ಪುತ್ತೂರು ಶಾರದೋತ್ಸವ: 3ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ

0

ಪುತ್ತೂರು: ಪುತ್ತೂರು ಶ್ರೀ ಶಾರದಾ ಭಜನಾ ಮಂದಿರದಲ್ಲಿ 90ನೇ ವರ್ಷದ ನವರಾತ್ರಿ ಉತ್ಸವ, ಪುತ್ತೂರು ಶಾರದೋತ್ಸವದ 3ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಅ.5ರಂದು ಸಂಜೆ ನಡೆಯಿತು.
ಉಷಾ ಮೆಡಿಕಲ್ಸ್‌ನ ಗಣೇಶ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿ, ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ, ಮೂಲತಃ ಪುತ್ತೂರಿನವರಾಗಿದ್ದು, ಪ್ರಸ್ತುತ ಬೆಂಗಳೂರಿನ ಎನ್ವಿಡಿಯಾ ಗ್ರಾಫಿಕ್ಸ್ ಲಿಮಿಟೆಡ್‌ನಲ್ಲಿ ಸೀನಿಯರ್ ಇಂಜಿನಿಯರಿಂಗ್ ಮ್ಯಾನೇಜರ್ ಕೆಲಸ ನಿರ್ವಹಿಸುತ್ತಿರುವ ಮುರಳೀ ಕೃಷ್ಣ ಕುಕ್ಕುಪುಣಿರವರು ಮಾತನಾಡಿ ಸುಮಾರು 30 ವರ್ಷಗಳ ಹಿಂದೆ ನಾನು ಇದೇ ವೇದಿಕೆಯಲ್ಲಿ ಹಲವಾರು ಭಾಷಣ ಸ್ಪರ್ಧೆಗಳಲ್ಲಿ, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ, ಈಗ ಅದೇ ವೇದಿಕೆಯಲ್ಲಿ ನಿಂತು ಮಾತನಾಡುತ್ತಿರುವುದು ಬಹಳ ಸಂತೋಷವಾಗುತ್ತಿದೆ. ಆ ಸ್ಪರ್ಧೆಯಲ್ಲಿ ನಮ್ಮ ಈಗಿನ ಭಜನಾ ಮಂದಿರದ ಅಧ್ಯಕ್ಷರಾದ ಪಿ.ಜಿ. ಜಗನ್ನಿವಾಸ ರಾವ್‌ರವರು ಬಹುಮಾನದ ಪ್ರಾಯೋಜಕರಾಗಿದುದು ವಿಶೇಷ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮಲ್ಲಿ ಸಂಘಟನೆಯನ್ನು ಗಟ್ಟಿ ಮಾಡುತ್ತದೆ, ಇದರಿಂದ ಸಮಾಜಘಾತುಕ ಶಕ್ತಿಗಳು ನಮ್ಮಲ್ಲಿ ಬರುವುದು ಅಸಾಧ್ಯ, ಅದಕ್ಕಾಗಿ ನಾವು ಇಂತಹ ಕಾರ್ಯಕ್ರಮಗಳಿಗೆ ಬರಬೇಕು, ಇದರಿಂದ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತದೆ. ನಾನು ʼಸುದ್ದಿʼಯಲ್ಲಿ ಓದಿದಂತೆ ಪುತ್ತೂರು ದಸರಾ ಎಂದರೆ ಮಂಗಳೂರು, ಮಡಿಕೇರಿಗಿಂತಲೂ ಉತ್ತಮ ದಸರಾ ಆಗಬೇಕು ಎನ್ನುವ ಯೋಚನೆ, ಯೋಜನೆಗೆ ನಾವೆಲ್ಲಾ ಸಹಕರಿಸೋಣ, ನಾವು ಬೆಂಗಳೂರಿನವರು ಪುತ್ತೂರು ಜಾತ್ರೆಗೆ ಬರುವಂತೆ ಮುಂದೆ ಪುತ್ತೂರು ದಸರಾಗೂ ಬರುವಂತಹ ಭಾವನೆ ಎಲ್ಲರಿಗೂ ಬರಲಿ ಎನ್ನುವ ನಂಬಿಕೆ ನನಗಿದೆ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮಂದಿರದ ಗೌರವಾಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಉಪಾಧ್ಯಕ್ಷ ಯಶವಂತ ಆಚಾರ್ಯ, ಶೋಭಾಯಾತ್ರೆ ಸಂಚಾಲಕ ನವೀನ್‌ಕುಲಾಲ್, ಡಾ ಸುರೇಶ್ ಪುತ್ತೂರಾಯ, ಅರುಣಾ ಜಿ ಭಟ್, ಬಾಲಕೃಷ್ಣ ಹೊಸಮನೆ, ಜಗದೀಶ್, ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರಸೇವಕರ ತಂಡದ ಸದಸ್ಯರು ಉಪಸ್ಥಿತರಿದ್ದರು. ಮಂದಿರದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ಬಳಿಕ ವಿದುಷಿ ಸುಚಿತ್ರಾ ಹೊಳ್ಳರ ಶಿಷ್ಯೆ ಶ್ರೀಮತಿ ಸುಮನಾ ರಾವ್, ಕು. ಮಹಿಮಾ ಭಟ್ ಸರ್ಪಂಗಳ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಿತು.

LEAVE A REPLY

Please enter your comment!
Please enter your name here