ರೋಟರಿ ಕ್ಲಬ್ ಉಪ್ಪಿನಂಗಡಿ ಪದ ಪ್ರದಾನ

0


ಮನುಕುಲದ ಸೇವೆಯಲ್ಲಿ ರೋಟರಿಯ ಸೇವೆ ಅನನ್ಯ-ಯಶಸ್ವಿ ಸೋಮಶೇಖರ್

ಪುತ್ತೂರು: ಪ್ರಾಮಾಣಿಕತೆ, ಸೌಹಾರ್ದತೆ, ಪ್ರೀತಿ ವಿಶ್ವಾಸ, ಸಹಿಷ್ಣುತೆಗೆ ಉಪ್ಪಿನಂಗಡಿ ಪರಿಸರ ಹೇಗೆ ಸಾಕ್ಷಿಯಾಗಿದೆಯೋ ಹಾಗೆಯೇ ಮಹಾಮಾರಿ ಪೋಲಿಯೊ ಅನ್ನು ವಿಶ್ವದಿಂದಲೇ ನಿರ್ಮೂಲನೆ ಮಾಡಿದಂತಹ ದೇಶ ಸೇವೆಗೆ ರೋಟರಿ ಪಾತ್ರವಾಗಿದ್ದು ಮನುಕುಲದ ಸೇವೆಯಲ್ಲಿ ರೋಟರಿಯ ಸೇವೆ ಅನನ್ಯವಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ನಾಮಿನಿ ಯಶಸ್ವಿ ಎಸ್ ಸೋಮಶೇಖರ್ ರವರು ಹೇಳಿದರು.


ಜು.19 ರಂದು ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಸಭಾಂಗಣದಲ್ಲಿ ಸಂಜೆ ಜರಗಿದ ರೋಟರಿ ಕ್ಲಬ್ ಉಪ್ಪಿನಂಗಡಿ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭದಲ್ಲಿ ಅವರು ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ, ಪ್ರಮಾಣವಚನ ಬೋಧಿಸಿ ಮಾತನಾಡಿದರು.

ಸ್ವಾರ್ಥರಹಿತ ಸೇವೆಯಿಂದ ಸಂತೃಪ್ತಿ-ಎಸ್.ಪಿ ಸೈಮನ್
ಮುಖ್ಯ ಅತಿಥಿ, ಮಂಗಳೂರು ಪಶ್ಚಿಮ ಶ್ರೇಣಿಯ ಎಸ್.ಪಿ ಸಿ.ಎ ಸೈಮನ್ ಮಾತನಾಡಿ, ದೇಶದ, ಸಮಾಜದ ಪ್ರಗತಿಗೆ, ಬೆಳವಣಿಗೆಗೆ ರಾಜಕೀಯೇತರ ಸಂಸ್ಥೆಯಾಗಿರುವ ರೋಟರಿ ಎಂಬ ಸೇವಾ ಸಂಸ್ಥೆಯು ನಿರಂತರವಾಗಿ ಕಾರ್ಯ ನಿರ್ವಹಿಸಿ ಸಮಾಜ ಒಗ್ಗೂಡಿಸುವ ಮೂಲಕ ಸುಸ್ಥಿರತೆ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಸೇವೆ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ನಾಯಕತ್ವ ಒಲಿಯದು. ಯಾರು ಸ್ವಾರ್ಥರಹಿತ ಸೇವೆಯನ್ನು ನೀಡುತ್ತಾರೋ ಅವರಲ್ಲಿ ಸಂತೃಪ್ತಿ ಎಂಬುದು ಮನೆಮಾಡುತ್ತದೆ ಎಂದರು.

ಸಮಾಜದ ಒಳಿತಿಗಾಗಿ ಒಂದಾಗೋಣ, ಜೊತೆಯಾಗಿ ಸಾಗೋಣ-ಡಾ.ರಾಜಾರಾಮ್ ಕೆ.ಬಿ
ರೋಟರಿ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ಕೆ.ಬಿ ಮಾತನಾಡಿ, ಕಳೆದ ವರ್ಷ ಮಿತಭಾಷಿ, ಮೃದು ಭಾಷಿಯಾಗಿರುವ ನವೀನ್ ಬ್ರ್ಯಾಗ್ಸ್ ರವರ ಅಧ್ಯಕ್ಷತೆಯಲ್ಲಿ ನವನವೀನ, ನಿತ್ಯನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕ್ಲಬ್‌ಗೆ ಪ್ಲಾಟಿನಂ ಫ್ಲಸ್ ಪ್ರಶಸ್ತಿ ಲಭಿಸಿದೆ. ಹಾಗೇಯೇ ಪ್ರಸ್ತುತ ವರ್ಷ ಎತ್ತರದ ವ್ಯಕ್ತಿಯ ಜೊತೆಗೆ ಎತ್ತರದ ವ್ಯಕ್ತಿತ್ವ ಹೊಂದಿರುವ ನೂತನ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ರವರ ನೇತೃತ್ವದಲ್ಲಿ ಈಗಾಗಲೇ ಸರಕಾರಿ ಶಾಲೆಯ ಉನ್ನತೀಕರಣಕ್ಕೆ ರೂ.ಒಂದು ಲಕ್ಷ ನೀಡುವ ಮೂಲಕ ಕನಸುಗಳನ್ನು ಭಿತ್ತಿದ್ದಾರೆ. ಒಂದು ವರ್ಷದ ಅವಧಿಯು ಕ್ಲಬ್‌ನ ಏಳಿಗೆಯತ್ತ ಪದಾಧಿಕಾರಿಗಳದ್ದು ಭಾವನೆಗಳೊಂದಿಗೆ ಸಂಘರ್ಷವೇ ಹೊರತು ಜಗಳ ಅಲ್ಲ. ನಾವೆಲ್ಲಾ ಸಮಾಜದ ಒಳಿತಿಗಾಗಿ ಒಂದಾಗೋಣ, ಜೊತೆಯಾಗಿ ಸಾಗೋಣ, ದೀನ ದುರ್ಬಲರ ಶಕ್ತಿಯಾಗೋಣ ಎಂದರು.

ರೊಟೇರಿಯನ್ಸ್ ಗಳು ಒಂದಾಗಿ ಸಮಾಜವನ್ನು ಸದೃಢಗೊಳಿಸೋಣ-ಹರೀಶ್ ಸಿ.ಎಚ್
ರೋಟರಿ ವಲಯ ಸೇನಾನಿ ಹರೀಶ್ ಸಿ.ಎಚ್ ಮಾತನಾಡಿ, ಅಂತರ್ರಾಷ್ಟ್ರೀಯ ರೋಟರಿಯ ಧ್ಯೇಯವಾಕ್ಯವಾಗಿರುವ ಒಳಿತಿಗಾಗಿ ಒಂದಾಗೋಣ ಎಂಬಂತೆ ನಾವು ರೊಟೇರಿಯನ್ಸ್ ಗಳು ಒಂದಾಗಿ ಸಮಾಜವನ್ನು ಸದೃಢಗೊಳಿಸೋಣ. ನೂತನ ಜಿಲ್ಲಾ ಗವರ್ನರ್ ರವರ ಜಿಲ್ಲಾ ಯೋಜನೆಗಳನ್ನು ಯಶಸ್ವಿಗೊಳಿಸೋಣ ಎಂದರು.

ಪರಸ್ಪರ ಸಹಕಾರ, ತೊಡಗಿಸಿಕೊಳ್ಳುವಿಕೆಯಿಂದ ಬಾಂಧವ್ಯ ವೃದ್ಧಿ-ಡಾ.ಶ್ರೀಪ್ರಕಾಶ್
ಮಾತೃಸಂಸ್ಥೆ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಮಾತನಾಡಿ, ಮನುಷ್ಯ ತನ್ನ ಹುಟ್ಟು ಹಾಗೂ ಸಾವು ಇವುಗಳ ನಡುವೆ ಮನುಕುಲಕ್ಕೆ ನಿಸ್ವಾರ್ಥತೆಯ ಜೊತೆಗೆ ಪ್ರೀತಿಯಿಂದ ನೆನಪಿನಲ್ಲಿ ಉಳಿಯುಂತಹ ಕಾರ್ಯಗಳನ್ನು ಮಾಡಬೇಕಾಗಿದೆ. ಸಮಾಜ ಸೇವೆಯಲ್ಲಿ ಪರಸ್ಪರ ಸಹಕಾರ ಹಾಗೂ ತೊಡಗಿಸಿಕೊಳ್ಳುವಿಕೆಯನ್ನು ಹೊಂದಿದಾಗ ನಮ್ಮೊಡನೆ ಬಾಂಧವ್ಯ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಪ್ಲಾಟಿನಂ ಫ್ಲಸ್ ಅವಾರ್ಡ್ ಕ್ಲಬ್ ಸದಸ್ಯರಿಗೆ ಅರ್ಪಣೆ-ನವೀನ್ ಬ್ರ್ಯಾಗ್ಸ್
ಕ್ಲಬ್ ನಿರ್ಗಮಿತ ಅಧ್ಯಕ್ಷ ನವೀನ್ ಬ್ರ್ಯಾಗ್ಸ್ ಮಾತನಾಡಿ, ಕ್ಲಬ್ 34ನೇ ಅಧ್ಯಕ್ಷನಾಗಿ ಕ್ಲಬ್ ನ ಪೂರ್ವಾಧ್ಯಕ್ಷರ ಹಾಗೂ ಸದಸ್ಯರ ಸಹಕಾರದೊಂದಿಗೆ ಕ್ಲಬ್ ಮುನ್ನೆಡೆಸಿ ಕ್ಲಬ್ ಗೆ ಪ್ಲಾಟಿನಂ ಅವಾರ್ಡ್ ಗಳಿಸಿದ್ದು, ಈ ಅವಾರ್ಡ್ ಅನ್ನು ಸದಸ್ಯರಿಗೆ ಸಮರ್ಪಿಸುತ್ತಿದ್ದೇನೆ. ಕೃಷಿ ಹಿನ್ನೆಲೆಯಿಂದ ಬಂದವನಾದ ನಾನು ಸಂಘ ಸಂಸ್ಥೆಗಳೊಂದಿಗೆ ಬೆರೆತು ಕೆಲಸ ಮಾಡಲು ಉತ್ಸುಕನಾಗಿರುತ್ತೇನೆ ಜೊತೆಗೆ ರೋಟರಿ ಗೆಳೆಯರ ಗೆಳೆತನ ಸಂಪಾದಿಸಲು ಕಾರಣವಾಗಿದೆ ಎಂದರು.

ನೂತನ ಸದಸ್ಯರ ಸೇರ್ಪಡೆ
ಪ್ರಗತಿಪರ ಕೃಷಿಕರು ಪ್ರಸ್ತುತ ಟ್ರಾನ್ಸ್ ಪೋರ್ಟ್ ಉದ್ಯಮವನ್ನು ನಡೆಸುತ್ತಿರುವ ಶಂಕರನಾರಾಯಣ ರಾವ್, ಉಪ್ಪಿನಂಗಡಿ ಕರ್ನಾಟಕ ಬ್ಯಾಂಕ್ ನ ಸ್ಪೆಷಲ್ ಕಸ್ಟಮ್ಸ್ ಅಧಿಕಾರಿ ಹರಿಶ್ಚಂದ್ರ ಯು, ಜಿಂದಾಲ್ ಕಂಪೆನಿಯಲ್ಲಿ ಮ್ಯಾನೇಜರ್ ಆಗಿರುವ ಪ್ರದೀಪ್ ಎಚ್.ಆರ್, ಉದ್ಯಮಿ ನಾಗೇಶ್ ಪ್ರಭು ಉಪ್ಪಿನಂಗಡಿ, ನಿವೃತ್ತ ಸಿ.ಆರ್.ಪಿ.ಇ ಈಶ್ವರ ನಾಯ್ಕ ಜಿ, ಪ್ರಗತಿಪರ ಕೃಷಿಕ, ಗೆಜ್ಜೆಗಿರಿ ಕ್ಷೇತ್ರದ ಆಡಳಿತ ಸಮಿತಿ ಸದಸ್ಯ ಉಲ್ಲಾಸ್ ಕೋಟ್ಯಾನ್ ರವರುಗಳನ್ನು ಜಿಲ್ಲಾ ಗವರ್ನರ್ ನಾಮಿನಿ ಯಶಸ್ವಿ ಸೋಮಶೇಖರ್ ರವರು ರೋಟರಿ ಪಿನ್ ತೊಡಿಸಿ ಕ್ಲಬ್ ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.

ಜಿಲ್ಲಾ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನೆ
ಕ್ಲಬ್ ಸದಸ್ಯರಾಗಿದ್ದು ಜಿಲ್ಲೆಯ ವಿವಿಧ ಸಮಿತಿಗಳಲ್ಲಿ ಸೇವೆಯನ್ನು ಸಲ್ಲಿಸಲಿರುವ ಅಸಿಸ್ಟೆಂಟ್ ಗವರ್ನರ್ ಡಾ.ರಾಜಾರಾಮ್ ಕೆ.ಬಿ, ಅಬ್ದುಲ್ ರಹಿಮಾನ್ ಯೂನಿಕ್, ಜಗದೀಶ್ ನಾಯಕ್, ಚಂದಪ್ಪ ಮೂಲ್ಯರವರುಗಳನ್ನು ಅಭಿನಂದಿಸಲಾಯಿತು.

ಸಾಧಕ ಆನೆಟ್ ಗಳಿಗೆ ಅಭಿನಂದನೆ
ಕ್ಲಬ್ ಸದಸ್ಯರ ಮಕ್ಕಳಾಗಿದ್ದು ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಆರನ್ ಮಸ್ಕರೇನ್ಹಸ್ (ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ರವರ ಪುತ್ರ), ಅಲ್ಫಿಯಾ ಸನಾ(ಅಬೂಬಕ್ಕರ್ ರವರ ಪುತ್ರಿ), ಸಿಎ ಫೌಂಡೇಶನ್ ಪರೀಕ್ಷೆಯ ಪ್ರಥಮ ಹೆಜ್ಜೆಯಲ್ಲಿ ಉತ್ತೀರ್ಣರಾದ ಅಶ್ವಿಜಾ ನಾಯಕ್(ಜಗದೀಶ್ ನಾಯಕ್ ರವರ ಪುತ್ರಿ), ಬಹುಮುಖ ಪ್ರತಿಭೆ ಶಮಿಕಾ(ಕೇಶವ ಪಿ.ಎಂರವರ ಪುತ್ರಿ) ರವರುಗಳನ್ನು ಅಭಿನಂದಿಸಲಾಯಿತು.

ಧನಸಹಾಯ/ಪಿ.ಎಚ್.ಎಫ್ ಗೌರವ
ಕ್ಲಬ್ ನಿಯೋಜಿತ ಅಧ್ಯಕ್ಷ ಕೇಶವ ಪಿ.ಎಂರವರ ಪ್ರಾಯೋಜಕತ್ವದಲ್ಲಿ ಹಿರೇಬಂಡಾಡಿ ಸರಕಾರಿ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳಾದ ಪುಣ್ಯಶ್ರೀ, ಸ್ವಸ್ತಿಕ್, ಮಾನ್ಯ ಪಿ.ಎಂರವರಿಗೆ ಹಾಗೂ ಚಂದಪ್ಪ ಮೂಲ್ಯರವರ ಪ್ರಾಯೋಜಕತ್ವದಲ್ಲಿ ದೇಲಂತಬೆಟ್ಟು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ರೂ. 13500/- ಅನ್ನು ಶಾಲೆಯ ಶಿಕ್ಷಕಿಯವರಿಗೆ ಹಸ್ತಾಂತರಿಸಲಾಯಿತು ಹಾಗೂ ರೋಟರಿ ಫೌಂಡೇಶನ್ ಗೆ ಟಿ.ಆರ್.ಎಫ್ ದೇಣಿಗೆ ನೀಡುವ ಮೂಲಕ ಪಿ.ಎಚ್.ಎಫ್ ಪದವಿಗೆ ಭಾಜನರಾದ ಜಗದೀಶ್ ನಾಯಕ್ ರವರನ್ನು ಗೌರವಿಸಲಾಯಿತು.


ಪದ ಪ್ರದಾನ
ಕ್ಲಬ್ ನೂತನ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಕಾರ್ಯದರ್ಶಿ ಶ್ರೀಕಾಂತ್ ಪಟೇಲ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಯೂನಿಕ್, ಉಪಾಧ್ಯಕ್ಷ ಹಾಗೂ ನಿಯೋಜಿತ ಅಧ್ಯಕ್ಷ ಕೇಶವ ಪಿ.ಎಂ, ಸಾರ್ಜಂಟ್ ಎಟ್ ಆಮ್ಸ್೯ ರಾಜೇಶ್ ದಿಂಡಿಗಲ್, ಕ್ಲಬ್ ಸರ್ವಿಸ್ ನಿರ್ದೇಶಕಿ ಆಶಾಲತಾ, ವೊಕೇಶನಲ್ ಸರ್ವಿಸ್ ನಿರ್ದೇಶಕಿ ಲವೀನಾ ಪಿಂಟೊ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಜಗದೀಶ್ ನಾಯಕ್, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ನೀರಜ್ ಕುಮಾರ್ ಎ, ಯೂತ್ ಸರ್ವಿಸ್ ನಿರ್ದೇಶಕ ಅರುಣ್ ಬಿ.ಕೆ, ಚೇರ್ಮನ್ ಗಳಾದ ಅನುರಾಧಾ ಆರ್ ಶೆಟ್ಟಿ(ಮೆಂಬರ್ ಶಿಪ್), ಸ್ವರ್ಣೇಶ್ ಗಾಣಿಗ(ಟಿ.ಆರ್.ಎಫ್), ಸ್ವರ್ಣ ಪೊಸವಳಿಕೆ(ಪಬ್ಲಿಕ್ ಇಮೇಜ್), ರಾಜಶೇಖರ್ ಶೆಟ್ಟಿ(ಜಿಲ್ಲಾ ಪ್ರಾಜೆಕ್ಟ್), ವಂದನಾ ಮುದಲಾಜೆ(ಪಲ್ಸ್ ಪೋಲಿಯೊ), ಇಸ್ಮಾಯಿಲ್ ಇಕ್ಬಾಲ್(ವೆಬ್, ಡಿಜಿಟಲ್)ರವರುಗಳಿಗೆ ಡಿಜಿ ನಾಮಿನಿ ಯಶಸ್ವಿ ಸೋಮಶೇಖರ್ ರವರು ಪದ ಪ್ರದಾನ ನೆರವೇರಿಸಿದರು.


ಸಭೆಯಲ್ಲಿ ಉಪ್ಪಿನಂಗಡಿ ದೀನರ ಕನ್ಯಾಮಾತಾ ದೇವಾಲಯದ ಧರ್ಮಗುರು ವಂ.ಜೆರಾಲ್ಡ್ ಡಿ’ಸೋಜ ಹಾಗೂ ವೇದಿಕೆಯಲ್ಲಿ 2022-23ನೇ ಸಾಲಿನ ಅಧ್ಯಕ್ಷೆ ಅನುರಾಧಾ ಆರ್.ಶೆಟ್ಟಿ ಉಪಸ್ಥಿತರಿದ್ದರು. ಅನಿತಾ ಕ್ರಾಸ್ತಾ ಹಾಗೂ ವೀಣಾ ಮಸ್ಕರೇನ್ಹಸ್ ಪ್ರಾರ್ಥಿಸಿದರು. ಕ್ಲಬ್ ನಿರ್ಗಮಿತ ಅಧ್ಯಕ್ಷ ನವೀನ್ ಬ್ರ್ಯಾಗ್ಸ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಶ್ರೀಕಾಂತ್ ಪಟೇಲ್ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ಕೇಶವ ಪಿ.ಎಂ ಕ್ಲಬ್ ವರದಿ ಮಂಡಿಸಿದರು. ರಾಜಶೇಖರ್ ಶೆಟ್ಟಿ, ಮನ್ಸೂರ್, ಸ್ವರ್ಣೇಶ್ ಗಾಣಿಗ, ಪ್ರವೀಣ್ ಮಾಡ್ತಾರವರು ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಅಝೀಝ್ ಬಸ್ತಿಕ್ಕಾರ್, ಹರೀಶ್ ನಟ್ಟಿಬೈಲು, ಅಬ್ದುಲ್ ರಹಿಮಾನ್ ಯೂನಿಕ್, ಸ್ವರ್ಣ ಪೊಸೋಳಿಕೆ, ವಿಜಯಕುಮಾರ್ ಕಲ್ಲಳಿಕೆರವರು ಅತಿಥಿಗಳ ಪರಿಚಯ ಮಾಡಿದರು. ಲವೀನಾ ಪಿಂಟೊ ಹಾಗೂ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.



ಹುದ್ದೆ ಅಧಿಕಾರ ಅಲ್ಲ, ಜವಾಬ್ದಾರಿ..
ಕ್ಲಬ್‌ನ 35ನೇ ಅಧ್ಯಕ್ಷನಾಗಿ ಆಯ್ಕೆ ಮಾಡಿದ ಕ್ಲಬ್ ಸದಸ್ಯರುಗಳಿಗೆ ತುಂಬು ಹೃದಯದ ಕೃತಜ್ಞತೆಗಳೊಂದಿಗೆ ಜಿಲ್ಲಾ ಗವರ್ನರ್ ರವರ ಹತ್ತು ಯೋಜನೆಗಳನ್ನು ಕಾರ್ಯಗತ ಮಾಡಲು ನಾನು ಮತ್ತು ನಮ್ಮ ತಂಡವು ವಿಶ್ವಾಸದೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇನೆ. ನಮ್ಮ ಸದಸ್ಯರ ನಡುವಿನ ಬಾಂಧವ್ಯವನ್ನು ಮುಂದುವರೆಸುತ್ತಾ ಸಮಾಜದ ಉನ್ನತಿಗಾಗಿ ಶ್ರಮಿಸಲಿದ್ದೇವೆ. ಹುದ್ದೆ ಎಂಬುದು ಅಧಿಕಾರ ಅಲ್ಲ ಬದಲಾಗಿ ಅದು ಜವಾಬ್ದಾರಿ ಎಂದು ಅರಿತು ಹುದ್ದೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತೇನೆ. ನಾವೆಲ್ಲರೂ ಸಮಾಜದ ಒಳಿತಿಗಾಗಿ ಒಂದಾಗೋಣ.
ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಉಪ್ಪಿನಂಗಡಿ

ನೆಕ್ಕಿಲಾಡಿ ಶಾಲಾಭಿವೃದ್ಧಿಗೆ ರೂ.1 ಲಕ್ಷ ಚೆಕ್
ಪ್ರಸ್ತುತ ವಿದ್ಯಾಮಾನದಲ್ಲಿ ಸರಕಾರಿ ಶಾಲೆಯತ್ತ ವಿದ್ಯಾರ್ಥಿಗಳನ್ನು ದಾಖಲಿಸದೆ ಖಾಸಗಿ ಶಾಲೆಗಳತ್ತ ಆಕರ್ಷಿತರಾಗಿ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಈ ನಿಟ್ಟಿನಲ್ಲಿ ಕ್ಲಬ್ ನೂತನ ಅಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್ ರವರ ತಂಡ ನೆಕ್ಕಿಲಾಡಿ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕೈಂಕರ್ಯಕ್ಕೆ ಮುಂದಾಗಿದ್ದು, ಆ ಶಾಲೆಯಲ್ಲಿ ಎಲ್.ಕೆ.ಜಿ ಹಾಗೂ ಯುಕೆಜಿ ಶಿಕ್ಷಣವನ್ನು ಆರಂಭಿಸಲಾಗಿದೆ. ಎಲ್.ಕೆ.ಜಿ/ಯುಕೆಜಿ ಶಿಕ್ಷಣವನ್ನು ಬೋಧಿಸುವ ಶಿಕ್ಷಕರ ಒಂದು ವರ್ಷದ ಸಂಬಳ ಹಾಗೂ ಅಗತ್ಯ ಸಾಮಾಗ್ರಿಗಳ ವೆಚ್ಚವಾಗಿ ರೂ.1 ಲಕ್ಷದ ಚೆಕ್ ಅನ್ನು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಕಾವೇರಿರವರಿಗೆ ಡಿಜಿ ನಾಮಿನಿ ಯಶಸ್ವಿ ಸೋಮಶೇಖರ್ ರವರು ಹಸ್ತಾಂತರಿಸಿದರು.

ಸನ್ಮಾನ/ಗೌರವಾರ್ಪಣೆ
ಲ್ಯಾಂಬಿ ಆಟೋ ರಿಕ್ಷಾದಿಂದ ಹಿಡಿದು ಇಂದಿನ ವಿದ್ಯುತ್ ಚಾಲಿತ ಆಟೋ ರಿಕ್ಷಾವನ್ನು ಸಮಾಜ ಕಂಡಿದ್ದು ಕಳೆದ 40 ವರ್ಷಗಳಿಂದ ಉಪ್ಪಿನಂಗಡಿ ಪರಿಸರದಲ್ಲಿ ಆಟೋ ರಿಕ್ಷಾವನ್ನು ಓಡಿಸುತ್ತಿರುವ ಹಿರಿಯ ಚಾಲಕರಾದ ಕಾಳಿಕಾಂಬ ಆಟೋರಿಕ್ಷಾದ ನಾರಾಯಣ ಆಚಾರ್ಯ, ಪಯಣಿಗ ಆಟೋ ರಿಕ್ಷಾದ ಅಬ್ಬಾಸ್, ಮರಿಯಾ ಜ್ಯೋತಿ ಆಟೋ ರಿಕ್ಷಾದ ಮ್ಯಾಕ್ಸಿಂ ಡಿ’ಕೋಸ್ಟರವರುಗಳನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ನಿರ್ಗಮಿತ ಅಸಿಸ್ಟೆಂಟ್ ಗವರ್ನರ್ ಜಯರಾಮ್ ರೈ, ವಲಯ ಸೇನಾನಿ ಗ್ರೇಸಿ ಗೊನ್ಸಾಲ್ವಿಸ್, ಪ್ಲಾಟಿನಂ ಫ್ಲಸ್ ಅವಾರ್ಡ್ ಭಾಜನರಾದ ನಿರ್ಗಮಿತ ಅಧ್ಯಕ್ಷ ನವೀನ್ ಬ್ರ್ಯಾಗ್ಸ್, ಕಾರ್ಯದರ್ಶಿ ಕೇಶವ ಪಿ.ಎಂ, ಮೂಲತಃ ಉಪ್ಪಿನಂಗಡಿ ನಿವಾಸಿ, ಪ್ರಸ್ತುತ ಮಂಗಳೂರು ಪಶ್ಚಿಮ ಶ್ರೇಣಿಯ ಎಸ್.ಪಿ ಸಿ.ಎ ಸೈಮನ್ ರವರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here