ಮಂಗಳೂರು ವಿಶ್ವವಿದ್ಯಾನಿಲಯದಿಂದ ಅನಂತ ಕೃಷ್ಣ ಬಿ.ಎಸ್.ಅವರಿಗೆ ಡಾಕ್ಟರೇಟ್ ಪದವಿ

0

ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅನಂತ ಕೃಷ್ಣ ಬಿ.ಎಸ್. ಅವರು ಮಂಡಿಸಿದ “ಸ್ಥೂಲ ವ್ಯಕ್ತಿಗಳಲ್ಲಿ ಯೋಗವು ಕರುಳಿನ ಸೂಕ್ಷ್ಮ ಜೀವರಾಶಿಗಳ ಸಮೂಹದ (ಗಟ್ ಮೈಕ್ರೋಬೈಓಟಾ) ಮೂಲಕ ರೋಗ ನಿರೋಧನಾ ಶಕ್ತಿಯ ಮೇಲೆ ಬೀರುವ ಪ್ರಭಾವ” ಎಂಬ ಶೀರ್ಷಿಕೆಗೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿಯನ್ನು ನೀಡಿದೆ.


ಈ ಸಂಶೋಧನೆ ಯೋಗವು ಕರುಳಿನ ಸೂಕ್ಷ್ಮ ಜೀವರಾಶಿಗಳ ಸಮೂಹವನ್ನು ಹೇಗೆ ನಿಯಂತ್ರಿಸುತ್ತದೆ ಹಾಗೂ ಅದರ ಪರಿಣಾಮ ರೋಗನಿರೋಧಕ ಶಕ್ತಿಯ ಮೇಲೆ ಹೇಗಿರುತ್ತದೆ ಎಂಬುದನ್ನು ವಿಶ್ಲೇಷಿಸುತ್ತದೆ. ಯೋಗವು ಸ್ಥೂಲ ವ್ಯಕ್ತಿಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಾಗೂ ದೈಹಿಕ ಆರೋಗ್ಯ ಸುಧಾರಣೆಗೆ ಸಹಾಯ ಮಾಡಬಹುದೆಂಬುದನ್ನು ಈ ಅಧ್ಯಯನ ಸಾಬೀತುಪಡಿಸಿದೆ.

ಇವರು ICSSR ಡಾಕ್ಟೊರಲ್ ಫೆಲೋಶಿಪ್, ನವದೆಹಲಿಯ ಅನುದಾನದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ. ಕೆ. ಕೃಷ್ಣ ಶರ್ಮ ಅವರ ಮಾರ್ಗದರ್ಶನದಲ್ಲಿ, ನಿಟ್ಟೆ ವಿಶ್ವವಿದ್ಯಾನಿಲಯದ ವೈಜ್ಞಾನಿಕ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರದ ಪ್ರೊ. ಇಂದ್ರಾಣಿ ಕರುಣಾ ಸಾಗರ್ ಮತ್ತು ಡಾ. ಕೃಷ್ಣ ಕುಮಾರ್ ಬಳ್ಳಮೂಲೆ ಅವರ ಬಾಹ್ಯ ಮಾರ್ಗದರ್ಶನದೊಂದಿಗೆ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದರು.

ಮೂಲತಃ ಪುತ್ತೂರು ತಾಲೂಕಿನ ಸವಣೂರಿನ ಅನಂತ ಕೃಷ್ಣ ಬಿ.ಎಸ್. ಅವರು ಶ್ರೀ ಶಿವರಾಮ ಭಟ್ ಬೆಟ್ಟುಕಜೆ ಮತ್ತು ದುರ್ಗಾಪರಮೇಶ್ವರಿ ದಂಪತಿಗಳ ಪುತ್ರ. ಪ್ರಸ್ತುತ ಅವರು ಪತ್ನಿ ಮತ್ತು ಮಗನೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದು, ಪ್ರತಿಷ್ಠಿತ ಸೋಲಿಸ್ ಹೆಲ್ತ್ ಸಂಸ್ಥೆಯಲ್ಲಿ “ಯೋಗ ಮತ್ತು ಸ್ವಾಸ್ಥ್ಯ ವಿಭಾಗದ ತಜ್ಞರಾಗಿ” ಕಾರ್ಯನಿರ್ವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here