ಶೀಘ್ರವೇ ಕ್ರೀಡಾಂಗಣ ಕಾಮಗಾರಿಗೆ ಚಾಲನೆ : ಶಾಸಕ ಅಶೋಕ್ ರೈ
ಪುತ್ತೂರು: ನರಿಮೊಗರು ,ಕೆಮ್ಮಿಂಜೆ ಗ್ರಾಮದ ಗಡಿಭಾಗವಾದ ಮುಂಡೂರಿನಲ್ಲಿ ನಿರ್ಮಾಣವಾಗಲಿರುವ ತಾಲೂಕು ಕ್ರೀಡಾಂಗಣ ಅಭಿವೃದ್ದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ₹ 9.50 ಕೋಟಿ ರೂ ಅನುದಾನ ಮಂಜೂರಾಗಿದೆ.

ಮುಂಡೂರಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕಾಯ್ದಿರಿಸಲಾಗಿರುವ ಜಾಗದಲ್ಲಿ ಈಗಾಗಲೇ ಒಂದು ಹಂತದ ಕಾಮಗಾರಿ ಪೂರ್ಣಗೊಂಡಿದೆ. ಉದ್ದೇಶಿತ ಜಾಗದಲ್ಲಿದ್ದ ಮರಗಳನ್ನು ಕತ್ತರಿಸುವ ಕಾಮಗಾರಿ ಪೂರ್ಣಗೊಂಡಿದೆ. ಇದೀಗ ಕ್ರೀಡಾಂಗಣ ಸಮತಟ್ಟು ,ಹಾಗೂ ಆವರಣ ಗೋಡೆ ಕಾಮಗಾರಿಗೆ ಸರಕಾರ ಅನುದಾನ ಬಿಡುಗಡೆ ಮಾಡಿದೆ. ಪುತ್ತೂರು ಶಾಸಕರ ಕನಸಿನ ಕೂಸಾಗಿರುವ ಈ ಕ್ರೀಡಾಂಗಣ ಯೋಜನೆ ಕಾಮಗಾರಿಗೆ ಶೀಘ್ರವೇ ಚಾಲನೆ ದೊರೆಯಲಿದೆ.
15 ಎಕ್ರೆ ಜಾಗದಲ್ಲಿ ವಿಶಾಲ ಕ್ರೀಡಾಂಗಣ
ಸುಮಾರು 15 ಎಕ್ರೆ ಜಾಗದಲ್ಲಿ ಈ ಕ್ರೀಡಾಂಗಣ ನಿರ್ಮಾಣವಾಗಲಿದೆ. ಕ್ರೀಡಾಂಗಣ ಮಾತ್ರವಲ್ಲದೆ ಈಜುಕೊಳ, ಬಾಸ್ಕೆಟ್ ಬಾಲ್, ವಾಕಿಂಗ್ ಟ್ರ್ಯಾಕ್ ಸೇರಿದಂತೆ ಕ್ರೀಡೆಗೆ ಸಂಬಂಧಿಸಿದ ಎಲ್ಲವೂ ಇಲ್ಲಿಯೇ ನಿರ್ಮಾಣವಾಗಲಿದೆ.
ತಾಲೂಕಿನ ಬೃಹತ್ ಕ್ರೀಡಾಂಗಣ
ಈ ಕ್ರೀಡಾಂಗಣ ತಾಲೂಕು ಕ್ರೀಡಾಂಗಣವಾಗುವುದರ ಜೊತೆಗೆ ತಾಲೂಕಿನಲ್ಲಿಯೇ ಅತಿ ದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆಯೂ ಇದೆ. ಶಾಸಕ ಅಶೋಕ್ ರೈ ಮುತುವರ್ಜಿಯಿಂದ ಜಾಗವನ್ನು ಮಂಜೂರು ಮಾಡಿಸಿ ಅನುದಾನಕ್ಕೆ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಇದೀಗ ಮೊದಲ ಹಂತದ ಅನುದಾನ ಬಿಡಗಡೆಯಾಗಿರುವುದು ಕ್ರೀಡಾಂಗಣದ ಅಭಿವೃದ್ದಿ ವಿಚಾರ ಗರಿಗೆದರಿದೆ.
ಮುಂಡೂರಿನಲ್ಲಿ ನಿರ್ಮಾಣವಾಗಲಿರುವ ತಾಲೂಕು ಕ್ರೀಡಾಂಗಣಕ್ಕೆ 9.50 ಕೋಟಿ ರೂ ಅನುದಾನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಮಂಜೂರಾಗಿದೆ. ಸುಮಾರು 15 ಎಕ್ರೆ ಜಾಗದಲ್ಲಿ ಕ್ರೀಡಾಂಗಣ ಕಂಗೊಳಿಸಲಿದೆ. ಉದ್ದೇಶಿತ ಜಾಗದಲ್ಲಿದ್ದ ಮರಗಳನ್ನು ಕಟಾವು ಮಾಡುವ ಕೆಲಸ ಮುಗಿದಿದೆ. ಈಗ ಬಿಡುಗಡೆಯಾದ ಅನುದಾನದಲ್ಲಿ ಕ್ರೀಡಾಂಗಣ ನಿರ್ಮಾಣ ಮತ್ತು ತಡೆಗೋಡೆ ನಿರ್ಮಾಣವಾಗಲಿದೆ. ಅನುದಾನ ಬಿಡುಗಡೆ ಮಾಡುವಲ್ಲಿ ಸಹಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ,ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಕ್ರೀಡಾಂಗಣ ನಿರ್ಮಾಣವಾಗುವುದರ ಜೊತೆ ಪುತ್ತೂರಿನ ಜನತೆಯ ಬಹುಕಾಲದ ಬೇಡಿಕೆಯೊಂದು ಈಡೇರಿದಂತಾಗಿದೆ.
ಅಶೋಕ್ ರೈ ಶಾಸಕರು,ಪುತ್ತೂರು