ರಾಷ್ಟ್ರರಕ್ಷಣಾ-ವಿವೇಕ ಶಿಕ್ಷಣ ಶೀರ್ಷಿಕೆಯಡಿ ಶಿಕ್ಷಕರಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ

0

ಶಿಕ್ಷಕನಾದವನು ಮೌಲ್ಯಾಧಾರಿತ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ಸೂಕ್ಷ್ಮಚಿಂತನೆಯನ್ನು ಮೂಡಿಸಬೇಕು: ಚಕ್ರವರ್ತಿ ಸೂಲಿಬೆಲೆ

ಸ್ವಾಮಿ ವಿವೇಕಾನಂದರ ಚಿಕಾಗೋ ಉಪನ್ಯಾಸದ 132ನೇ ವರ್ಷದ ಪ್ರಯುಕ್ತ ವಿಶೇಷ ಕಾರ್ಯಕ್ರಮ

ಚಿಂತಕರು ಹಾಗೂ ಖ್ಯಾತವಾಗ್ಮಿಗಳಾದ ಚಕ್ರವರ್ತಿಸೂಲಿಬೆಲೆ ಇವರಿಂದ ಉಪನ್ಯಾಸ

ಪುತ್ತೂರು: ಹಿಂದಿನ ಕಾಲದ ವಿದ್ಯಾರ್ಥಿಗಳಿಗೆ ಹಾಗೂ ಪ್ರಸ್ತುತಕಾಲಘಟ್ಟದ ವಿದ್ಯಾರ್ಥಿಗಳಿಗೆ ಹಲವು ವ್ಯತ್ಯಾಸಗಳಿವೆ. ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯಲು ಹಲವು ಕೊರತೆಗಳಿದ್ದವು. ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿಎಲ್ಲಾರೀತಿಯ ಅನುಕೂಲತೆಗಳಿದ್ದರೂ ಅವರು ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿಲ್ಲ. ಈ ಕಾಲಘಟ್ಟದ ವಿದ್ಯಾರ್ಥಿಗಳಲ್ಲಿ ಕಾಣಸಿಗುವ ಎರಡು ಬಹುಮುಖ್ಯ ಸಮಸ್ಯೆಗಳೆಂದರೆ ಏಕಾಗ್ರತೆ ಹಾಗೂ ಸೂಕ್ಷ್ಮ ಸಂವೇದನೆಗಳ ಕೊರತೆ. ಇವುಗಳನ್ನು ನಿವಾರಿಸಲು ವಿವಿಧ ಮೌಲ್ಯಯುತ ಸನ್ನಿವೇಶಗಳನ್ನು ಸೃಷ್ಟಿಸುವ ಕರ್ತವ್ಯ ಪ್ರತಿಯೊಬ್ಬ ಶಿಕ್ಷಕನದ್ದಾಗಿದೆ ಎಂದು ಖ್ಯಾತ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಇವರು ನುಡಿದರು.


ವಿವೇಕಾನಂದ ಪದವಿಪೂರ್ವ ಕಾಲೇಜಿನ ವೈದೇಹಿ ಸಭಾಂಗಣದಲ್ಲಿ ನಡೆದ ವಿವೇಕ ವಿಜಯ ಉಪನ್ಯಾಸ ಕಾರ್ಯಕ್ರಮದ ಎರಡನೆಯಅವಧಿಯು ರಾಷ್ಟ್ರ ರಕ್ಷಣಾ-ವಿವೇಕ ಶಿಕ್ಷಣ ಎಂಬ ಶೀರ್ಷಿಕೆಯಡಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ವಿದ್ಯಾಸಂಸ್ಥೆಗಳ ಹಾಗೂ ಪುತ್ತೂರಿನ ಆಸುಪಾಸಿನ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದದವರಿಗಾಗಿ ನಡೆಯಿತು. ಈ ಅವಧಿಯಲ್ಲಿ ಶಿಕ್ಷಕರನ್ನುದ್ದೇಶಿಸಿ ಚಕ್ರವರ್ತಿ ಸೂಲಿಬೆಲೆ ಇವರು ದಿಕ್ಸೂಚಿ ಮಾತುಗಳನ್ನಾಡುತ್ತಾ, ಶಿಕ್ಷಕರು ಪಠ್ಯ ಚಟುವಟಿಕೆಗಳಿಂದ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನಒತ್ತನ್ನು ನೀಡಬೇಕು. ಮೌಲ್ಯಗಳನ್ನು ಕಳೆದುಕೊಂಡು ನಿರಂತರವಾಗಿ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಇಂದಿನ ಸಮಾಜದಲ್ಲಿ ಶಿಕ್ಷಕನಾದವನು ಮೌಲ್ಯಗಳನ್ನು ಪುನರ್ ಸ್ಥಾಪಿಸಬೇಕಾದಆವಶ್ಯಕತೆ ಇದೆ.


ಈ ಕಾರ್ಯಕ್ರಮದ ವಿಶೇಷ ಅಭ್ಯಾಗತರಾಗಿ ಆಗಮಿಸಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿಇಲ್ಲಿಯ ನಿವೃತ್ತ ಪ್ರಾಂಶುಪಾಲರಾದ ಡಾ.ವರದರಾಜ ಚಂದ್ರಗಿರಿ ಇವರು ಮಾತನಾಡುತ್ತಾ “ದೇಶಭಕ್ತಿ, ನಾಡಪ್ರೇಮ ಮೊದಲಾದ ಮೌಲ್ಯಯುತ ವಿಚಾರಧಾರೆಗಳತ್ತ ಕೇಂದ್ರೀಕೃತವಾಗಿದ್ದ ನಮ್ಮ ಭಾರತೀಯ ಶಿಕ್ಷಣ ಪದ್ಧತಿಯು ಇಂದು ಆಧುನಿಕ ಪಾಶ್ಚಾತ್ಯ ಶಿಕ್ಷಣ ಪದ್ಧತಿ ಹಾಗೂ ತಂತ್ರಜ್ಞಾನದ ಪ್ರಭಾವಕ್ಕೊಳಗಾಗಿ ನೈತಿಕ ಮೌಲ್ಯಗಳನ್ನು ಕಳೆದುಕೊಂಡಿದೆ. ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ಇಂದು ಶಿಕ್ಷಕರು ಪೋಷಕರ ಸ್ಥಾನವನ್ನು ವಹಿಸುವ ಅಗತ್ಯತೆ ಇದೆ.

ನಾವೆಲ್ಲರೂಒಪ್ಪಿಕೊಂಡಿರುವ ಹಾಗೂ ಗೌರವಿಸುತ್ತಿರುವಗುರುತತ್ವ ಪರಂಪರೆಯನ್ನು ಮುಂದುವರಿಸುವ ಜೊತೆಗೆ ರಾಷ್ಟ್ರ ಶಿಕ್ಷಣದ ಮೂಲಕ ಜವಾಬ್ದಾರಿಯುತ ಯುವ ಜನತೆಯ ನಿರ್ಮಾಣದ ಹೊಣೆಗಾರಿಕೆ ಇಂದಿನ ಶಿಕ್ಷಕರ ಮೇಲಿದೆ” ಎಂದು ಹೇಳಿದರು.


ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರಾದ ಡಾ.ಕೆ.ಎನ್.ಸುಬ್ರಹ್ಮಣ್ಯ, ಅಧ್ಯಕ್ಷರಾದ ರವೀಂದ್ರ ಪಿ, ಕಾಲೇಜಿನ ಪ್ರಾಂಶುಪಾಲರಾದ ಎಂ.ದೇವಿಚರಣ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ನಿರ್ದೇಶಕರು, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ವಿದ್ಯಾಸಂಸ್ಥೆಗಳ ಹಾಗೂ ಪುತ್ತೂರಿನ ಆಸುಪಾಸಿನ ಶಿಕ್ಷಣ ಸಂಸ್ಥೆಗಳ ಶಿಕ್ಷಕ ವೃಂದದವರು, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಹಾಗೂ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ಪ್ರೇರಣಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ರವೀಂದ್ರ ಪಿ ಸ್ವಾಗತಿಸಿ, ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ವಂದಿಸಿದರು. ಉಪನ್ಯಾಸಕಿ ಹರ್ಷಿತ ಪಿ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here