ಶಾಲೆಗಳ ಅಭಿವೃದ್ದಿಗೆ ಸರಕಾರದಿಂದ ವಿಶೇಷ ಒತ್ತು: ಶಾಸಕ ರೈ
ಪುತ್ತೂರು: ಸರಕಾರಿ ಶಾಲೆಗಳು ಅಭಿವೃದ್ದಿಯಾಗಬೇಕು ಮತ್ತು ಗುಣಮಟ್ಟದ ಶಿಕ್ಷಣ ದೊರೆಯುವಂತಾಗಲೂ ಎಲ್ಲಾ ಹಂತದಲ್ಲೂ ಶತತ ಪ್ರಯತ್ನಗಳು ನಡೆಯುತ್ತಲೇ ಇದೆ, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿರುವ ಸರಕಾರಿ ಶಾಲೆಗಳನ್ನು ಉಳಿಸುವ ಕೆಲಸ ನಮ್ಮಿಂದ ಆಗಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಪುತ್ತೂರು ನಗರದ ಸಾಮೆತ್ತಡ್ಕ ಸರಕಾರಿ ಹಿ.ಪ್ರಾ ಶಾಲೆಯಲ್ಲಿ ಮಂಗಳೂರು ನವ ಬಂದರು ಟ್ರಸ್ಟ್ ನಿಂದ ತರಗತಿ ಕೊಠಡಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಸರಕಾರಿ ಶಾಲೆಗಳಲ್ಲಿ ತರಗತಿ ಕೊಠಡಿ, ಪೀಠೋಪಕರಣಗಳು, ಶಿಕ್ಷಕರು ಇವುಗಳ ಕೊರತೆಯನ್ನು ಹಂತ ಹಂತವಾಗಿ ಸರಕಾರ ಪರಿಹರಿಸಿಕೊಂಡು ಬರುತ್ತಿದೆ. ಶಿಕ್ಷಕರ ಕೊರತೆ ಬಹುತೇಕ ಶಾಲೆಗಳಲ್ಲಿ ಇಲ್ಲ. ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ದೊರೆಯುತ್ತಿರುವುದು ಆಶಾಧಾಯಕ ಬೆಳವಣಿಗೆ ಮತ್ತು ಆಂಗ್ಲ ಮಾಧ್ಯಮ ತರಗತಿಗಳು ಬಹುತೇಕ ಶಾಲೆಗಳಲ್ಲಿ ಪ್ರಾರಂಭ ಮಾಡಿರುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಸ್ಥಾಪಕಾಧ್ಯಕ್ಷರು ಹಾಗೂ “ನಮ್ಮ ಶಾಲೆ ಸಾಮೆತ್ತಡ್ಕ ಚಾರಿಟೇಬಲ್ ಟ್ರಸ್ಟ್ ” ಅಧ್ಯಕ್ಷ ಸಾಮೆತ್ತಡ್ಕ ಗೋಪಾಲ ಕೃಷ್ಣ ಭಟ್, ಎಸ್ ಡಿ ಎಮ್ ಸಿ ಅಧ್ಯಕ್ಷ ಶಿವಪ್ರಸಾದ್ ಕೆಮ್ಮಿಂಜೆ, ಟ್ರಸ್ಟ್ ಪ್ರತಿನಿಧಿಗಳಾದ ವೆಂಕಟ್ ರಾಜ್, ನಳಿನಿ ಪಿ ಶೆಟ್ಟಿ, ಟ್ರಸ್ಟ್ ಕಾರ್ಯದರ್ಶಿ ಇಂದಿವರ್ ಭಟ್, ಪುಡಾ ಸದಸ್ಯರಾದ ನಿಹಾಲ್ ಪಿ ಶೆಟ್ಟಿ,ಹಿರಿಯ ವಿದ್ಯಾರ್ಥಿ ಮೊಹಮ್ಮದ್ ಫಾಹಿಝ್, ಶಿಕ್ಷಕ ವೃಂದದವರು,ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.ಮುಖ್ಯ ಶಿಕ್ಷಕಿ ಮರಿಯಾ ಅಶ್ರಫ್ ಸ್ವಾಗತಿಸಿ ,ವಂದಿಸಿದರು.