ಪುತ್ತೂರು:ಖ್ಯಾತ ಉದ್ಯಮಿಯಾಗಿದ್ದ ಮಾಜಿ ಡಾನ್ ಪುತ್ತೂರು ಮೂಲದ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ.ಸದ್ಯ ಜರ್ಮನಿಯಲ್ಲಿರುವ ಅನುರಾಧ ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅಲ್ಲಿಂದಲೇ ತಮ್ಮ ವಕೀಲರ ಮೂಲಕ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.ಈ ಹಿಂದೆ ಮುತ್ತಪ್ಪ ರೈಯವರ ಆಪ್ತನಾಗಿದ್ದ ರಾಕೇಶ್ ಮಲ್ಲಿ ಈ ಪ್ರಕರಣದ ಒಂದನೇ ಆರೋಪಿಯಾಗಿದ್ದು ರಿಯಲ್ ಎಸ್ಟೇಟ್ ಉದ್ಯಮಿಗಳಾಗಿರುವ ನಿತೀಶ್ ಶೆಟ್ಟಿ ಹಾಗೂ ವೈದ್ಯನಾಥನ್ ಮೂರು,ನಾಲ್ಕನೇ ಆರೋಪಿಗಳಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ಅನುರಾಧ ಏ.14ರಂದೇ ವಿದೇಶಕ್ಕೆ ತೆರಳಿದ್ದಾರೆಂದು ತಿಳಿದು ಬಂದಿದೆ.ಅನುರಾಧ ಬಳಸುತ್ತಿದ್ದ ಸಿಮ್‌ನ ಆಧಾರದಲ್ಲಿ ಪೊಲೀಸರು ವಿಳಾಸ ಹುಡುಕಿ ಆಕೆಗೆ ನೋಟೀಸ್ ನೀಡಲೆಂದು ಅಲ್ಲಿಗೆ ತೆರಳಿದ್ದರು.ಆದರೆ ಸಿಮ್ ಕಾರ್ಡ್‌ಗೆ ವಿಳಾಸ ನೀಡಲಾಗಿದ್ದ ಮನೆಯನ್ನು ಅನುರಾಧ ಅಮೇರಿಕ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದ ವಿಚಾರ ಈವೇಳೆ ತಿಳಿದು ಬಂದಿದೆ.ಇದು,ಮೊದಲೇ ಪ್ಲ್ಯಾನ್ ಮಾಡಿ ಅನುರಾಧ ಮನೆ ಮಾರಾಟ ಮಾಡಿದ್ದರಾ ಎಂಬ ಅನುಮಾನಕ್ಕೂ ಕಾರಣಾಗಿದೆ.
ಬೆಂಗಳೂರು ರಾಮನಗರ ಜಿಲ್ಲೆ ರಾಮನಗರ ತಾಲೂಕಿನ ಬಿಡದಿ ವ್ಯಾಪ್ತಿಯಲ್ಲಿ ಏ.18ರಂದು ಮಧ್ಯರಾತ್ರಿ ತನ್ನ ಕಾರಿನಲ್ಲಿ ಹೋಗುತ್ತಿದ್ದ ವೇಳೆ ರಿಕ್ಕಿ ರೈಯವರ ಮೇಲೆ ಅಪರಿಚಿತ ವ್ಯಕ್ತಿ ಅವಿತು ಗುಂಡಿನ ದಾಳಿ ನಡೆಸಿದ್ದ.ರಿಕ್ಕಿ ರೈಯವರು ಗಂಭೀರ ಗಾಯಗೊಂಡಿದ್ದರು.ಚಿಕ್ಕಮ್ಮ ಅನುರಾಧಾ ಮತ್ತು ರಾಕೇಶ್ ಮಲ್ಲಿ ಈ ಸಂಚು ರೂಪಿಸಿದ್ದರು ಎಂದು ರಿಕ್ಕಿ ರೈ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದರು.ಅವರ ಹೇಳಿಕೆ ಆಧಾರದಲ್ಲಿ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರಿಕ್ಕಿ ರೈ ಆಪ್ತನಿಂದ ಮಹಾಲಿಂಗೇಶ್ವರ ದೇವಳದಲ್ಲಿ ವಿಶೇಷ ಪೂಜೆ
ರಿಕ್ಕಿ ರೈ ಅಪೇಕ್ಷೆ ಮೇರೆಗೆ, ಅವರ ಆಪ್ತರೋರ್ವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.21ರಂದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನೆರವೇರಿಸಿದ್ದಾರೆ.
‘ಮಹಾಲಿಂಗೇಶ್ವರ ಕಾಪಾಡು’.. ರಿಕ್ಕಿ ರೈ ಬಾಯಲ್ಲಿ ಬಂದ ಮಾತು ‘ಮಹಾಲಿಂಗೇಶ್ವರ ಕಾಪಾಡು’..ಇದು ತನ್ನ ಮೇಲೆ ಫೈರಿಂಗ್ ಆದ ತಕ್ಷಣ ರಿಕ್ಕಿ ರೈ ಅವರ ಬಾಯಿಂದ ಬಂದ ಮಾತು.ನಿಜವಾಗಿಯೂ ಅವರನ್ನು ಕಾಪಾಡಿದ್ದು ಪುತ್ತೂರು ಮಹಾಲಿಂಗೇಶ್ವರ ಎಂದು ಅವರ ಆಪ್ತರು ಹೇಳಿಕೊಳ್ಳುತ್ತಿದ್ದಾರೆ. ಪಾತಕಿಯ ಗುಂಡು ತಾಗಿದ್ದು ರಿಕ್ಕಿ ರೈ ಅವರ ಮೂಗಿನ ತುದಿಗೆ,ಅಲ್ಲಿಂದ ಹಣೆಗೆ ಇದ್ದದು ಒಂದು ಬೆರಳಿನಷ್ಟು ಅಂತರ.ಅಲ್ಲಿಂದ ಎದೆ ಭಾಗಕ್ಕೆ ಇದ್ದದು ಕೇವಲ ಕೆಲವೇ ಇಂಚಿನ ವ್ಯತ್ಯಾಸ.ಶೂಟ್ ಮಾಡಿದಾತ ಶಾರ್ಪ್ ಪ್ರೊಫೆಷನಲ್ ಶೂಟರ್ ಎಂದು ಪೊಲೀಸರ ಮಾಹಿತಿ.ಹೀಗಿದ್ದರೂ ರಿಕ್ಕಿ ರೈಯವರನ್ನು ಆ ಮಹಾಲಿಂಗೇಶ್ವರನೇ ಕಾಪಾಡಿದ್ದು ಎನ್ನುತ್ತಾರೆ ಅವರ ಆಪ್ತ ವಲಯದವರು.
ರಿಕ್ಕಿ ರೈಯವರ ತಂದೆ ಎನ್.ಮುತ್ತಪ್ಪ ರೈಯವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಪರಮ ಭಕ್ತರಾಗಿದ್ದರು.ಅವರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮರಥವನ್ನು ಸಮರ್ಪಣೆ ಮಾಡಿದ್ದರು.ಏ.17ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ನಡೆದಿತ್ತು.ಬ್ರಹ್ಮರಥೋತ್ಸವದಂದು ಮಧ್ಯಾಹ್ನ ಮುತ್ತಪ್ಪ ರೈ ಹೆಸರಿನಲ್ಲಿ ಅವರ ಕುಟುಂಬಸ್ಥರು ಪ್ರತಿ ವರ್ಷ ಅನ್ನದಾನ ಸೇವೆ ಮಾಡುತ್ತಾ ಬಂದಿರುತ್ತಾರೆ.ಬ್ರಹ್ಮರಥೋತ್ಸದ ಮರುದಿನ ರಿಕ್ಕಿ ರೈಯವರ ಮೇಲೆ ಫೈರಿಂಗ್ ನಡೆದಿದ್ದು ಅವರು ಅಪಾಯದಿಂದ ಪಾರಾಗಿದ್ದಾರೆ.ಮಹಾಲಿಂಗೇಶ್ವರನ ಪರಮ ಭಕ್ತರಾಗಿದ್ದು ಎಲ್ಲೇ ಹೋದರೂ ಮಹಾಲಿಂಗೇಶ್ವರನ ಸ್ಮರಣೆಯನ್ನು ತಪ್ಪದೇ ಮಾಡುತ್ತಿದ್ದ ಮುತ್ತಪ್ಪ ರೈ ಅವರ ಮಗನನ್ನು ಆ ಮಹಾಲಿಂಗೇಶ್ವರನೇ ಕಾಪಾಡಿದ್ದು ಎಂದು ನಂಬಿರುವ ಆಪ್ತ ವಲಯ ಅದೇ ಕಾರಣಕ್ಕಾಗಿ ರಿಕ್ಕಿ ರೈಯವರ ಹೆಸರಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ,ರಿಕ್ಕಿ ರೈಯವರು ಬೇಗ ಗುಣಮುಖರಾಗಲಿ ಎಂದು ಶ್ರೀ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
‘ಭಾರೀ ಕನ್ಫ್ಯೂಸಿಂಗ್ ’ ಮನ್ಮಿತ್ ರೈ ಪ್ರತಿಕ್ರಿಯೆ
ಈ ಪ್ರಕರಣ ಭಾರೀ ಕನ್ಫ್ಯೂಸಿಂಗ್ ಆಗಿದೆ ಎಂದು ಥೈಲ್ಯಾಂಡ್‌ನ ಉದ್ಯಮಿ ಮನ್ಮಿತ್ ರೈ ಓಲೆಮುಂಡೋವು ತಿಳಿಸಿದ್ದಾರೆ.
ರಿಕ್ಕಿ ರೈಯವರ ಚಾಲಕ ನೀಡಿದ್ದ ಮಾಹಿತಿಯಾಧಾರದಲ್ಲಿ ರಿಕ್ಕಿ ರೈಯವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.ಈ ಹೇಳಿಕೆ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟು ಪ್ರಕರಣದಲ್ಲಿ ಕನ್ಫ್ಯೂಸಿಂಗ್ ಇದೆ. ರಿಕ್ಕಿ ರೈಯವರ ಸೆಕ್ಯೂರಿಟಿಯವರೇ ಫೈರಿಂಗ್ ಮಾಡಿರುವ ಸಂಶಯ ಡಿಪಾರ್ಟ್‌ಮೆಂಟ್‌ನವರಿಗೆ ಇದೆ. ಆದರೆ ಯಾರಿಗಾಗಿ ಆತ ಮಾಡಿದ್ದಾನೆ. ಬೇರೆಯವರಿಗಾಗಿ ಮಾಡಿದ್ದಾನೆಯೇ ಅಥವಾ ಅವರೊಳಗೆ ಚರ್ಚೆ, ಮಾತಾಗಿ ಮಾಡಿರುವುದೇ ಎನ್ನುವುದು ಗೊತ್ತಿಲ್ಲ ಪ್ರಕರಣದ ಕುರಿತು ಡಿಪಾರ್ಟ್‌ಮೆಂಟ್‌ನವರು ನನ್ನಲ್ಲಿ ವಿಚಾರಿಸಿದ್ದರು.ಆದರೆ ನಾನೀಗ ಎಲ್ಲವನ್ನೂ ಬಿಟ್ಟಿದ್ದೇನೆ.ಮೊದಲು ನಾನು ಎರಡೂ ಕಡೆಯವರಲ್ಲಿ ಕ್ಲೋಸ್ ಆಗಿದ್ದೆ.ಆದರೆ ಈಗ ಯಾರೊಂದಿಗೂ ಸಂಪರ್ಕದಲ್ಲಿಲ್ಲ.ಎಲ್ಲವನ್ನೂ ಬಿಟ್ಟು ಉದ್ಯಮ ಕ್ಷೇತ್ರದಲ್ಲಿ ಸಕ್ರಿಯನಾಗಿದ್ದೇನೆ ಎಂದು ಡಿಪಾರ್ಟ್‌ಮೆಂಟ್‌ನವರಿಗೆ ತಿಳಿಸಿದ್ದೇನೆ.ಪೊಲೀಸರ ತನಿಖೆಯಿಂದ ಒಂದೆರಡು ದಿನಗಳಲ್ಲಿ ಸತ್ಯಾಂಶ ತಿಳಿಯಲಿದೆ ಎಂದು ಮನ್ಮಿತ್ ರೈ ಓಲೆಮುಂಡೋವು ಅವರು ‘ಸುದ್ದಿ’ಗೆ ಕರೆ ಮಾಡಿ ತಿಳಿಸಿದ್ದಾರೆ.ಮನ್ಮಿತ್ ರೈಯವರು ಕೆಲ ವರ್ಷಗಳ ಕಾಲ ಮುತ್ತಪ್ಪ ರೈ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು.ಬಳಿಕ ಅವರು ಅನುರಾಧಾ ಅವರೊಂದಿಗೂ ಆತ್ಮೀಯರಾಗಿದ್ದರು.ಸದ್ಯ ಉದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.