ಪುತ್ತೂರು: ಕೋಳಿ ಅಂಕ ನಡೆಯಬೇಕು, ಕೋಳಿ ಅಂಕಕ್ಕೆ ಪೊಲೀಸರು ತೊಂದರೆ ಕೊಡಬಾರದು ಆದರೆ ಜೂಜಿನ ಅಂಕ ಮಾತ್ರ ಯಾರೂ ಮಾಡಬೇಡಿ ಇದು ಸರಿಯಲ್ಲ, ಕೋಳಿ ಅಂಕಕ್ಕೆ ಪರವಾನಿಗೆ ಕೊಡಬೇಡಿ ಎಂದು ಕೆಲವು ತಾಯಂದಿರುವ ನನಗೆ ಕರೆ ಮಾಡಿ ಮನವಿ ಮಾಡುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಅವರು ಕೆದಂಬಾಡಿ ಗ್ರಾಮದ ಸಾರೆಪುಣಿಯಲ್ಲಿ ಕಾಂಕ್ರೀಟ್ ರಸ್ತೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಯಾರೇ ಕೋಳಿ ಅಂಕ ಮಾಡಿದರೂ ಅದಕ್ಕೊಂದು ಮಿತಿಯಿರಲಿ. ಕೋಳಿ ಅಂಕ ನಡೆಯುವ ನೇಮೋತ್ಸವಕ್ಕೆ ನನಗೆ ಆಹ್ವಾನ ಇದ್ದೇ ಇರುತ್ತದೆ ಎಂದ ಶಾಸಕರು ಜೂಜಿನ ಅಂಕ ನಡೆಯುವುದರಿಂದ ಅನೇಕ ಕುಟುಂಬಗಳಿಗೆ ತೊಂದರೆಯಾಗಿದೆ ಎಂದು ಕೆಲವು ನನಗೆ ಕರೆ ಮಾಡಿ ಹೇಳುತ್ತಿದ್ದಾರೆ. ಮಹಿಳೆಯರು ಕರೆ ಮಾಡಿ ಜೂಜಿನ ಕೋಳಿ ಅಂಕ ನಡೆಯುತ್ತಿರುವ ಕಾರಣ ಮನೆಯವರು ಇರುವ ದುಡ್ಡನ್ನು ಖಾಲಿ ಮಾಡುತ್ತಿದ್ದಾರೆ, ನಾವು ಸಂಘದಿಂದ ತೆಗೆದ ಸಾಲದ ಹಣವನ್ನೂ ಅಂಕಕ್ಕೆ ಬಳಸುತ್ತಿದ್ದಾರೆ. ದಯವಿಟ್ಟು ಕೋಳಿ ಅಂಕಕ್ಕೆ ಪರವಾನಿಗೆ ಕೊಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ. ಇತ್ತ ಕೋಳಿ ಅಂಕಕ್ಕೆ ಪರವಾನಿಗೆ ಕೇಳಿದರೆ ಅತ್ತ ಮಹಿಳೆಯರು ಕೊಡಬೇಡಿ ಎಂದು ಹೇಳುತ್ತಿದ್ದಾರೆ. ಇದರಿಂದ ನನಗೆ ತ್ರಿಶಂಕು ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ಜೂಜು ಇಲ್ಲದ ಕೋಳಿ ಅಂಕ ನಮ್ಮೂರಲ್ಲಿ ನಡೆಯಲಿ ಎಂಬುದು ನನ್ನ ಆಶಯವಾಗಿದೆ ಇದಕ್ಕೆ ನನಗೆ ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.