ಕೆಸರುಮಯವಾದ ಕೆಯ್ಯೂರು ಗ್ರಾಮದ ಮೇರ್ಲ-ನೂಜಿ-ಕೋಡಂಬು ರಸ್ತೆ…!
ಪುತ್ತೂರು: ಇದು ರಸ್ತೆಯೋ ಕೆಸರು ಗದ್ದೆಯೋ ಎಂಬಂತೆ ಭಾಸವಾಗುವ ಕೆಯ್ಯೂರು ಗ್ರಾಮದ ಮೇರ್ಲ-ನೂಜಿ-ಕೋಡಂಬು ರಸ್ತೆಯು ಸಂಪೂರ್ಣ ಕೆಸರುಮಯವಾಗಿದ್ದು ನಡೆದಾಡಲು ಕೂಡ ಕಷ್ಟಸಾಧ್ಯವಾಗಿದೆ. ಮೇರ್ಲದಿಂದ ನಂಜೆ ನೂಜಿ ಮೂಲಕ ಕೋಡಂಬುಗೆ ಸಂಪರ್ಕ ಕಲ್ಪಿಸುವ ಸುಮಾರು 5 ಕಿ.ಮೀ ದೂರದ ರಸ್ತೆಯಾಗಿದೆ. ಈಗಾಗಲೇ ಈ ರಸ್ತೆಯಲ್ಲಿ 1 ಕಿ.ಮೀ ವ್ಯಾಪ್ತಿಯಲ್ಲಿ ಕಾಂಕ್ರಿಟೀಕರಣ ಮಾಡಲಾಗಿದ್ದು ಉಳಿದಂತೆ ಕಚ್ಛಾ ರಸ್ತೆಯಾಗಿದೆ. ಇದೀಗ ರಸ್ತೆಯು ಅಲ್ಲಲ್ಲಿ ಕೆಸರುಮಯವಾಗಿದ್ದು ವಾಹನ ಸಂಚಾರ ಸೇರಿದಂತೆ ನಡೆದುಕೊಂಡು ಹೋಗಲು ಕೂಡ ಕಷ್ಟಸಾಧ್ಯವಾಗಿದೆ.
ಸಂಪೂರ್ಣ ಕೆಸರುಮಯ
ಈ ಭಾಗದಲ್ಲಿ 30 ಕ್ಕೂ ಅಧಿಕ ಮನೆಗಳಿದ್ದು ಪ್ರತಿನಿತ್ಯ ಶಾಲಾ, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡಿಕೊಂಡಿರುತ್ತಾರೆ. ಬದಲಿ ರಸ್ತೆ ಇಲ್ಲದೇ ಇರುವುದರಿಂದ ಈ ಭಾಗದ ಜನು ಇದೇ ರಸ್ತೆಯಲ್ಲಿ ಅವಲಂಬಿಸಿದ್ದಾರೆ. ಈ ವರ್ಷದ ಮಳೆಯಿಂದಾಗಿ ಕೆಲವೊಂದು ಕಡೆಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ಕೆಸರು ಮಯವಾಗಿದೆ. ಕೆಸರು ತುಂಬಿಕೊಂಡಿದ್ದರಿಂದ ನಡೆದುಕೊಂಡು ಹೋಗಲು ಕೂಡ ಕಷ್ಟಸಾಧ್ಯವಾಗಿದೆ. ದ್ವಿಚಕ್ರ ವಾಹನಗಳು ಸೇರಿದಂತೆ ಘನ ವಾಹನಗಳ ಸಂಚಾರಕ್ಕೂ ತೊಂದರೆಯಾಗಿದೆ. ಕೆಸರು ತುಂಬಿಕೊಂಡಿದ್ದರಿಂದ ಶಾಲಾ, ಕಾಲೇಜು ಮಕ್ಕಳು ಕೆಸರಿನಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಂಕ್ರಿಟೀಕರಣಕ್ಕೆ ಮನವಿ
5 ಕಿ.ಮೀ ವ್ಯಾಪ್ತಿಯ ಈ ರಸ್ತೆಯು ಈಗಾಗಲೇ 1 ಕಿ.ಮೀ ವ್ಯಾಪ್ತಿಯಷ್ಟು ಕಾಂಕ್ರೀಟ್ ಆಗಿದ್ದು ಉಳಿದಂತೆ ಮಣ್ಣಿನ ಕಚ್ಛಾ ರಸ್ತೆಯಾಗಿದೆ. ಆದ್ದರಿಂದ ಉಳಿದ 4 ಕಿ.ಮೀ ರಸ್ತೆಯನ್ನು ಕೂಡ ಕಾಂಕ್ರೀಟ್ ರಸ್ತೆಯನ್ನಾಗಿ ಮಾಡಿಕೊಡಬೇಕು ಎಂದು ಈ ಭಾಗದ ಜನರು ಶಾಸಕರಾದ ಅಶೋಕ್ ಕುಮಾರ್ ರೈಯವರಿಗೆ 2024 ದಶಂಬರ್ ತಿಂಗಳಲ್ಲಿ ಮನವಿ ಸಲ್ಲಿಸಿದ್ದರು. ಆದರೆ ಇದುವರೇಗೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಈ ಭಾಗದ ಸಾರ್ವಜನಿಕರು. ಆದ್ದರಿಂದ ಶಾಸಕರು ಈ ಬಗ್ಗೆ ಸ್ಪಂದಿಸುವಂತೆ ಮನವಿ ಮಾಡಿಕೊಂಡಿದ್ದಾರೆ.