ಡಿ.25ರಂದು ಶ್ರೀ ಆಂಜನೇಯ ಯಕ್ಷಗಾನ ಸಂಘದ ’ಶ್ರೀ ಆಂಜನೇಯ 56’ ಸಂಭ್ರಮ

0

ಯಕ್ಷಾಂಜನೇಯ ಪ್ರಶಸ್ತಿ ಪ್ರದಾನ – ಮಹಿಳಾ ಯಕ್ಷಗಾನ ಸಂಘದ ವಿಂಶತಿ ಗೌರವ

ಪುತ್ತೂರು: ಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ’ಆಂಜನೇಯ 56’ ಸಂಭ್ರಮವು ಡಿ.25 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ದಿನಪೂರ್ತಿ ನಡೆಯಲಿದೆ. ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ’ವಿಂಶತಿ’ ಕಲಾಪವು ಇದೇ ಸಂದರ್ಭದಲ್ಲಿ ನಡೆಯಲಿದೆ ಎಂದು ಸಂಘದ ಅದ್ಯಕ್ಷ ಭಾಸ್ಕರ ಬಾರ್ಯ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


ಬೆಳಗ್ಗಿನಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಸಂಜೆ ನಡೆಯುವ ಸಮಾರಂಭದಲ್ಲಿ ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ ಅವರಿಗೆ ಯಕ್ಷಾಂಜನೇಯ ಪ್ರಶಸ್ತಿ ಪ್ರದಾನ ಮತ್ತು ಶ್ರೀ ಆಂಜನೆಯ ಮಹಿಳಾ ಯಕ್ಷಗಾನ ಸಂಘದ ವಿಂಶತಿ ಗೌರವ ಸನ್ಮಾನವು ಭಾಗವತ ಭವ್ಯಶ್ರೀ ಕುಲ್ಕುಂದ ಅವರಿಗೆ ಪ್ರದಾನ ಮಾಡಲಾಗುವುದು. ಸಭಾ ಶ್ರೀ ಕ್ಷೇತ್ರ ಕಟೀಲು ಇದರ ಅನುವಂಶಿಕ ಮೊಕ್ತೇಸರ ವೇ ಮೂ ಹರಿನಾರಾಯಣ ಅಸ್ರಣ್ಣ ಅವರು ಅಶೀರ್ವಚನ ನೀಡಲಿದ್ದಾರೆ. ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಭಂಡಾರಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಉಪನ್ಯಾಸಕಿ ಮಧುರಾ ಜೆ ಭಟ್ ಅಭಿನಂದನಾ ನುಡಿಯನ್ನಾಡಲಿದ್ದಾರೆ ಎಂದವರು ಹೇಳಿದರು.


ಶಾಂತಾ, ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿ ಪ್ರದಾನ:
ಪೂರ್ವಾಹ್ನ ನಡೆಯುವ ಸಮಾರಂಭದಲ್ಲಿ ಬೆಂಗಳೂರಿನ ಆತ್ಮಾಲಯ ಕಲೆ ಮತ್ತು ಸಂಸ್ಕೃತಿ ಅಕಾಡೆಮಿ ಕೊಡಮಾಡುವ ಶ್ರೀಮತಿ ಶಾಂತಾ ಮತ್ತು ಜಸ್ಟೀಸ್ ಜಗನ್ನಾಥ ಶೆಟ್ಟಿ ಮೆಮೋರಿಯಲ್ ಪ್ರಶಸ್ತಿಯನ್ನು ಯಕ್ಷಗಾನ ಭಾಗವತ ಶ್ರೀ ಪುತ್ತಿಗೆ ರಘುರಾಮ ಹೊಳ್ಳರಿಗೆ ಪ್ರದಾನ ಮಾಡಲಾಗುವುದು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಈ ಸಮಾರಂಭದಲ್ಲಿ ಆಶೀರ್ವಚನ ನೀಡಲಿದ್ದಾರೆ. ಲೇಖಕ ನಾ.ಕಾರಂತ ಪೆರಾಜೆ ಅವರು ಅಭನಂದನಾ ನುಡಿಯನ್ನಾಡಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಅಧ್ಯಕ್ಷತೆ ವಹಿಸಲಿದ್ದಾರೆ. ನಿವೃತ್ತ ಉಪನ್ಯಾಸಕಿ ರೇಖಾ ರೈ, ಆತ್ಮಾಲಯ ಅಕಾಡೆಮಿಯ ನಿರ್ದೇಶಕಿ ಡಾ. ಪದ್ಮಜಾ ಸುರೇಶ್ ಶುಭಾಂಶನೆ ಮಾಡಲಿದ್ದಾರೆ ಎಂದು ಭಾಸ್ಕರ್ ಬಾರ್ಯ ಅವರು ಹೇಳಿದರು.


ವಿನೂತನ ಸಂವಾದ ತಾಳಮದ್ದಳೆ:
ಅಂದು ಪೂರ್ವಾಹ್ನ ಗಂಟೆ 9 ರಿಂದ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯೆಯರಿಂದ ’ಯಕ್ಷ ತಾಪಸಿಯರು’ ಎಂಬ ವಿನೂತನ ಸಂವಾದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಮಧ್ಯಾಹ್ನ ಗಂಟೆ 2ಕ್ಕೆ ಜಿಲ್ಲೆಯ ಖ್ಯಾತ ಅರ್ಥದಾರಿಗಳ ಕೂಡುವಿಕೆಯಲ್ಲಿ ’ಭೀಷ್ಮ ಸೇನಾಧಿಪತ್ಯ- ಕರ್ಮಬಂಧ’ ಪ್ರಸಂಗದ ತಾಳಮದ್ದಳೆ ನಡೆಯಲಿದೆ. ಕಲಾವಿದರಾಗಿ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ಭವ್ಯಶ್ರೀ ಕುಲ್ಕುಂದ, ಪದ್ಯಾಣ ಶಂಕರನಾರಾಯಣ ಭಟ್, ಪಿ.ಜಿ.ಜಗನ್ನಿವಾಸ ರಾವ್, ಅಕ್ಷಯ್ ರಾವ್ ವಿಟ್ಲ, ಮುರಳೀಧರ ಕಲ್ಲೂರಾಯ(ಹಿಮ್ಮೇಳದಲ್ಲಿ), ಡಾ. ಎಂ.ಪ್ರಭಾಕರ ಜೋಶಿ, ಶಂಭು ಶರ್ಮ, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಪವನ್ ಕಿರಣಕೆರೆ, ಪಕಳಕುಂಜ ಶ್ಯಾಮ ಭಟ್, ಗುಂಡ್ಯಡ್ಕ ಈಶ್ವರ ಭಟ್, ದಿವಾಕರ ಆಚಾರ್ಯ ಗೇರುಕಟ್ಟೆ, ಗುಡ್ಡಪ್ಪ ಬಲ್ಯ(ಅರ್ಥದಾರಿಗಳು) ಭಾಗವಹಿಸಲಿದ್ದಾರೆ ಎಂದು ಭಾಸ್ಕರ ಬಾರ್ಯ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಆಂಜನೇಯ ಯಕ್ಷಗಾನ ಸಂಘದ ಕಾರ್ಯದರ್ಶಿ ಆನಂದ ಸವಣೂರು, ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here