ಪುತ್ತೂರು: ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರೋಮನ್ ಕ್ಯಾಥಲಿಕ್ ಚರ್ಚ್‌ನ ಮುಖ್ಯಸ್ಥ, ಕ್ರೈಸ್ತ ಧರ್ಮದ ಪರಮೋಚ್ಛ ಜಗದ್ಗುರು ಪೋಪ್ ಫ್ರಾನ್ಸಿಸ್‌ರವರು ಎ.21 ರಂದು ಈಸ್ಟರ್ ಹಬ್ಬದ ಮರುದಿನ ಸೋಮವಾರದಂದು ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ವ್ಯಾಟಿಕನ್ ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫೆರೆಲ್‌ರವರು ಘೋಷಿಸಿದ್ದಾರೆ.
ಜಗದ್ಗುರು ಪೋಪ್ ಫ್ರಾನ್ಸಿಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ಸಮಯದಿಂದ ಅವರು ನ್ಯುಮೋನಿಯಾ, ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಪ್ರಭು ಯೇಸುಕ್ರಿಸ್ತರ ಪುನರುತ್ಥಾನದ ಈಸ್ಟರ್ ಹಬ್ಬದ ಸಂಭ್ರಮದಲ್ಲಿರುವ ಕ್ರೈಸ್ತ ಸಮುದಾಯವು ಪೋಪ್ ಫ್ರಾನ್ಸಿಸ್‌ರವರ ನಿಧನದಿಂದ ಜಗತ್ತಿನೆಲ್ಲೆಡೆ ಇರುವ ಕ್ರೈಸ್ತ ಸಮುದಾಯದಲ್ಲಿ ಶೋಕ ಮಡುಗಟ್ಟಿದೆ. ಪೋಪ್ ಫ್ರಾನ್ಸಿಸ್‌ರವರು ಹಲವು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮಾರ್ಚ್‌ನಲ್ಲಿ ಮನೆಗೆ ಮರಳಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್‌ರವರು ಇತ್ತೀಚೆಗೆ ಗುಡ್‌ಫ್ರೈಡೆ ದಿನದಂದು ಪೋಲ್ ಸೈಂಟ್ ಪೀಟರ್ ಬಸಿಲಿಕದಲ್ಲಿ ಗಾಲಿ ಕುರ್ಚಿಯಲ್ಲಿಯೇ ಕುಳಿತು ಭಕ್ತರನ್ನು ಉದ್ಧೇಶಿಸಿ ಮಾತನಾಡಿದ್ದರು. ಭಾನುವಾರ ಅವರು ಈಸ್ಟರ್ ಪ್ರಾರ್ಥನೆಗೆ ಸೇರಿದ್ದ ಭಕ್ತರನ್ನು ಉದ್ಧೇಶಿಸಿ ಮೆಲುದನಿಯಲ್ಲಿ ‘ಹ್ಯಾಪಿ ಈಸ್ಟರ್’ ಎಂದು ಹೇಳಿ ಸಭಿಕರನ್ನು ಮತ್ತು ಮಕ್ಕಳನ್ನು ಆಶೀರ್ವದಿಸಿ ತೆರಳಿದ್ದರು. ಆಮೆರಿಕ ಅಥವಾ ದಕ್ಷಿಣ ಗೋಳಾರ್ಧದಿಂದ ಬಂದ ಮೊದಲ ಪೋಪ್ ಇವರಾಗಿದ್ದರು. ಸಿರಿಯನ್ ಮೂಲದ ಗ್ರೆಗೊರಿ(3ನೇ) 741ರಲ್ಲಿ ನಿಧನರಾದ ನಂತರ ರೋಮ್‌ನ ಯುರೋಪಿಯನ್ ಅಲ್ಲದ ಬಿಷಪ್ ನೇಮಕವಾಗಿರಲಿಲ್ಲ.
ಧಾರ್ಮಿಕ ಸ್ವಾತಂತ್ರ್ಯ, ಅಭಿಪ್ರಾಯಗಳನ್ನು ಗೌರವಿಸದ ಹೊರತು ಶಾಂತಿ ಸಾಧ್ಯವಿಲ್ಲ…
ಪೋಪ್ ಫ್ರಾನ್ಸಿಸ್ ಮೂಲ ಹೆಸರು ಜಾರ್ಜ್ ಮಾರಿಯೋ ಬರ್ಗೊಗ್ಲಿಯೊ ಎಂದಾಗಿತ್ತು. 2013ರಲ್ಲಿ ಪೋಪ್ ಆಗಿ ನೇಮಕಗೊಂಡ ಅವರು ನಮ್ರತೆ ಮತ್ತು ಸುಧಾರಣೆಗಳಿಗೆ ಹೆಸರುವಾಸಿಯಾದ ಅವರು ಸಾಮಾಜಿಕ ನ್ಯಾಯ ಮತ್ತು ನಂಬಿಕೆಗಳ ಏಕತೆಯನ್ನು ಪ್ರತಿಪಾದಿಸಿದ್ದರು. ಧಾರ್ಮಿಕ ಸ್ವಾತಂತ್ರ್ಯ ಹಾಗೂ ಇತರರ ಅಭಿಪ್ರಾಯಗಳನ್ನು ಗೌರವಿಸದ ಹೊರತು ಶಾಂತಿ ಸಾಧ್ಯವಿಲ್ಲ ಎಂದು ಪೋಪ್ ಫ್ರಾನ್ಸಿಸ್‌ರವರು ಈಸ್ಟರ್ ಭಾನುವಾರದ ಸಂದೇಶದಲ್ಲಿ ಹೇಳಿದ್ದಾರೆ.