ಪುತ್ತೂರು: ಬೀಜಾಡಿ ಮೀನುಗಾರರ ಸಹಕಾರಿ ಸಂಘ ನಿಯಮಿತ, ಇದರ ತೆಕ್ಕಟೆಯ ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಅನುಪ್ ಪೂಜಾರಿ ಅವರು ಎಲ್ಲರ ಮನೆಮನೆಗಳಲ್ಲಿ ಪ್ರತೀ ಮನ ಮನಗಳಲ್ಲಿಯೂ ಇದ್ದಾರೆ. ದೇಶ ರಕ್ಷಣೆಯ ಕಾರ್ಯದ ಸಮಯದಲ್ಲಿ ಅವರ ಬಲಿದಾನ ಆಗಿದೆ. ಅನುಪ್ ಪೂಜಾರಿ ಅವರು ಮತ್ತೆ ನಿಮ್ಮ ಕುಟುಂಬದಲ್ಲಿ ಹುಟ್ಟಿ ಬರಲಿ, ಅಲ್ಲದೆ ಅನೂಪ್ ಪೂಜಾರಿಯಂತಹ ದೇಶಭಕ್ತರು ಇನ್ನಷ್ಟು ಹುಟ್ಟಿ ಬರಲಿ ಎಂದರು.
ಬೀಜಾಡಿ ಮೀನುಗಾರರ ಸಹಕಾರ ಸಂಘ ಸಾವಿರಾರು ಕುಟುಂಬಗಳಿಗೆ ದಾರಿದೀಪವಾದ ಸಹಕಾರ ಸಂಘವಾಗಿದ್ದು ಇವತ್ತು ಇದರ 4ನೇ ಶಾಖೆಯ ಉದ್ಘಾಟನೆ ತುಂಬಾ ಖುಷಿ ನೀಡಿದೆ. ಈ ಸಹಕಾರ ಸಂಘದ ಸೇವೆಯು ನಿರಂತರವಾಗಿ ಹೀಗೆ ಮುಂದುವರಿಯಲಿ, ಸಂಘದ ಆಡಳಿತ ಮಂಡಳಿಯು ರಾಜಕೀಯ ರಹಿತವಾಗಿ ಇದರ ಚಟುವಟಿಕೆಯನ್ನು ನಡೆಸಿರುವುದರಿಂದ ಸಂಘವು ಎತ್ತರಕ್ಕೆ ಬೆಳೆಯುತ್ತಿದೆ.ಸಂಘವು ಸುಮಾರು 650 ಮಹಿಳಾ ಸ್ವಹಾಯ ಸಂಘಗಳಿಗೆ ಸಾಲವನ್ನು ನೀಡಿರುವುದು ಮಹಿಳೆಯರನ್ನು ಸ್ವಾಭಿಮಾನದಿಂದ ಜೀವನ ನಡೆಸುವಂತೆ ಮಾಡಿದೆ. ಇದು ನಿಜಕ್ಕೂ ತಾಯಂದಿರಿಗೆ ನೀಡಿದ ಗೌರವವಾಗಿದೆ. ತಾಯಂದಿರು ಮನೆಯಲ್ಲಿ ದುರ್ಗೆ, ಲಕ್ಷ್ಮೀಯರಾಗುತ್ತಾರೆ ಅದ್ದರಿಂದಾಗಿ ಸಾಲದ ಮರುಪಾವತಿ ಕೂಡ ಉತ್ತಮವಾಗಿ ಆಗುತ್ತಿದೆ ಎಂದು ಅವರು ಹೇಳಿದರು. ಈ ಸಂಘದ ಈ ಎಲ್ಲಾ ಕಾರ್ಯಗಳನ್ನು ಮೆಚ್ಚಿ ಹಲವು ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕೊಡ್ಗಿ ಅವರು, ಹಿಂದಿನ ಶಾಸಕರು, ಹಾಲಾಡಿ ಶ್ರೀನಿವಾಸ ಶೆಟ್ಟಿ ಇವರೆಲ್ಲರೂ ರಾಜಕೀಯವನ್ನು ಸ್ವಾರ್ಥಕ್ಕಾಗಿ ಮಾಡಿಲ್ಲ ಎಲ್ಲರೂ ಅಭಿವೃದ್ಧಿಗಾಗಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ನ್ಯಾಯ ದೊರಕಿಸುವ ದೃಷ್ಟಿಯಿಂದ ರಾಜಕೀಯ ಮಾಡಿದ್ದಾರೆ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಸವಲತ್ತುಗಳನ್ನು ಮೀನುಗಾರರಿಗೆ ಕೊಡುತ್ತಾ ಬಂದಿವೆ. ಕೇಂದ್ರ ಸರ್ಕಾರದ ಮತ್ತ್ವ ಸಂಪದ ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು, ಕೋಲ್ಡ್ ಸ್ಟೋರೆಜ್‌ಗೆ ಸೌಲಭ್ಯ, ವಿಮಾ ಸೌಲಭ್ಯಗಳು, ಇತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಈ ಎಲ್ಲಾ ಉಪಯೋಗಗಳನ್ನು ಮೀನುಗಾರರು ಸದುಪಯೋಗಪಡಿಸಿಕೊಂಡು ದೇಶದ ಆರ್ಥಿಕತೆಗೆ ಇನ್ನಷ್ಟು ಹೆಚ್ಚಿನ ಶಕ್ತಿಯನ್ನು ತುಂಬಬೇಕು ಎಂದು ಮೀನುಗಾರರಲ್ಲಿ ವಿನಂತಿಸಿದರು.
ನಮ್ಮ ದೇಶದ ಗಡಿಭಾಗದಲ್ಲಿ ಸೈನಿಕರು ಹೇಗೆ ದೇಶವನ್ನು ಕಾಯುತ್ತಾರಾ ಅದೇ ರೀತಿಯಲ್ಲಿ ಮೀನುಗಾರರು ಕೂಡ ಸಮುದ್ರದಲ್ಲಿ ಮೀನುಗಾರಿಕೆಯನ್ನು ಮಾಡುತ್ತಾ ಇವರೂ ಕೂಡ ಸಮುದ್ರದ ಗಡಿಯನ್ನು ಕಾಯುತ್ತಾರೆ. ಯಾವುದೇ ರೀತಿಯ ದೇಶ ವಿರೋಧಿ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಸಂಬಂಧಿಸಿದ ಕಾವಲು ಪಡೆಯವರಿಗೆ ಮಾಹಿತಿ ನೀಡಿ ದೇಶ ರಕ್ಷಣೆಗೆ ಸೈನಿಕರಂತೆ ಕಾರ್ಯನಿರ್ವಹಿಸುತ್ತಾರೆ. ಅಂತಹ ಸೈನಿಕರಿಗೆ ನಾನು ಇವತ್ತು ಇಲ್ಲಿ ಸನ್ಮಾನವನ್ನು ಮಾಡಿದ್ದೇನೆ ಇದು ನನಗೆ ಮನಸ್ಸಿಗೆ ತುಂಬಾ ಖುಷಿ ನೀಡಿದೆ ಎಂದರು.