೇಷನ್ ಸಂಸ್ಧೆಯ ಅಧಿಕೃತ ಪ್ರಾಂಚೈಸಿ ಸಂಸ್ಧೆ ಶ್ರೀಪ್ರಗತಿ ವಿಸ್ತಾರ ಏವಿಯೇಷನ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು ಅ.3ರಂದು ಎಪಿಎಂಸಿ ರಸ್ತೆಯಲ್ಲಿರುವ ಮನಾಯ್ ಆರ್ಕ್‌ನಲ್ಲಿ ಆರಂಭಗೊಂಡಿತು. ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಸ್ಥೆಯ ಸಂಪೂರ್ಣ ಹವಾನಿಯಂತ್ರಿತ ಕಛೇರಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸ್ಕೈಬರ್ಡ್ ಏವಿಯೇಷನ್ ಸಂಸ್ಧೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುಜಾತ ವಿಮಾನಯಾನ ತರಬೇತಿಯ “ಮಾಕ್” ವಿಮಾನ ಕ್ಲಾಸ್ ರೂಮ್‌ನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಸ್ಕೈಬರ್ಡ್ ಏವಿಯೇಷನ್ ಸಂಸ್ಥೆಯ ಪ್ರಾಂಶುಪಾಲ ಕೆಂಪರಾಜು ತರಗತಿ ಕೊಠಡಿಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಮಹಾನಗರದ ಶಿಕ್ಷಣ ಅವಕಾಶಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಸಿಗಬೇಕು-ನಳಿನ್ ಕುಮಾರ್:
ಕಛೇರಿ ಉದ್ಘಾಟಿಸಿದ ನಳಿನ್ ಕುಮಾರ್ ಮಾತನಾಡಿ ಪುತ್ತೂರಿನಲ್ಲಿ ನೂತನವಾಗಿ ವಿದ್ಯಾಸಂಸ್ಥೆ ಪ್ರಾರಂಭವಾಗಿದೆ. ದೇಶದಾದ್ಯಂತ ಸ್ಕೈಬರ್ಡ್ ಶಿಕ್ಷಣ ಸಂಸ್ಥೆ ಕಾರ್ಯಾಚರಿಸುತ್ತಿದೆ. ವಿಮಾನಯಾನದಲ್ಲಿ ಇರುವಂತಹ ಉದ್ಯೋಗವಕಾಶ ಪಡೆಯಲು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸಂಸ್ಥೆ ಆರಂಭವಾಗಿದೆ. ಕೌಶಲ್ಯಾಭಿವೃದ್ಧಿಯಲ್ಲಿ ಹೆಚ್ಚಿನ ಉದ್ಯೋಗಗಳ ಸದ್ಬಳಕೆ ಆಗಬೇಕು. ಮಹಾನಗರದಲ್ಲಿರುವಂತಹ ಶಿಕ್ಷಣದ ಅವಕಾಶಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಸಿಗಬೇಕು. ಎಂದು ಹೇಳಿ ಅಭಿನಂದನೆ ಸಲ್ಲಿಸಿದರು.

ಎಂಟೆದೆಯಿಂದ ಹೊಸ ಸಾಹಸ ಮಾಡಿದ್ದಾರೆ-ಡಾ.ಯು.ಪಿ.ಶಿವಾನಂದ:
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಮಾತನಾಡಿ ಇವತ್ತು ವಿಮಾನಯಾನದ ಅನುಭವವಾಗಿದೆ. ಇಂತಹ ಸಾಹಸ ಮಾಡಲು ಎಂಟೆದೆ ಬೇಕು. ಬಹಳ ಧೈರ್ಯಬದ್ಧ ಕೆಲಸ ಮಾಡಿದ್ದಾರೆ. ಪುತ್ತೂರಿಗೆ ಹೊಸ ಆಯಾಮ ಕೊಟ್ಟಿದ್ದಾರೆ. ಪುತ್ತೂರು ಜಿಲ್ಲೆಯಾಗುವಂತಹ ಸಂದರ್ಭದಲ್ಲಿ ಇದೊಂದು ಪೂರಕವಾಗಿದೆ ಎಂದರು. ಫೈಲಾದ ವಿದ್ಯಾರ್ಥಿಗಳಿಗೆ ನೇರವಾಗಿ ಪರೀಕ್ಷೆಯ ವ್ಯವಸ್ಥೆ ಮಾಡಿ ಎಷ್ಟೋ ಕುಟುಂಬವನ್ನು ರಕ್ಷಿಸಿದ್ದಾರೆ. ಕೊರೋನಾ ಕಾಲದಲ್ಲಿ ಆರ್ಥಿಕ ಹಿಂಜರಿತವಾಗಿತ್ತು. ಆದರೂ ಬಳಿಕ ಮೇಲೆ ಬಂದು ಯಶಸ್ಸು ಕಂಡಿದ್ದಾರೆ ಎಂದು ಹೇಳಿ ಗೋಕುಲ್‌ನಾಥ್ ಮತ್ತು ಸುದರ್ಶನ್‌ರವರಿಗೆ ಅಭಿನಂದನೆ ಸಲ್ಲಿಸಿದರು.

ಸಾಮಾನ್ಯ ವ್ಯಕ್ತಿಗೂ ವಿಮಾನಯಾನದಲ್ಲಿ ಉದ್ಯೋಗಾವಕಾಶವಿದೆ-ಸಂಜೀವ ಮಠಂದೂರು:
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ ವಿಮಾನಯಾನ ಬಡವರಿಗೆ ಗಗನಕುಸುಮವಾಗಿತ್ತು. ಶ್ರೀಮಂತರ ಸೊತ್ತು ಆಗಿತ್ತು. ಇವತ್ತು ಅದು ನಮ್ಮ ಜೀವನದ ಅಗತ್ಯಗಳಲ್ಲಿ ಒಂದಾಗಿದೆ. ಸಾಮಾನ್ಯ ವ್ಯಕ್ತಿ ಕೂಡ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶಗಳು ಇದೆ. ವಿಮಾನಯಾನದಲ್ಲಿ ಹಲವಾರು ಉದ್ಯೋಗಗಳು ಇದೆ. ಮಹಾನಗರದಲ್ಲಿ ಸಿಗುವ ಉನ್ನತ ಉದ್ಯೋಗ, ಶಿಕ್ಷಣದ ಅವಕಾಶಗಳು ಗ್ರಾಮೀಣ ಭಾಗದಲ್ಲಿಯೂ ಸಿಗುವುದಕ್ಕೆ ಇದು ಉದಾಹರಣೆಯಾಗಿದೆ ಎಂದರು. ಈ ಸಂಸ್ಥೆಯು ಕೌಶಲ್ಯಭರಿತ ಶಿಕ್ಷಣದ ಒಂದು ಯೋಜನೆಯಾಗಿದೆ. ನೈಪುಣ್ಯತೆ, ಕೌಶಲ್ಯಕ್ಕೆ ಕೆಲವೊಂದು ಕೋರ್ಸುಗಳು ಇಂದು ಆರಂಭವಾಗಿದೆ. ಪುತ್ತೂರಿನ ಯುವಕ ಯುವತಿಯರಿಗೆ ವಿಮಾನ ಸಂಸ್ಥೆಯಲ್ಲಿ ಉದ್ಯೋಗ ಸಿಗುವಂತಾಗಲಿ. ಪುತ್ತೂರಲ್ಲಿ ಆರಂಭಗೊಂಡ ಸಂಸ್ಥೆಗೆ ಎಲ್ಲರ ಹಾರೈಕೆ ಇದೆ. ದೇಶದ ಸೇವೆಗೆ ಕೊಂಡೊಯ್ಯುವ ಕೆಲಸ ಮಾಡಲಿ ಎಂದು ಹೇಳಿ ಹಾರೈಸಿದರು.

ಪುತ್ತೂರಿನಲ್ಲಿ ಅಭೂತಪೂರ್ವಕೆಲಸ ಆರಂಭಿಸಿದ್ದಾರೆ-ದಂಬೆಕಾನ ಸದಾಶಿವ ರೈ:
ರಾಯಲ್ ಸೌಹಾರ್ದ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ಸದಾಶಿವ ರೈ ದಂಬೆಕಾನ ಮಾತನಾಡಿ ಪುತ್ತೂರನ್ನು ಹತ್ತೂರಿಗೆ ಪರಿಚಯಿಸುವ ದೃಷ್ಟಿಯಲ್ಲಿ ಅಭೂತಪೂರ್ವ ಕೆಲಸವನ್ನು ಇಬ್ಬರು ಆರಂಭಿಸಿದ್ದಾರೆ. ಫೈಲಾದ ಮಕ್ಕಳನ್ನು ತೆಗೆದುಕೊಂಡು ಆರಂಭಿಸಿದ ಸಂಸ್ಥೆಗೆ ರ‍್ಯಾಂಕ್ ವಿಜೇತರು ಪ್ರವೇಶಾತಿ ಪಡೆಯಲಿ. ಮಹಾಲಿಂಗೇಶ್ವರ ದೇವರು ಅವರ ಪರಿಶ್ರಮ, ಆಸೆ, ಆಕಾಂಕ್ಷೆ, ಚಿಂತನೆಗಳನ್ನು ನೆರವೇರಿಸಲಿ ಎಂದು ಹೇಳಿ ಹಾರೈಸಿದರು.

ಪುತ್ತೂರಿನ ಪ್ರಗತಿಗೆ ಪ್ರಗತಿ ವಿಸ್ತಾರ ಸೇರಲಿ-ಗೋಪಾಲಕೃಷ್ಣ ಹೇರಳೆ:
ಪುತ್ತೂರು ಗಣೇಶ್ ಪ್ರಸಾದ್ ಹೊಟೇಲ್ ಮಾಲಕ ಗೋಪಾಲಕೃಷ್ಣ ಹೇರಳೆ ಮಾತನಾಡಿ ವಿಸ್ತಾರದ ಮೂಲಕ ವಿಮಾನಯಾನದ ಉದ್ಯೋಗದಲ್ಲಿ ಯುವಕ ಯುವತಿಯರಿಗೆ ಅವಕಾಶ ನೀಡುವ ಕೆಲಸ ಮಾಡಿದ್ದಾರೆ. ಅವರನ್ನು ಕೌಶಲ್ಯಭರಿತರನ್ನಾಗಿ ಮಾಡಲು ಯೋಜನೆ ಆರಂಭಿಸಿದ್ದಾರೆ. ಗೋಕುಲ್‌ನಾಥ್‌ರವರು ಪ್ರಗತಿ ಸ್ಟಡಿ ಸೆಂಟರ್‌ನ ಮೂಲಕ ಪ್ರಗತಿ ಸಾಧಿಸಿದ್ದಾರೆ ಎಂದರು. ಪುತ್ತೂರು ಜಿಲ್ಲೆಯಾಗಿ ಬದಲಾಗುವ ಕಾಲಘಟ್ಟದಲ್ಲಿ ಇಂತಹ ಸಂಸ್ಥೆಗಳು ಅಗತ್ಯವಾಗಿದೆ. ಪುತ್ತೂರಿನ ಪ್ರಗತಿಗೆ ಪ್ರಗತಿ ವಿಸ್ತಾರ ಸೇರಲಿ ಎಂದು ಹೇಳಿ ಹಾರೈಸಿದರು.

ಸ್ಕೈಬರ್ಡ್ ಏವಿಯೇಶನ್ ಸಂಸ್ಥೆಯ ಪ್ರಾಂಶುಪಾಲ ಕೆಂಪರಾಜು ಮಾತನಾಡಿ ದಶಕಗಳ ಪರಿಶ್ರಮದಲ್ಲಿ ಇಂದು ಪ್ರಗತಿ ವಿಸ್ತಾರ ಕಾಲೇಜು ಆರಂಭವಾಗಿದೆ. ಇದರ ಅನುಕೂಲತೆಗಳು, ಲಭ್ಯವಿರುವ ಕೋರ್ಸುಗಳ ಅವಕಾಶ ಪಡೆಯಿರಿ. ಕೌಶಲ್ಯಭರಿತವಾದ ತರಬೇತಿ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ಅಡಿಗಿರುವ ಸುಪ್ತ ಪ್ರತಿಭೆಗಳನ್ನು ಹೊರತೆಗೆಯುವ ಅವಕಾಶಗಳಿವೆ ಎಂದರು. ಏವಿಯೇಶನ್ ಅಗಾಧವಾಗಿ ಬೆಳೆಯುತ್ತಾ ಇದೆ. ಏವಿಯೇಶನ್ ವಿಭಾಗದಲ್ಲಿ 2023ರಲ್ಲಿ ಇಡೀ ಪ್ರಪಂಚದಲ್ಲಿ ಭಾರತ 3ನೇ ಸ್ಥಾನ ಇದೆ. 2017ರಲ್ಲಿ ಉಡಾನ್ ಸ್ಕೀಂನ್ನು ಪ್ರಧಾನಿ ಮೋದಿ ಆರಂಭಿಸಿದ್ದರು. ದೇಶದಾದ್ಯಂತ ಏರ್‌ಪೋರ್ಟ್‌ಗಳು ಬೆಳೆಯುತ್ತಾ ಇದೆ. ಇದಕ್ಕೆ ನುರಿತ ಕೆಲಸಗಾರರು ಬೇಕಾಗುತ್ತದೆ. ನಮ್ಮ ಸಂಸ್ಥೆಯಿಂದ ಹಲವಾರು ಉದ್ಯೋಗಿಗಳನ್ನು ಕೊಟ್ಟಿದ್ದೇವೆ ಎಂದರು. ಪುತ್ತೂರಲ್ಲಿ ಆರಂಭವಾದ ಸಂಸ್ಥೆಯನ್ನು ಬೆಳೆಸಿ ಎಂದು ಹೇಳಿ ಹಾರೈಸಿದರು.

ಪುತ್ತೂರು ಶಿಕ್ಷಣದ ಹಬ್ ಆಗಿದೆ-ಸುಜಾತ ಬೈರಿ:
ಸ್ಕೈಬರ್ಡ್ ಏವಿಯೇಶನ್‌ನ ಎಂಡಿ ಸುಜಾತ ಬೈರಿ ಮಾತನಾಡಿ ಸಕೈಬರ್ಡ್ ಏವಿಯೇಶನ್ ರೆಕ್ಕೆ ಪುತ್ತೂರಿಗೂ ವಿಸ್ತಾರಗೊಡಿದೆ. ಗೋಕುಲ್‌ನಾಥ್‌ರವರ ಯೋಜನೆಯಂತೆ ಪುತ್ತೂರಲ್ಲಿ ಹೆಜ್ಜೆ ಇಟ್ಟಿದೆ. ಪುತ್ತೂರು ಶಿಕ್ಷಣದ ಹಬ್ ಆಗಿದೆ. ಸ್ಕೈಬರ್ಡ್ ಏವಿಯೇಶನ್ ಯಾವಾಗಲೂ ಮಹಿಳೆಯರಿಗೆ ಪ್ರೋತ್ಸಾಹ ನೀಡುತ್ತಿದೆ. 18 ವರ್ಷದಿಂದ ನಮ್ಮ ಸಂಸ್ಥೆ ಕಾರ್ಯಾಚರಿಸುತ್ತಿದೆ. ದೇಶದ ಬೇರೆ ಬೇರೆ ರಾಜ್ಯದಲ್ಲಿ ಸ್ಕೈಬರ್ಡ್ ಏವಿಯೇಶನ್ ಸಂಸ್ಥೆಗಳಿವೆ. ಇದು 11ನೇ ಪ್ರಾಂಚೈಸಿಯಾಗಿದೆ ಎಂದು ಹೇಳಿದ ಅವರು ಸಂಸ್ಥೆಯನ್ನು ಎಲ್ಲರೂ ಬೆಳೆಸಿ ಎಂದರು.

ರಿಪೇರಿ ಸೆಂಟರ್‌ನಿಂದ ಶೋರೂಮ್‌ಗೆ ಬಂದಿದ್ದೇವೆ-ಗೋಕುಲ್ ನಾಥ್:
ಶ್ರೀಪ್ರಗತಿ ಎಜ್ಯುಕೇಶನ್ ಫೌಂಡೇಶನ್ ಮೂಡಬಿದೆರೆ ಇದರ ಕಾರ್ಯದರ್ಶಿ ಗೋಕುಲ್‌ನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಕೈಬರ್ಡ್ ಸಂಸ್ಥೆಯನ್ನು ಪುತ್ತೂರಿಗೂ ತರಬೇಕೆಂಬ ಆಸಕ್ತಿ ಇತ್ತು. ಸ್ಕೈಬರ್ಡ್ ಶಿಕ್ಷಣದ ಬಗ್ಗೆ ಆತ್ಮವಿಶ್ವಾಸವೂ ಇತ್ತು. ಹಾಗಾಗಿ ಸ್ಕೈಬರ್ಡ್ ಸಂಸ್ಥೆಯವರೊಂದಿಗೆ ಮಾತುಕತೆ ನಡೆಸಿ ಪ್ರಾಂಚೈಸಿ ಆರಂಭಿಸಲಾಗಿದೆ ಎಂದರು. ಕಳೆದ 18 ವರ್ಷಗಳಿಂದ ಫೈಲಾದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಾ ಬಂದಿದ್ದೇವೆ. ಈಗ ರೆಗ್ಯುಲರ್ ಕಾಲೇಜಿಗೆ ಕಾಲಿಟ್ಟಿದ್ದೇವೆ. ರಿಪೇರಿ ಸೆಂಟರ್‌ನಿಂದ ಶೋರೂಮ್‌ಗೆ ಬಂದಿದ್ದೇವೆ. ನಮ್ಮೊಂದಿಗೆ ಸುದರ್ಶನ್ ಮೂಡಬಿದಿರೆ ದಂಪತಿ ಕೈಜೋಡಿಸಿದ್ದಾರೆ ಎಂದು ಹೇಳಿ ಸ್ಕೈಬರ್ಡ್ ಏವಿಯೇಶನ್‌ನಲ್ಲಿ ಲಭ್ಯವಿರುವ ಕೋರ್ಸುಗಳ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು.

ಉದ್ಯಮಿ ಚಿಕ್ಕಪ್ಪ ನಾೖಕ್‌ ಮಾತನಾಡಿ ಇಲ್ಲಿನ ಮಕ್ಕಳಿಗೆ ಬೇಕಾದ ಅವಕಾಶ ಸ್ಕೈಬರ್ಡ್ ಏವಿಯೇಶನ್ ಸಂಸ್ಥೆಯಿಂದ ಮಾಡಿಕೊಟ್ಟಿದ್ದಾರೆ. ಈ ಸಂಸ್ಥೆಯನ್ನು ಮಹಾಲಿಂಗೇಶ್ವರ ದೇವರು ಉತ್ತರೋತ್ತರ ಅಭಿವೃದ್ಧಿ ಮಾಡಲಿ ಎಂದು ಹೇಳಿ ಶುಭಹಾರೈಸಿದರು. ಮನಾಯ್ ಆರ್ಕ್ ಮಾಲಕ ಜಯರಾಮ ಮನಾಯ್, ಶ್ರೀಪ್ರಗತಿ ಎಜ್ಯುಕೇಶನ್ ಫೌಂಡೇಶನ್‌ನ ಅಧ್ಯಕ್ಷೆ ಹೇಮಾವತಿ ಸುದರ್ಶನ, ಉಪಾಧ್ಯಕ್ಷ ಹೇಮಲತಾ ಗೋಕುಲ್‌ನಾಥ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖಜಾಂಜಿ ಸುದರ್ಶನ ಮೂಡಬಿದಿರೆ ಅತಿಥಿಗಳನ್ನು ಸತ್ಕರಿಸಿದರು. ಸಂಸ್ಥೆಗೆ ಆರ್ಥಿಕ ಸಹಕಾರ ನೀಡಿದ ಎಮ್‌ಸಿಎಸ್ ಬ್ಯಾಂಕ್ ಅಧ್ಯಕ್ಷ ಬಾಹುಬಲಿ ಪ್ರಸಾದ್‌ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಳ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಸುಳ್ಯ ಶಾಸಕಿ ಭಾಗೀರಥೀ ಮುರುಳ್ಯ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ, ಬಿಜೆಪಿ ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಆರ್.ಸಿ.ನಾರಾಯಣ ರೆಂಜ, ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪೂಜಾ ಸ್ವಾಗತಿಸಿದರು. ಸ್ನಿಗ್ದ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪುತ್ತೂರಿಗೆ ಚಾಚಿದ ಸ್ಕೈಬರ್ಡ್ ಏವಿಯೇಶನ್ ರೆಕ್ಕೆಗಳು
ಐಎಟಿಎಯಲ್ಲಿ ನೋಂದಾಯಿತ ಸಂಸ್ಧೆಯಾಗಿರುವ ಸ್ಕೈಬರ್ಡ್ ಏವಿಯೇಶನ್‌ನ ಅಧಿಕೃತ ಫ್ರಾಂಚೈಸಿ ಶ್ರೀಪ್ರಗತಿ ವಿಸ್ತಾರ ಏವಿಯೇಷನ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು ಸಂಪೂರ್ಣ ಹವಾನಿಯಂತ್ರಿತವಾಗಿದ್ದು ವಿಮಾನಯಾನ ತರಬೇತಿಗೆ ಬೇಕಾದ “ಮಾಕ್” ವಿಮಾನ ಕ್ಲಾಸ್ ರೂಂ ಹಾಗೂ ಇನ್ನಿತರ ಸೌಲಭ್ಯವನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಅನುಭವ ಪಡೆದಿರುವ ನುರಿತ ಅದ್ಯಾಪಕ ವೃಂದ ತರಬೇತಿ ನೀಡಲಿದೆ. ವಿಮಾನಯಾನ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳಿಗೆ ತನ್ನ ಅಭ್ಯರ್ಥಿಗಳನ್ನು ಶ್ರೀಪ್ರಗತಿ ವಿಸ್ತಾರ ಪರಿಚಯಿಸಲಿದ್ದು ಆಕಾಶದೆತ್ತರಕ್ಕೆ ಹಾರಲು ಇಚ್ಚಿಸುವ ಯುವ ಸಮೂಹಕ್ಕೆ ರೆಕ್ಕೆ ಕಟ್ಟಿಕೊಡಲಿದೆ.

ವಿಮಾನಯಾನ ಕ್ಷೇತ್ರದಲ್ಲಿ ಆಡಳಿತ, ಲೆಕ್ಕಪತ್ರ, ಮಾನವಸಂಪನ್ಮೂಲ, ಅತಿಥಿ ಸತ್ಕಾರ, ಗಗನಸಖಿ, ಟಿಕೆಟ್ ಬುಕ್ಕಿಂಗ್, ಟಿಕೆಟ್ ತಪಾಸಣೆ, ಬೋರ್ಡಿಂಗ್ ಪಾಸ್, ಲಗೇಜ್ ನಿರ್ವಹಣೆ, ಪ್ರಯಾಣಿಕರ ಸುರಕ್ಷೆ, ಪ್ರಯಾಣಿಕರಿಗೆ ಮಾಹಿತಿ, ನೆರವು, ತುರ್ತುಸೇವೆ, ಇನ್ ಪ್ಲೈಟ್ ಆಹಾರ ಪಾನೀಯ ವ್ಯವಸ್ಧೆ, ಹೋಟೆಲ್ ವ್ಯವಸ್ಧೆ, ಕಾರ್ಗೋ ನಿರ್ವಹಣೆ ಹೀಗೆ ಹಲವಾರು ವಿಭಾಗದಲ್ಲಿ ಉದ್ಯೋಗಾವಕಾಶವಿದ್ದು, ಪುತ್ತೂರಿನಲ್ಲಿ ಆರಂಭಗೊಂಡ ಸಂಸ್ಥೆ ಯುವಕ ಯುವತಿಯರ ಪಾಲಿಗೆ ಹೊಸ ಬೆಳಕು ಹರಿಸಲಿದೆ. ಹಿಂದಿಗಿಂತಲೂ ಹೆಚ್ಚು ವಿಸ್ತಾರವಾಗಿರುವ ವಿಮಾನಯಾನ ಕ್ಷೇತ್ರದ ಬೇಡಿಕೆಗೆ ತಕ್ಕಂತೆ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಸರ್ಟಿಫಿಕೇಟ್, ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಶ್ರೀಪ್ರಗತಿ ವಿಸ್ತಾರ ಪರಿಚಯಿಸಲಿದೆ ಎಂದು ಶ್ರೀಪ್ರಗತಿ ಎಜ್ಯುಕೇಶನ್ ಫೌಂಡೇಶನ್ ತಿಳಿಸಿದೆ.

LEAVE A REPLY

Please enter your comment!
Please enter your name here