ಪುತ್ತೂರು: ಸೆ.22ರಿಂದ ಆಂಧ್ರಪ್ರದೇಶದ ನಾಗಾರ್ಜುನ್ ಯೂನಿವರ್ಸಿಟಿಯಲ್ಲಿ ನಡೆಯುವ ದಕ್ಷಿಣ ಭಾರತ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿಯ ಜಿ.ಎಂ. ಕೀರ್ತಿ ಅವರು ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿದ್ದಾರೆ.
16ರ ವಯೋಮಿತಿಯ ವಿಭಾಗದಲ್ಲಿ 80 ಮೀಟರ್ ಹರ್ಡಲ್ಸ್ ಹಾಗೂ ಹೈಜಂಪ್ ಸ್ಪರ್ಧೆಗೆ ಆಯ್ಕೆಯಾಗಿರುವ ಇವರು ಸೆ.14ರಂದು ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ ಮೈಸೂರು ಡಿವಿಜನ್ ದಸರಾ ಕ್ರೀಡಾಕೂಟದಲ್ಲಿ ಮಹಿಳೆಯರ ಟ್ರಿಪಲ್ ಜಂಪ್ನಲ್ಲಿ ಬೆಳ್ಳಿ ಪದಕ ಹಾಗೂ ಹೈಜಂಪ್ ಮತ್ತು 100 ಮೀಟರ್ ಹರ್ಡಲ್ಸ್ ನಲ್ಲಿ ಕಂಚಿನ ಪದಕ ಪಡೆದು ದಸರಾ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಅತ್ಯಂತ ಕಿರಿಯ ಅಥ್ಲಿಟ್ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಹಲವಾರು ಪ್ರತಿಭೆಗಳಿಗೆ ತರಬೇತಿ ನೀಡುತ್ತಿರುವ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಬಾರ್ತಿಕುಮೇರು ಅವರಿಂದ ತರಬೇತಿ ಪಡೆಯುತ್ತಿರುವ ಕೀರ್ತಿ ಅವರು ಎಳೆಯ ಪ್ರಾಯದಲ್ಲಿಯೇ ತನ್ನ ಸಾಧನೆ ಮೂಲಕ ಪುತ್ತೂರಿಗೆ ಕೀರ್ತಿ ತಂದಿದ್ದಾರೆ.