ಉಪ್ಪಿನಂಗಡಿ: ಊರವರು ಒಂದಾಗಿ ದೇವಸ್ಥಾನಗಳಿಗೆ ಹೆಚ್ಚು ಹೆಚ್ಚು ಹೋದಂತೆ ದೂರದ ಊರಿನ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತದೆ. ಜೊತೆಗೆ ಸಾನಿಧ್ಯ ವೃದ್ಧಿಯಾಗುತ್ತದೆ. ಈ ಮೂಲಕ ದೇವಸ್ಥಾನದ ಅಭಿವೃದ್ಧಿಗೂ ಸಹಕಾರಿ ಆಗಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಆ.24ರಂದು ಹಿರೇಬಂಡಾಡಿಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವತಿಯಿಂದ ನಡೆದ ಹಿರೇಬಂಡಾಡಿ ಗ್ರಾಮದ ಭಕ್ತರ ಸಭೆಯಲ್ಲಿ ಮಾತನಾಡಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ ಸೀಮೆ ದೇವಸ್ಥಾನಕ್ಕಿಂತಲೂ ಅದೊಂದು ಪವಿತ್ರ ಕ್ಷೇತ್ರವಾಗಿ ಬೆಳೆಯುತ್ತಿದೆ. ಸರಕಾರದ ವತಿಯಿಂದ ಎಷ್ಟೇ ಅನುದಾನ ದೊರಕಿ ಅಭಿವೃದ್ಧಿ ಆಗುವುದಿದ್ದರೂ, ಅದಕ್ಕೆ ಸಾರ್ವಜನಿಕರ ದೇಣಿಗೆಯೂ ಮುಖ್ಯ. ಆ ಮೂಲಕ ನಾವುಗಳು ದೇವರಿಗೆ ಹತ್ತಿರವಾಗುತ್ತೇವೆ. ಈ ನಿಟ್ಟಿನಲ್ಲಿ ನಾವುಗಳು ದೇವಸ್ಥಾನದ ಅಭಿವೃದ್ಧಿಯ ಸಲುವಾಗಿ ಭಕ್ತಿ, ಶ್ರದ್ಧೆಯಿಂದ ದೈವಭಕ್ತರಾಗಿ ಕೆಲಸ ಮಾಡೋಣ ಎಂದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾೖಕ್ ಮಾತನಾಡಿ, ದೇವಸ್ಥಾನದಲ್ಲಿ ಯಾವುದೇ ರಾಜಕೀಯ ಇಲ್ಲದೆ ಅಭಿವೃದ್ಧಿ ಕೆಲಸಗಳು ನಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರತೀ ಗ್ರಾಮ ಮಟ್ಟದಲ್ಲೂ ಸಭೆ ನಡೆಸಿ, ಸಮಿತಿ ರಚಿಸಲಾಗಿ ಎಲ್ಲರನ್ನೂ ದೇವಸ್ಥಾನದತ್ತ ಬರುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಭಾಗಿಗಳಾಗಬೇಕು ಎಂದರು.
ಹಿರೇಬಂಡಾಡಿ ಶ್ರೀ ಷಣ್ಮುಖ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಶಾಂತಿದಡ್ಡ ಮಾತನಾಡಿ, ನಮ್ಮ ನೆರೆಯ ಉಪ್ಪಿನಂಗಡಿ ದೇವಸ್ಥಾನದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ದೊರಕುತ್ತಿದೆ. ಇದು ಸಂತೋಷದ ವಿಚಾರವಾಗಿದ್ದು, ಹಿರೇಬಂಡಾಡಿ ಗ್ರಾಮಸ್ಥರಾದ ನಾವುಗಳು ಅವರ ಬೆನ್ನ ಹಿಂದೆ ನಿಂತು ಸಹಕಾರ ನೀಡಬೇಕು ಎಂದರು. ಸ್ಥಳೀಯ ಪ್ರಮುಖರಾದ ರವೀಂದ್ರ ದರ್ಬೆ, ಪುಷ್ಪರಾಜ್ ಶೆಟ್ಟಿ ಸಲಹೆ ಸೂಚನೆ ನೀಡಿದರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದೇವದಾಸ ರೈ, ಜಿ. ಕೃಷ್ಣ ರಾವ್ ಅರ್ತಿಲ, ವೆಂಕಪ್ಪ ಪೂಜಾರಿ, ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಾನಂದ ಶೆಟ್ಟಿ, ಸದಸ್ಯರಾದ ಗೀತಾ ದಾಸರಮೂಲೆ, ಸವಿತಾ ಹರೀಶ್, ಭಜನಾ ಮಂಡಳಿ ಅಧ್ಯಕ್ಷ ಚಂದ್ರಶೇಖರ, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಾದ ದಯಾನಂದ ಸರೋಳಿ, ಸುಧಾಕರ, ನಿತ್ಯಾನಂದ ಶೆಟ್ಟಿ, ಅಶೋಕ್ ಕುಮಾರ್ ಪಡ್ಪು, ಶಿವಚಂದ್ರ, ರವಿ ಪಟಾರ್ತಿ ಮತ್ತಿತರರು ಉಪಸ್ಥಿತರಿದ್ದರು. ದೇವಸ್ಥಾನದ ಸಿಬ್ಬಂದಿಗಳಾದ ಸುಧಾಕರ ಕೋಟೆ ಸ್ವಾಗತಿಸಿದರು. ದಿವಾಕರ ಗೌಡ ವಂದಿಸಿದರು.